ತಿರುವನಂತಪುರಂ (ಆ. 24): ಕೇರಳ ಶತಮಾನದ ಮಹಾಮಳೆಗೆ ತತ್ತರಿಸಿದೆ. ನೂರಾರು ಜನರು ಸಾವನ್ನಪ್ಪಿದ್ದಾರೆ. ಉಳಿದವರು ನೆಲೆ ಇಲ್ಲದೆ, ಭೂಮಿ ಇಲ್ಲದೆ ಅತಂತ್ರರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೇರಳ ಮುಖ್ಯಮಂತ್ರಿಗಳು ಪ್ರವಾಹಕ್ಕೆ ಕಾರಣ ಏನು? ಸಂಪೂರ್ಣ ನೆಲಸಮವಾಗಿರುವ ಕೇರಳದ ಪುನರ್ ನಿರ್ಮಾಣ ಹೇಗೆ? ಕೇಂದ್ರದ ನಿಲುವಿನ ಬಗ್ಗೆ ತಮ್ಮ ಅಭಿಪ್ರಾಯ ಏನು ಎಂಬ ಬಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್ ಮತ್ತು ದಿ ಎಕಾನಾಮಿಕ್ ಟೈಮ್ಸ್‌ನೊಂದಿಗೆ ಮಾತನಾಡಿದ್ದಾರೆ. ಅದರ ಆಯ್ದ ಭಾಗ ಇಲ್ಲಿದೆ.

 ಪ್ರವಾಹ ಪರಿಹಾರ ಮತ್ತು ಪುನರ್‌ವಸತಿ ಕಾರ್ಯ ಹೇಗೆ ನಡೆಯುತ್ತಿದೆ?
ಇದು ಕೇರಳ ಇತಿಹಾಸದಲ್ಲಿಯೇ ಅತ್ಯಂತ ಕೆಟ್ಟ ನೈಸರ್ಗಿಕ ವಿಕೋಪ. ರಾಜ್ಯದ 14 ಜಿಲ್ಲೆಗಳಲ್ಲಿ 12 ಜಿಲ್ಲೆಗಳು ಸಂಪೂಣ ಹಾನಿಗೊಳಗಾಗಿವೆ. ನಷ್ಟದ ಪ್ರಮಾಣ ಊಹೆಗೂ ನಿಲುಕದು. ಜನರು ಬದುಕು ಕಳೆದುಕೊಂಡಿದ್ದಾರೆ, ನೆಲೆ ಕಳೆದುಕೊಂಡಿದ್ದಾರೆ. ಸರ್ಕಾರ ಈಗಾಗಲೇ ರಕ್ಷಣಾ ಕಾರ್ಯಕ್ಕೆ ಮುಂದಾಗಿದೆ. ಈ ಪ್ರಕ್ರಿಯೆಯಲ್ಲಿ ಸ್ವಾರ್ಥರಹಿತರಾಗಿ ಎಲ್ಲರೂ ಕೈಜೋಡಿಸಿದ್ದಾರೆ.

ರಕ್ಷಣೆ ಕಾರ್ಯ ಸಂಪೂರ್ಣಗೊಂಡಿದೆ. ಇದೀಗ ನಿರಾಶ್ರಿತರಿಗೆ ವಸತಿ ಒದಗಿಸಬೇಕಾದ ಸಮಯ. ಮರುನಿರ್ಮಾಣ ಮಾಡುವ ಬದಲಿಗೆ ನೂತನ ಕೇರಳವನ್ನೇ ಸೃಷ್ಟಿಸುವತ್ತ ನಾವು ಗಮನಹರಿಸಬೇಕಿದೆ. ಅದಕ್ಕಾಗಿ ನಾವು ಸಮಗ್ರ ಯೋಜನೆಗಳನ್ನು ಹೊಂದಿದ್ದೇವೆ. ಮೂಲೆ ಮೂಲೆಯಿಂದ ನೈಪುಣ್ಯತೆ ಹೊಂದಿದವರನ್ನು ಕರೆತಂದು ಯೋಜನೆಯನ್ನು ಕಾರ್ಯರೂಪಕ್ಕೆ ತರುತ್ತೇವೆ. ಜಗತ್ತಿಗೇ ಕೇರಳವನ್ನು ಒಂದು ಮಾದರಿಯಾಗಿ ತೋರಿಸಲು ಇದು ಸೂಕ್ತ ಕಾಲ.

