Asianet Suvarna News Asianet Suvarna News

ಮಳೆಯೇನೋ ತಗ್ಗಿತು; ಈಗಿದೆ ಸ್ವಚ್ಚ ಮಾಡುವ ಸವಾಲು!

ಕೇರಳದಲ್ಲಿ ಪ್ರವಾಹ ತ್ಯಾಜ್ಯ ಸ್ವಚ್ಛತಾ ಕಾರ್ಯಕ್ಕೆ 12 ಸಾವಿರ ಸಿಬ್ಬಂದಿ ನಿಯೋಜನೆ | ಪ್ರವಾಹ ತಗ್ಗಿದೆ, ಯಥಾಸ್ಥಿತಿಗೆ ಮರಳುತ್ತಿರುವ ಜನಜೀವನ | ರಕ್ಷಣಾ ಕಾರ್ಯ ಶುರು 

Kerala Flood: Cleaning process begins
Author
Bengaluru, First Published Aug 23, 2018, 10:14 AM IST

ತಿರುವನಂತಪುರ (ಆ. 23):  ಶತಮಾನದ ಭೀಕರ ಮಳೆ, ಪ್ರವಾಹ ಹಾಗೂ ಭೂಕುಸಿತದಿಂದ ನಲುಗಿದ ಕೇರಳದಲ್ಲಿ ಅಪಾಯದಲ್ಲಿ ಸಿಲುಕಿದವರ ರಕ್ಷಣಾ ಕಾರ್ಯ ಮುಗಿಯುವ ಹಂತಕ್ಕೆ ಬಂದಿದೆ.ಇದರ ಬೆನ್ನಲ್ಲೇ ಮನೆಗಳು ಹಾಗೂ ಸಾರ್ವಜನಿಕ ಸ್ಥಳಗಳ ಸ್ವಚ್ಛತೆಯನ್ನು ರಾಜ್ಯ ಸರ್ಕಾರ ಆರಂಭಿಸಿದೆ.

ಆರೋಗ್ಯ ಹಾಗೂ ಪೌರಾಡಳಿತ ಇಲಾಖೆಗಳ 3000 ದಳಗಳು ಮನೆಗಳು ಹಾಗೂ ಸಾರ್ವಜನಿಕ ಸ್ಥಳಗಳ ಸ್ವಚ್ಛತಾ ಕಾರ್ಯವನ್ನು ಆರಂಭಿಸಿವೆ. ಮಂಗಳವಾರ ಒಂದೇ ದಿನ 12 ಸಾವಿರ ಮನೆಗಳನ್ನು ಶುಚಿಗೊಳಿಸಲಾಗಿದೆ. ಬುಧವಾರವೂ ಕಾರ್ಯಾಚರಣೆ ಮುಂದುವರಿದಿದೆ. 12 ಸಾವಿರ ಸ್ವಯಂಸೇವಕರು ಈ ಕಾರ್ಯದಲ್ಲಿ ಭಾಗಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ವಚ್ಛತಾ ಕಾರ್ಯಾಚರಣೆ ವೇಳೆ ಗೋವುಗಳ ಮೃತದೇಹಗಳು ಸಿಗುತ್ತಿವೆ. ಒಂದೇ ದಿನ 3000 ಗೋವುಗಳ ಕಳೇಬರ ಸಿಕ್ಕಿದ್ದು, ಅವನ್ನು ಹೂಳಲಾಗಿದೆ. ಆ.8 ರಿಂದ ಕೇರಳವನ್ನು ನಡುಗಿಸಿದ್ದ ಪ್ರವಾಹದಲ್ಲಿ ಒಟ್ಟು 231 ಮಂದಿ ಸಾವಿಗೀಡಾಗಿದ್ದು, 32 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ. 14.50 ಲಕ್ಷ ಮಂದಿ ನಿರಾಶ್ರಿತರಾಗಿದ್ದು, 3879 ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.

