ತಿರುವನಂತಪುರಂ[ಮಾ.27]: ಸರ್ಫ್ ಎಕ್ಸಲ್ ಹೋಳಿ ಹಬ್ಬದ ಸಂದರ್ಭದಲ್ಲಿ ಹೊಸ ಜಾಹೀರಾತೊಂದನ್ನು ಜಾರಿಗೊಳಿಸಿದ್ದು, ಇದು ಭಾರೀ ಚರ್ಚೆ ಹುಟ್ಟು ಹಾಕಿತ್ತು. ಈ ಜಾಹೀರಾತಿನ ಮೂಲಕ Hindustan Unilever 'ಬಣ್ಣದಿಂದಲೂ ಸಮಾಜ ಒಂದಾಗಬಹುದು’ ಎಂಬ ಸಂದೇಶ ನೀಡಿತ್ತು. ಆದರೆ ಹಲವರಿಗೆ ಈ ಜಾಹೀರಾತು ಇಷ್ಟವಾಗಿರಲಿಲ್ಲ ಹೀಗಾಗಿ ಇದನ್ನು ರದ್ದು ಮಾಡಬೇಕೆಂಬ ಕೂಗು ಪ್ರತಿಧ್ವನಿಸಿತ್ತು. ಟ್ವಿಟರ್ ನಲ್ಲೂ #BoycottSurfExcel ಎಂಬ ಹ್ಯಾಷ್ ಟ್ಯಾಗ್ ಟ್ರೆಂಡ್ ಆಗಿತ್ತು. ಆದರೀಗ ಇಂತಹುದೇ ನೈಜ ಘಟನೆಯೊಂದು ನಡೆದಿದೆ. ಕಾಲೇಜೊಂದರ ವಿದ್ಯಾರ್ಥಿಗಳು ಹೋಳಿ ಸಂಭ್ರಮದ ವೇಳೆ ಭಾವೈಕ್ಯತೆ ಮೆರೆದಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಹೌದು ಕೇರಳದ ಮುಲ್ಲಂಪುರದ ಸಿಪಿಎ ಕಾಲೇಜ್ ಆಫ್ ಆರ್ಟ್ಸ್ ಆ್ಯಂಡ್ ಸೈನ್ಸ್ ನ ವಿದ್ಯಾರ್ಥಿಗಳು ಹೋಳಿ ಸಂಭ್ರಮದ ನಡುವೆ ಮುಸ್ಲಿಂ ಯುವಕನನ್ನು ಮಸೀದಿವರೆಗೆ ಕರೆದೊಯ್ದಿದ್ದಾರೆ. ವಿದ್ಯಾರ್ಥಿಗಳು ರಸ್ತೆ ಬದಿಯಲ್ಲಿ ಬಣ್ಣ ಎರಚಿ ಹೋಳಿ ಸಂಭ್ರಮಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಮುಸ್ಲಿಂ ಯುವಕನೊಬ್ಬ ಅದೇ ದಾರಿ ಮೂಲಕ ಮಸೀದಿಗೆ ತೆರಳುತ್ತಿದ್ದ. ಸಾಮಾಜಿಕ ಜಾಲಾತಾಣಗಳಲ್ಲಿ ಈ ದೃಶ್ಯದ ಫೋಟೋ ಒಂದು ವೈರಲ್ ಆಗುತ್ತಿದ್ದು, ಇದರಲ್ಲಿ ಹೋಳಿಯಾಡುತ್ತಿದ್ದ ವಿದ್ಯಾರ್ಥಿಗಳು ಮುಸ್ಲಿಂ ಯುವಕನ ಸುತ್ತ ವೃತ್ತಾಕಾರದಂತೆ ನಿಂತು ಆತನ ಬಟ್ಟೆಗೆ ಬಣ್ಣ ತಾಗದಂತೆ ಜಾಗೃತೆ ವಹಿಸಿ ಮಸೀದಿಯೆಡೆ ಹೋಗುತ್ತಿರುವುದು ಕಂಡು ಬರುತ್ತದೆ. 