ವಿಕೋಪದ ನಿರ್ವಹಣೆ ಹೆಚ್ಚು ಸಂಕೀರ್ಣ ಮತ್ತು ವಿವಾದಾತ್ಮಕವಾಗಿರುತ್ತದೆ. ಇದೆಲ್ಲವನ್ನು ನಿಭಾಯಿಸಲು ನಿಮ್ಮ ಸರ್ಕಾರದ ಸಿದ್ಧತೆ ಏನು?
ಇದೆಲ್ಲಾ ಸಾಮಾನ್ಯ. ಅಂಥವನ್ನು ಎದುರಿಸಲು ವ್ಯವಸ್ಥೆ ದೃಢವಾಗಿದೆ ಮತ್ತು ಸಮರ್ಥವಾಗಿದೆ. ನಿರಾಶ್ರಿತರ ರಕ್ಷಣೆ ಮತ್ತು ಪುನರ್‌ವಸತಿ ಕಾರ್ಯದಲ್ಲಿ ಇದುವರೆಗೆ ಅಂತಹ ಉಪದ್ರವಗಳು ಏನೂ ಎದುರಾಗಿಲ್ಲ. ಮೇಲಾಗಿ ಜಗಳ ಹಾಗೂ ವಿವಾದಗಳಿಗೆ ಇದು ಸಮಯವಲ್ಲ. ಸರ್ಕಾರ ಹಾಗೂ ಕೇಂದ್ರದ ನಿಯೋಗಗಳು ಮತ್ತು ಅಸಂಖ್ಯಾತ ಸಂಘಟನೆಗಳು ಈ ಬಿಕ್ಕಟ್ಟಿನಲ್ಲಿ ನಮ್ಮೊಂದಿಗೆ ಕೈಜೋಡಿಸಿವೆ. ಇದೊಂದು ಸೂಕ್ಷ್ಮ ವಿಚಾರ. ಅವರ ಸಹಾಯ ಮತ್ತು ಬದ್ಧತೆ ಸಹ ಕಾರ್ಯಾಚರಣೆಗೆ ನೆರವಾಗಿದೆ. ಇದರ ಹೊರತಾಗಿ ವಿವಾದಾತ್ಮಕ ಹೇಳಿಕೆಗಳಿಗೆ ಪ್ರತಿಕ್ರಿಯಿಸಲು ಇಷ್ಟ ಇಲ್ಲ.

ಈ ಪ್ರಕೃತಿ ವಿಕೋಪದಿಂದಾಗಿ ಕೇರಳ ಮತ್ತು ನಿಮ್ಮ ಸರ್ಕಾರ ಕಲಿತ ದೊಡ್ಡ ಪಾಠ ಏನು?
ಪ್ರತಿಯೊಂದು ಘಟನೆಗಳೂ ಸರ್ಕಾರಕ್ಕೂ ಸೇರಿದಂತೆ ಪ್ರತಿಯೊಬ್ಬರಿಗೂ ಪಾಠವಾಗಿರುತ್ತವೆ. ನಿಮಗೆಲ್ಲಾ ತಿಳಿದಿರುವಂತೆ ಹಿಂದೆಂದೂ ಕಂಡಿರದ ಶತಮಾನದ ಮಹಾಮಳೆ ಇದು. ಕೇರಳ ಎಂದೂ ಇಂತಹ ವಿಕೋಪ ಕಂಡಿರಲಿಲ್ಲ. ಇದೊಂದು ಎಚ್ಚರಿಕೆಯ ಕರೆಗಂಟೆ. ಮತ್ತೆಂದೂ ಇಂಥ ಘಟನೆಗಳು ಜರುಗದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು. ಪ್ರಾಕೃತಿಕ ವಿಕೋಪಗಳು ಮುಂದೂ ಬರಬಹುದು. ಆದರೆ ಅದರ ಪರಿಣಾಮದ ತೀವ್ರತೆಯನ್ನು ಹೇಗೆ ನಿಯಂತ್ರಿಸಬೇಕೆಂಬುದೇ ನಮ್ಮ ಮುಂದಿರುವ ಸವಾಲು.

 ಯುಎಇ ನೀಡಿರುವ 700 ಕೋಟಿ ರು. ನೆರವು ಸ್ವೀಕರಿಸಲು ಸಾಧ್ಯವಿಲ್ಲ ಎಂದು ವಿದೇಶಾಂಗ ಸಚಿವಾಲಯ ಸ್ಪಷ್ಟವಾಗಿ ತಿಳಿಸಿದೆ. ಈ ಬಗ್ಗೆ ನಿಮ್ಮ ನಿಲುವೇನು?
ಯುಎಇಯನ್ನು ಇತರ ದೇಶಗಳಂತೆ ಪರಿಗಣಿಸಬಾರದು. ಆದರೆ ಅದರ ನೆರವನ್ನು ಸ್ವೀಕರಿಸಲು ನಮ್ಮದೇ ಕೆಲ ನಿಯಮಗಳು ಅಡ್ಡಿ ಇವೆ. ಯುಎಇಗೆ ಭಾರತೀಯರ ಅದರಲ್ಲೂ ಕೇರಳಿಗರ ಕೊಡುಗೆ ಅಪಾರ. ಆದರೆ ನನಗೆ ಈ ವಿಷಯದಲ್ಲಿ ರಾಜಕೀಯ ಮಾಡಲು ಇಷ್ಟವಿಲ್ಲ. ಅದರ ಹಿಂದಿನ ಸೂಕ್ಷ್ಮತೆ ತಿಳಿಯಬೇಕಿದೆ. ನೋಡೋಣ ಮುಂದೇನಾಗುತ್ತದೆಂದು.

