ಕೇರಳದ ಮೀನು ಮಾರುವ ಹುಡುಗಿ ಎಂದೇ ಪ್ರಸಿದ್ಧಿಯಾಗಿದ್ದ ಹನಾನ್ ಅಹ್ಮದ್ ಅವರು ಅಪಘಾತಕ್ಕೀಡಾಗಿದ್ದಾರೆ. ಕಾರು ಅಪಘಾತದಲ್ಲಿ ಗಾಯಗೊಂಡು ಎರ್ನಾಕುಲಮ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ತಿರುವನಂತಪುರ : ಕಾಲೇಜು ಸಮವಸ್ತ್ರ ಧರಿಸಿಕೊಂಡು ಮೀನು ಮಾರುವ ಮೂಲಕ ಸುದ್ದಿಯಾಗಿದ್ದ ಕೇರಳದ ಹನಾನ್ ಅಹ್ಮದ್ ಅಪಘಾತಕ್ಕೆ ಈಡಾಗಿದ್ದಾರೆ.
ಕಾರ್ಯಕ್ರಮವನ್ನು ಮುಗಿಸಿಕೊಂಡು ಹಿಂದಿರುಗುತ್ತಿದ್ದ ವೇಳೆ ಅವರು ಪ್ರಯಾಣ ಮಾಡುತ್ತಿದ್ದ ಕಾರು ಅಪಘಾತಕ್ಕೆ ಈಡಾಗಿದೆ.
ಕೇರಳದ ತ್ರಿಶ್ಶೂರ್ ನ ಕೊಡಂಗಲ್ಲೂರಿನಲ್ಲಿ ಈ ಘಟನೆ ನಡೆದಿದೆ. ರಸ್ತೆಯಲ್ಲಿ ಬರುತ್ತಿದ್ದ ವೇಳೆ ವಾಹನವೊಂದು ಅಡ್ಡಾದಿಡ್ಡಿಯಾಗಿ ಬಂದಿದ್ದು ಅದನ್ನು ತಪ್ಪಿಸಲು ಹೋಗಿ ಎಲೆಕ್ಟ್ರಿಕ್ ಕಂಬಕ್ಕೆ ಕಾರು ಡಿಕ್ಕಿಯಾಗಿದೆ ಎಂದು ಹನಾನ್ ಪ್ರತಿಕ್ರಿಯಿಸಿದ್ದಾರೆ.
ಅಪಘಾತದಲ್ಲಿ ಸ್ಪೈನ್ ಸ್ಪ್ರಾಕ್ಚರ್ ಆಗಿದ್ದು, ಎರ್ನಾಕುಲಮ್ ನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಆಕೆಗೆ ಆಸ್ಪತ್ರೆಯಲ್ಲಿ ಪರೀಕ್ಷೆ ಮುಂದುವರಿದಿದ್ದು, ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.
ಕಳೆದ ತಿಂಗಳು ರಸ್ತೆಯಲ್ಲಿ ಕಾಲೇಜು ಸಮವಸ್ತ್ರ ಧರಿಸಿ ಸುಂದರವಾಗಿ ಮೇಕಪ್ ಹಾಕಿಕೊಂಡು ಮೀನುಮಾರುವ ಮೂಲಕ ಹನಾನ್ ಸಾಕಷ್ಟು ಸುದ್ದಿಯಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದ್ದರು.
ಇನ್ನು ಕೆಲ ದಿನಗಳ ಹಿಂದಷ್ಟೇ ಕೇರಳದಲ್ಲಿ ಉಂಟಾದ ಪ್ರವಾಹಕ್ಕೆ 1 ಲಕ್ಷ ರು. ನೆರವು ನೀಡುವ ಮೂಲಕ ಮತ್ತೆ ಸುದ್ದಿಯಾಗಿದ್ದರು.
