ಭಾರೀ ಮಳೆ ಮತ್ತು ಪ್ರವಾಹದಿಂದ ಇನ್ನೂ ಚೇತರಿಸಿಕೊಳ್ಳುತ್ತಿರುವ ಕೇರಳಿಗರಿಗೆ ಇದೀಗ ಮತ್ತೊಂದು ರೀತಿಯ ಆತಂಕ ಎದುರಾಗಿದೆ. 

ತಿರುವನಂತಪುರ: ಭಾರೀ ಮಳೆ ಮತ್ತು ಪ್ರವಾಹದಿಂದ ಇನ್ನೂ ಚೇತರಿಸಿಕೊಳ್ಳುತ್ತಿರುವ ಕೇರಳಿಗರಿಗೆ ಇದೀಗ ಸೋಂಕು ರೋಗವೊಂದು ಮಾರಣಾಂತಿಕವಾಗಿ ಅಪ್ಪಳಿಸಿದೆ. ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಹಲವೆಡೆ ಇಲಿ ಜ್ವರ ಕಾಣಿಸಿಕೊಂಡಿದ್ದು, ಇದುವರೆಗೆ 
15 ಜನರನ್ನು ಬಲಿ ಪಡೆದಿದೆ. ಈ ಪೈಕಿ 8 ಜನ ಕಳೆದ 2 ದಿನಗಳಲ್ಲಿ ಸಾವನ್ನಪ್ಪಿದ್ದಾರೆ. ಇದು ರಾಜ್ಯದ ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ. ಆದರೆ ರಾಜ್ಯ ಸರ್ಕಾರ, ಜನತೆ ಆತಂಕ ಪಡುವುದು ಬೇಡ. 

ಜನತೆ ರೋಗ ಹಬ್ಬದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು, ಜೊತೆಗೆ ಎಲ್ಲಾ ಆಸ್ಪತ್ರೆಗಳಲ್ಲಿ ರೋಗಕ್ಕೆ ಚಿಕಿತ್ಸೆ ನೀಡಲು ಅಗತ್ಯವಾದ ಔಷಧಿಗಳನ್ನು ರವಾನಿಸಲಾಗಿದೆ. ಎಲ್ಲಾ ಆಸ್ಪತ್ರೆಗಳಲ್ಲೂ ಇಲಿ ಜ್ವರ ಪೀಡಿತರಿಗೆ ಪ್ರತ್ಯೇಕ ವಾರ್ಡ್ ವ್ಯವಸ್ಥೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದೆ. 

ಇಲಿಗಳ ಕಡಿತದಿಂದ ಇಲ್ಲವೇ, ಇಲಿಗಳಿಗೆ ಬಂದಿರುವ ಜ್ವರ ವೈರಾಣು ರೂಪದಲ್ಲಿ ಮನುಷ್ಯರಿಗೆ ಹಬ್ಬಿ, ಮಾನವರಲ್ಲೂ ಇಲಿ ಜ್ವರ ಕಾಣಿಸಿಕೊಳ್ಳುತ್ತದೆ. ಪ್ರವಾಹದಂಥ ಸ್ಥಿತಿಯಲ್ಲಿ ರೋಗ ಅತ್ಯಂತ ವೇಗವಾಗಿ ಒಂದೆಡೆಯಿಂದ ಇನ್ನೊಂದೆಡೆಗೆ ಹಬ್ಬುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ರಾಜ್ಯದಲ್ಲಿ ಕನಿಷ್ಠ 20 ಲಕ್ಷ ಜನ ಪ್ರವಾಹದ ನೀರಿನ ಸಂಪರ್ಕಕ್ಕೆ ಬಂದಿರುವ ಕಾರಣ ಅವರು ಕೆಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಉಚಿತ ಎಂದು ರಾಜ್ಯದ ವೈದ್ಯಕೀಯ ಇಲಾಖೆ ಸಲಹೆ ನೀಡಿದೆ. ಕೆಲ ತಿಂಗಳ ಹಿಂದಷ್ಟೇ ಕೇರಳದಲ್ಲಿ ಬಾವಲಿ ಜ್ವರ ಭಾರೀ ಪ್ರಮಾಣದಲ್ಲಿ ಹಬ್ಬಿ, ೧೫ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿತ್ತು.