ಕೇರಳದ ಚೆಂಗನೂರು ಸಂಪೂರ್ಣ ಜಲಾವೃತಗೊಂಡಿದ್ದು, ಪಾಲಕ್ಕಾಡ್ ನಲ್ಲಿಯೂ ರಸ್ತೆ, ಸೇತುವೆ ಕೊಚ್ಚಿ ಹೋಗಿದೆ.  ತಾತ್ಕಾಲಿಕ ಸೇತುವೆ ಮೂಲಕ ನಿರಾಶ್ರಿತರನ್ನ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. 

ಕೊಚ್ಚಿ[ಆ.20]: ಕೇರಳದಲ್ಲಿ ವರುಣ ಸ್ವಲ್ಪ ಬಿಡುವು ನೀಡಿದ್ದು, ರಕ್ಷಣಾ ಕಾರ್ಯಾಚರಣೆ ಸಮಾರೋಪಾದಿಯಲ್ಲಿ ಸಾಗುತ್ತಿದೆ. ಸ್ಥಗಿತವಾಗಿದ್ದ ರೈಲು ಪುನಾರಂಭವಾಗಿದ್ದು, ಇನ್ನೆರಡು ದಿನದಲ್ಲಿ ಕೊಚ್ಚಿಯಲ್ಲಿ ವಿಮಾನ ಹಾರಾಟ ಆರಂಭವಾಗಲಿದೆ.

ಕಳೆದ 12 ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಬಹುತೇಕ ಜಿಲ್ಲೆಗಳು ಜಲಾವೃತಗೊಂಡಿದೆ. ರಕ್ಷಣೆಗಾಗಿ ಜನರು ಮೊರೆ ಇಡುತ್ತಿರುವ ದೃಶ್ಯ ಎಂತಹವರ ಮನ ಕಲಕುವಂತಿದೆ. ರಕ್ಷಣಾ ಸಿಬ್ಬಂದಿ ಈವರಗೆ 3,400ಕ್ಕೂ ಹೆಚ್ಚು ಜನರನ್ನು ರಕ್ಷಿಸಿದ್ದು ರಕ್ಷಣಾ ಕಾರ್ಯ ಸಮಾರೋಪಾದಿಯಲ್ಲಿ ನಡೆಯುತ್ತಿದೆ. 

ಕೇರಳದ ಚೆಂಗನೂರು ಸಂಪೂರ್ಣ ಜಲಾವೃತಗೊಂಡಿದ್ದು, ಪಾಲಕ್ಕಾಡ್ ನಲ್ಲಿಯೂ ರಸ್ತೆ, ಸೇತುವೆ ಕೊಚ್ಚಿ ಹೋಗಿದೆ. ತಾತ್ಕಾಲಿಕ ಸೇತುವೆ ಮೂಲಕ ನಿರಾಶ್ರಿತರನ್ನ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಕೊಚ್ಚಿ, ಅಳುವಾ, ಇಡುಕ್ಕಿಯ ವಂಡಿಪೆರಿಯಾರ್ ಪ್ರದೇಶಗಳಲ್ಲಿ ಹೆಲಿಕಾಪ್ಟರ್ ನಲ್ಲಿ ಪ್ರವಾಹಪೀಡಿತರಿಗೆ ಆಹಾರ ಪೊಟ್ಟಣ, ಮೆಡಿಸಿನ್, ಅಗತ್ಯ ವಸ್ತುಗಳನ್ನು ಪೂರೈಸಲಾಗುತ್ತಿದೆ. 

ತಿರುವನಂತಪುರದಲ್ಲಿ ರೈ ಸಂಚಾರ ಆರಂಭ
ತಿರುವನಂತಪುರಂ ಮತ್ತು ಎರ್ನಾಕುಲಂ ನಡುವಿನ ರೈಲು ಸಂಚಾರ ಮತ್ತೆ ಆರಂಭವಾಗಿದೆ. ತಿರುವನಂತಪುರದಿಂದ ಚೆನ್ನೈ, ಮುಂಬೈ, ಬೆಂಗಳೂರು ಮತ್ತು ದೆಹಲಿ ಮಾರ್ಗದಲ್ಲಿ ರೈಲು ಸಂಚಾರ ಶುರುವಾಗಿದೆ. ಮಳೆ ನಿಂತರೂ ಮನೆಯಿಲ್ಲದವರಿಗೆ ಪುನರ್ವಸತಿ ಕಲ್ಪಿಸುವುದು ರೋಗರುಜಿನಗಳನ್ನು ತಡೆಗಟ್ಟುವುದು ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ.