ಧರ್ಮವನ್ನು ಆಧರಿಸಿ ಇರಿಸಿಕೊಂಡು ಮತ ಯಾಚನೆ ಮಾಡಿದ್ದ ಶಾಸಕರೋರ್ವರನ್ನು ಇದೀಗ ಅನರ್ಹಗೊಳಿಸಲಾಗಿದೆ. 

ಕೊಚ್ಚಿ: 2016 ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಧರ್ಮದ ಆಧಾರದ ಮೇಲೆ ಮತಯಾಚಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್‌ (ಐಯುಎಂಎಲ್‌)ನ ಶಾಸಕರೊಬ್ಬರನ್ನು ಕೇರಳ ಹೈಕೋರ್ಟ್‌ ಶುಕ್ರವಾರ ಅನರ್ಹಗೊಳಿಸಿದೆ.

ಕೆ.ಎಂ.ಶಾಜಿ ಅನರ್ಹಗೊಂಡ ಶಾಸಕರಾಗಿದ್ದು, ಅಳಿಕ್ಕೋಡ್‌ ವಿಧಾನಸಭೆ ಕ್ಷೇತ್ರದಿಂದ 2016ರಲ್ಲಿ ಗೆಲುವು ದಾಖಲಿಸಿದ್ದರು. ಶಾಜಿ ವಿರುದ್ಧ ಸ್ಪರ್ಧಿಸಿದ್ದ ಎಲ್‌ಡಿಎಫ್‌ ಅಭ್ಯರ್ಥಿ ಎಂ.ವಿ. ನಿಕೇಶ್‌ ಕುಮಾರ್‌ ಸಲ್ಲಿಸಿದ್ದ ಅರ್ಜಿಯೊಂದನ್ನು ವಿಚಾರಣೆ ನಡೆಸಿದ ಕೋರ್ಟ್‌, ಶಾಸಕತ್ವವನ್ನು ಅನರ್ಹಗೊಳಿಸಿ ತೀರ್ಪು ಪ್ರಕಟಿಸಿದೆ. ಐಯುಎಂಎಲ್‌ ಕಾಂಗ್ರೆಸ್‌ ನೇತೃತ್ವದ ವಿಪಕ್ಷ ಯುಡಿಎಫ್‌ನ ಮೈತ್ರಿ ಪಕ್ಷವಾಗಿದೆ.

‘ಮುಸ್ಲಿಂ ಸಮುದಾಯಕ್ಕೆ ಸೇರಿದವರಾದ ಶಾಜಿ ಚುನಾವಣೆಯಲ್ಲಿ ಧರ್ಮದ ಆಧಾರದ ಮೇಲೆ ಮತಯಾಚಿಸಿದ್ದರು. ಮುಸ್ಲಿಂ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗೆ ಮತಹಾಕುವಂತೆ ಕರಪತ್ರಗಳನ್ನು ಹಂಚಿದ್ದರು’ ಎಂದು ನಿಕೇಶ್‌ ಆರೋಪಿಸಿದ್ದರು.