ಕೊಲ್ಲಂ ಜಿಲ್ಲೆಯ ಪರವೂರ್'ನಲ್ಲಿ ನಡೆದ ಸಂಘಟನೆಯ ಕಾರ್ಯಕ್ರಮವೊಂದರಲ್ಲಿ ಶಶಿಕಲಾ ಮಾಡಿದ ಈ ಭಾಷಣ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಹಬ್ಬಿದೆ. ಜಾತ್ಯತೀತವಾದಿಗಳೆಂದು ಕರೆದುಕೊಳ್ಳುವ ದೇಶದ ಎಲ್ಲಾ ಬರಹಗಾರರಿಗೆ ಗೌರಿಗೆ ಆದ ಗತಿ ಆದೀತು. ಮೊದಲು ಯಾವುದಾದರೂ ಶಿವನ ದೇವಸ್ಥಾನಕ್ಕೆ ಹೋಗಿ ಮೃತ್ಯುಂಜಯ ಹೋಮ ಮಾಡಿಸಿಕೊಳ್ಳಿ ಎಂದು ಹಿಂದೂ ಐಕ್ಯವಾದಿ ಸಂಘಟನೆಯ ನಾಯಕಿ ಸಲಹೆ ನೀಡಿದ್ದಾರೆ.

ಕೊಲ್ಲಂ, ಕೇರಳ(ಸೆ. 10): ಗೌರಿ ಲಂಕೇಶ್ ಹತ್ಯೆಯಲ್ಲಿ ಕರ್ನಾಟಕ ಸರಕಾರದ ಕೈವಾಡ ಇದೆ ಎಂದು ಕೇರಳದ ಹಿಂದೂ ಸಂಘಟನೆಯೊಂದರ ನಾಯಕಿ ಶಂಕಿಸಿದ್ದಾರೆ. ಮುಂಬರುವ ಕರ್ನಾಟಕ ಚುನಾವಣೆಯಲ್ಲಿ ಕಾಂಗ್ರೆಸ್'ಗೆ ಸೋಲು ನಿಶ್ಚಿತವಾಗಿದ್ದು, ಈ ಭಯದಿಂದ ಅನುಕಂಪದ ವೋಟು ಗಿಟ್ಟಿಸಿಕೊಳ್ಳಲು ಪಕ್ಷವು ಗೌರಿಯನ್ನು ಬಲಿಪಶು ಮಾಡಿದೆ ಎಂದು ಹಿಂದೂ ಐಕ್ಯವಾದಿ ಸಂಘಟನೆಯ ಕೇರಳ ಅಧ್ಯಕ್ಷೆ ಕೆ.ಪಿ.ಶಶಿಕಲಾ ಆರೋಪಿಸಿದ್ದಾರೆ.

ಕೊಲ್ಲಂ ಜಿಲ್ಲೆಯ ಪರವೂರ್'ನಲ್ಲಿ ನಡೆದ ಸಂಘಟನೆಯ ಕಾರ್ಯಕ್ರಮವೊಂದರಲ್ಲಿ ಶಶಿಕಲಾ ಮಾಡಿದ ಈ ಭಾಷಣ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಹಬ್ಬಿದೆ. ಜಾತ್ಯತೀತವಾದಿಗಳೆಂದು ಕರೆದುಕೊಳ್ಳುವ ದೇಶದ ಎಲ್ಲಾ ಬರಹಗಾರರಿಗೆ ಗೌರಿಗೆ ಆದ ಗತಿ ಆದೀತು. ಮೊದಲು ಯಾವುದಾದರೂ ಶಿವನ ದೇವಸ್ಥಾನಕ್ಕೆ ಹೋಗಿ ಮೃತ್ಯುಂಜಯ ಹೋಮ ಮಾಡಿಸಿಕೊಳ್ಳಿ ಎಂದು ಹಿಂದೂ ಐಕ್ಯವಾದಿ ಸಂಘಟನೆಯ ನಾಯಕಿ ಸಲಹೆ ನೀಡಿದ್ದಾರೆ.