ಕಾಲೇಜು ಆಡಳಿತ ಮಂಡಳಿ ನೀಡಿರುವ ಮಾಹಿತಿ ಅನ್ವಯ ವಿದ್ಯಾರ್ಥಿಗಳು ತರಗತಿ ಮುಗಿದ ಬಳಿಕ ಹೋಳಿ ಹಬ್ಬ ಆಚರಿಸುತ್ತಿದ್ದರು. ದ್ವಿತೀಯ ವರ್ಷದ ಜೀವಶಾಸ್ತ್ರದ ವಿದ್ಯಾರ್ಥಿ ಮೊಹಮ್ಮದ್ ಸುಹೈಲ್ ಮಸೀದಿಗೆ ತೆರಳಲು ಬಿಳಿ ಬಣ್ಣದ ಬಟ್ಟೆ ಧರಿಸಿದ್ದ. ಈ ವೇಳೆ ಇತರ ವಿದ್ಯಾರ್ಥಿಗಳ ಗುಂಪೊಂದು ಆತನನ್ನು ಸುರಕ್ಷಿತವಾಗಿ ಮಸೀದಿಗೆ ಕರೆದೊಯ್ದಿದೆ ಎಂದಿದ್ದಾರೆ.

ಪತ್ರಿಕೆಯೊಂದಕ್ಕೆ ಪ್ರತಿಕ್ರಿಯಿಸಿರುವ ಸುಹೈಲ್ 'ಸಂಜೆ ನಾಲ್ಕು ಗಂಟೆಯಾಗಿತ್ತು. ನನ್ನ ತರಗತಿಯ ವಿದ್ಯಾರ್ಥಿಗಳೆಲ್ಲಾ ಹೋಳಿ ಆಡುತ್ತಿದ್ದರು. ನಾನು ಸಂಜೆ ನಮಾಜ್ ಮಾಡಲು ಮಸೀದಿಗೆ ಹೋಗಬೇಕಿತ್ತು. ಆದರೆ ಬಣ್ಣವೆರಚಿ ಸಂಭ್ರಮಿಸುತ್ತಿದ್ದ ವಿದ್ಯಾರ್ಥಿಗಳ ನಡುವೆ ಬಣ್ಣದಿಂದ ತಪ್ಪಿಸಿಕೊಂಡು ಹೋಗುವುದು ಅಸಾಧ್ಯವಾಗಿತ್ತು. ಆದರೆ ನನ್ನ ಸಹಪಾಠಿ ಅಜಿತ್ ನನ್ನ ಸಮಸ್ಯೆ ಅರಿತು ಇತರ ವಿದ್ಯಾರ್ಥಿಗಳ ಸಹಾಯದಿಂದ ಬಣ್ಣ ತಾಗದಂತೆ ನನ್ನನ್ನು ಮಸೀದಿಗೆ ತಲುಪಿಸಿದ್ದಾರೆ' ಎಂದಿದ್ದಾರೆ.

ಇಷ್ಟೇ ಅಲ್ಲದೇ 'ನಾನು ಸರ್ಫ್ ಎಕ್ಸಲ್ ಜಾಹೀರಾತು ನೋಡಿದ್ದೆ. ಆದರೆ ಅಂತಹ ಪರಿಸ್ಥಿತಿ ಎದುರಿಸಿರಲಿಲ್ಲ. ಆದರೆ ಹೋಳಿ ಆಡುತ್ತಿದ್ದ ವಿದ್ಯಾರ್ಥಿಗಳು ಬಂದು ನನಗೆ ಸಹಾಯ ಮಾಡಿದ್ದಾರೆ. ಇತರ ವಿದ್ಯಾರ್ಥಿಗಳು ಕೂಡಾ ನಾನು ಮಸೀದಿಗೆ ತೆರಳುವವರೆಗೆ ಬಣ್ಣ ಎಸೆಯುವುದನ್ನೂ ನಿಲ್ಲಿಸಿದ್ದಾರೆ. ನನ್ನ ಬಳಿ ಕ್ಯಾಮರಾ ಇತ್ತು ಹೀಗಾಗಿ ಈ ದೇಶ್ಯ ಸೆರೆ ಹಿಡಿಯಲು ಸಾಧ್ಯವಾಯ್ತು. ಹಿಂದೂ ಸಹೋದರರ ಈ ನಡೆ ನೋಡಿ ನನಗೆ ಬಹಳ ಖುಷಿಯಾಯ್ತು' ಎಂದಿದ್ದಾರೆ ಸುಹೈಲ್.