ಈ ಪ್ರವಾಹದಲ್ಲಿ ಅತಿ ಹೆಚ್ಚು ಹೊಡೆತ ಬಿದ್ದಿರುವುದು ಎರ್ನಾಕುಲಂ ಜಿಲ್ಲೆಯಲ್ಲಿ. ಅಲ್ಲಿ 5.32 ಲಕ್ಷ ಸಂತ್ರಸ್ತರು 850 ಶಿಬಿರಗಳಲ್ಲಿ ನೆಲೆಸಿದ್ದಾರೆ. ಕೇರಳದ ಬಹುತೇಕ ಭಾಗಗಳಲ್ಲಿ ಪ್ರವಾಹದ ನೀರು ಇಳಿಕೆಯಾಗಿದೆ. ಆದರೆ ಅಲಪುಳ ಜಿಲ್ಲೆಯ ಕುಟ್ಟನಾಡಿನ ನದಿ ದಂಡೆಯಲ್ಲಿ ನೀರು ಇನ್ನೂ ಹಾಗೆಯೇ ಇದೆ. ಈ ಮಧ್ಯೆ ಬಿಎಸ್ ಎಫ್‌ನ 162 ನೇ ಬೆಟಾಲಿಯನ್ ಕೇರಳ ಪ್ರವಾಹ ವೇಳೆ 40 ಸಿಬ್ಬಂದಿ ನಿಯೋಜಿಸಿ 500 ಮಂದಿಯನ್ನು ಈವರೆಗೆ ರಕ್ಷಣೆ ಮಾಡಿದೆ.

ಮನೆಗಳಲ್ಲಿ ಆರು ಅಡಿ ಕೆಸರು:

ಪ್ರವಾಹ ಇಳಿಮುಖವಾಗುತ್ತಿದ್ದಂತೆ ನಿರಾಶ್ರಿತ ಶಿಬಿರಗಳಲ್ಲಿರುವ ಜನ ತಮ್ಮತಮ್ಮ ಮನೆಗಳಿಗೆ ಮರಳುತ್ತಿದ್ದಾರೆ. ಮನೆಯಲ್ಲಿ ಹಾಗೂ ಕಪಾಟುಗಳಲ್ಲಿ ತುಂಬಿರುವ ಆರು ಅಡಿಯಷ್ಟು ಕೆಸರು ಅವರು ಕಂಗಾಲಾಗುವಂತೆ ಮಾಡಿದೆ. ಜತೆಗೆ ಫ್ರಿಜ್, ಟೀವಿ ಹಾಗೂ ಇನ್ನಿತರೆ ಎಲೆಕ್ಟ್ರಾನಿಕ್ ಉಪಕರಣಗಳು ಎಲ್ಲೆಂದರಲ್ಲಿ ಬಿದ್ದಿದ್ದು, ಬಳಸದಂತಾಗಿವೆ. ಮಕ್ಕಳ ಪುಸ್ತಕ ಹಾಗೂ ಪ್ರಮಾಣಪತ್ರಗಳು ಕೊಚ್ಚಿಹೋಗಿವೆ. ಆಧಾರ್ ಕಾರ್ಡ್, ರೇಷನ್ ಕಾರ್ಡ್ ಕೂಡ ನೀರು ಪಾಲಾಗಿವೆ.

ಕುಡಿಯಲು ನೀರು ಸಿಗುತ್ತಿಲ್ಲ:

ಮನೆಗೆ ಮರಳುತ್ತಿರುವ ಸಂತ್ರಸ್ತರಿಗೆ ಕುಡಿಯುವ ನೀರೂ ಸರಿಯಾಗಿ ಲಭಿಸುತ್ತಿಲ್ಲ. ಕೇರಳದ ಸಾಕಷ್ಟು ಜನ ಬಾವಿಯನ್ನು ಅವಲಂಬಿಸಿದ್ದಾರೆ. ಆದರೆ ಪ್ರವಾಹದಿಂದಾಗಿ ಬಾವಿ ನೀರೆಲ್ಲಾ ಕೆಸರುಮಯವಾಗಿದೆ. ಹೀಗಾಗಿ ನೀರಿನ ಕೊರತೆ ಎದುರಾಗಿದೆ. ಕೊಳವೆ ಮೂಲಕ ನೀರು ಪೂರೈಕೆ ಇನ್ನಷ್ಟೇ ಆರಂಭವಾಗಬೇಕಿದೆ.

ದೇಗುಲ ಸ್ವಚ್ಛಗೊಳಿಸಿದ ಮುಸ್ಲಿಮರು:

ಮಲಪ್ಪುರಂ ಹಾಗೂ ವಯನಾಡು ಜಿಲ್ಲೆಗಳಲ್ಲಿ ಮುಸ್ಲಿಂ ಯುವಕರ ಗುಂಪೊಂದು ದೇಗುಲಗಳನ್ನು ಸ್ವಚ್ಛಗೊಳಿಸುವ ಮೂಲಕ ಸಮನ್ವಯತೆ ಮೆರೆದಿದೆ. 

Follow Us:
Download App:
  • android
  • ios