"ವಿರೋಧಿಗಳು ಎಷ್ಟೇ ವಿರೋಧ ಮಾಡಿದರೂ ಆರೆಸ್ಸೆಸ್ ಬೆಳೆಯುತ್ತಲೇ ಇದೆ. ಹತ್ಯೆ ಮಾಡಿ ಬೆಳೆಯುವ ಅಗತ್ಯ ಆರೆಸ್ಸೆಸ್'ಗೆ ಇಲ್ಲ," ಎಂದು ಕೆ.ಪಿ.ಶಶಿಕಲಾ ವಾದಿಸಿದ್ದಾರೆ.

"ಕೆಲವರು ವೋಟುಗಳಿಗಾಗಿ ಏನು ಬೇಕಾದರೂ ಮಾಡುತ್ತಾರೆ. ವೋಟಿಗಾಗಿ ಗೌರಿ ಲಂಕೇಶ್'ರನ್ನು ಬಲಿಪಶ ಮಾಡಿದವರು ಮುಂದಿನ ದಿನಗಳಲ್ಲಿ ನಿಮ್ಮನ್ನೂ ಬಿಡುವುದಿಲ್ಲ," ಎಂದು ಹಿಂದೂ ನಾಯಕಿ ಗುಡುಗಿದ್ದಾರೆ.

ಗೌರಿ ಲಂಕೇಶ್ ತಮ್ಮ ಜೀವಿತಾವಧಿಯ ಕೊನೆಯವರೆಗೂ ಬಲಪಂಥೀಯ ವಿಚಾರಧಾರೆಗಳನ್ನು ಕಟುವಾಗಿ ಟೀಕಿಸುತ್ತಾ ಬಂದವರಾಗಿದ್ದರು. ಅವರ ಹತ್ಯೆಯಲ್ಲಿ ಬಲಪಂಥೀಯರ ಕೈವಾಡ ಇದೆ ಎಂಬುದು ಸಹಜ ಶಂಕೆ. ಆದರೆ, ಕೆಲ ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ಕರೆ ತರುವ ಕೆಲಸದಲ್ಲಿ ಗೌರಿ ಲಂಕೇಶ್ ನಿರತರಾಗಿದ್ದ ಹಿನ್ನೆಲೆಯಲ್ಲಿ ಆ ಸಂಘಟನೆಯ ಒಂದು ವರ್ಗದ ವಿರೋಧ ಕಟ್ಟಿಕೊಂಡಿದ್ದರೆಂಬ ಮಾತಿದೆ. ಗೌರಿಯವರು ನಕ್ಸಲ್ ಹೋರಾಟದ ಬೆನ್ನೆಲುಬು ಮುರಿಯುತ್ತಿದ್ದಾರೆಂಬ ಭಾವನೆ ನಕ್ಸಲರಲ್ಲಿತ್ತು. ಹೀಗಾಗಿ, ಅವರಲ್ಲೇ ಯಾರೋ ಈ ಹತ್ಯೆ ಮಾಡಿಸಿರಬಹುದು ಎಂಬ ಶಂಕೆಗಳೂ ವ್ಯಕ್ತವಾಗುತ್ತಿವೆ.

ಹತ್ಯೆ ಪ್ರಕರಣದ ತನಿಖೆ ಹೊತ್ತಿರುವ ಎಸ್'ಐಟಿ ತಂಡವು ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ಇದಕ್ಕಾಗಿ ಆಂಧ್ರದ ನಕ್ಸಲ್ ಸ್ಪೆಷಲಿಸ್ಟ್ ಪೊಲೀಸರ ಸಹಾಯವನ್ನೂ ಪಡೆದುಕೊಳ್ಳಲಾಗುತ್ತಿದೆ.