ನೆರವಿಗೆ ಧಾವಿಸಿರುವವರಿಗೆ ನಿಮ್ಮ ಸಂದೇಶ ಏನು?
ಕೇರಳಿಗರು, ಕೇರಳಿಗರಲ್ಲದವರು ಅಥವಾ ವಿದೇಶಿಗರು ಎಲ್ಲರೂ ಕೇರಳದ ನೆರವಿಗೆ ನಿಂತಿದ್ದಾರೆ. ಭಾರತದ ಮೂಲೆಮೂಲೆಗಳಿಂದಲೂ ನೆರವು ಬಂದಿದ್ದು, ಎಲ್ಲರ ಪ್ರತಿಕ್ರಿಯೆ ಅಭೂತಪೂರ್ವವಾದುದು. ನಿಜಕ್ಕೂ ಭಾರತೀಯರ ಸೌಹಾರ್ದತೆ ಕಂಡು ನನಗೇ ಆಶ್ಚರ್ಯ ವಾಯಿತು. ಯಾರೆಲ್ಲಾ ರಾಜ್ಯದ ಸ್ಥಿತಿಗೆ ಮರುಕಪಟ್ಟು ನೆರವಿಗೆ ಧಾವಿಸಿದ್ದರೋ ಅವರೆಲ್ಲರಿಗೂ ನಮ್ಮ ಅಭಿನಂದನೆಗಳು. ನಿರಾಶ್ರಿತರ ರಕ್ಷಣಾ ಕಾರ್ಯಚರಣೆಯಲ್ಲಿ ಕೇರಳಿಗರ ಒಗ್ಗಟ್ಟು, ಬದ್ಧತೆ, ಸೌಹಾರ್ದತೆ ನಿಜಕ್ಕೂ ಅನುಕರಣೀಯ. ಕೇರಳ ಜಗತ್ತಿಗೆ ಹಲವು ವಿಷಯಗಳಲ್ಲಿ ಮಾದರಿಯಾಗಿತ್ತು. ಇದು ಮತ್ತೊಂದು ಉದಾಹರಣೆ.

ಈ ವಿಕೋಪವನ್ನು ಹೇಗೆ ಪರಿಗಣಿಸುತ್ತೀರಿ? ಇದು ಮಾನವನೇ ಮಾಡಿಕೊಂಡದ್ದೇ?
ವಿಕೋಪ ಅಂದರೆ ವಿಕೋಪ. ನಾವದನ್ನು ಎದುರಿಸಿದ್ದೇವೆ. ನಾನಿದರಲ್ಲಿ ಯಾವುದೇ ವಿವಾದ ಸೃಷ್ಟಿಸಲು ಇಚ್ಛಿಸುವುದಿಲ್ಲ.

ಡ್ಯಾಮ್‌ಗಳ ನಿರ್ವಹಣೆ ಸರಿಯಾಗಿ ಮಾಡಿಲ್ಲವೆಂದು ವಿರೋಧ ಪಕ್ಷಗಳು ಟೀಕಿಸಲು ಆರಂಭಿಸಿವೆ. ನಿಜಕ್ಕೂ ಸರ್ಕಾರ ಡ್ಯಾಂ ನಿರ್ವಹಣೆಯಲ್ಲಿ ವಿಫಲವಾಗಿದೆಯೇ?
ಡ್ಯಾಂ ನಿರ್ವಹಣೆ ಬಗ್ಗೆ ಅಲ್ಲಿನ ಅಧಿಕಾರಿಗಳೇ ನಿಖರ ಹೇಳಿಕೆ ನೀಡಿದ್ದಾರೆ. ಡ್ಯಾಂ ನಿರ್ವಹಣಾ ಅಧಿಕಾರಿಗಳು ಸಂಪೂರ್ಣ ಮಾಹಿತಿಯನ್ನು ನಮಗೂ ನೀಡಿದ್ದರು. ಎಲ್ಲವೂ ಸರಿಯಾಗಿಯೇ ನಡೆದಿವೆ. ಸ್ವಯಂಚಾಲಿತ ಪ್ರಕ್ರಿಯೆಗಳು ಮತ್ತು ಮನುಷ್ಯನಿಂದ ಸಾಧ್ಯವಾಗುವ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನೂ ಕೈಗೊಳ್ಳಲಾಗಿತ್ತು.

ಕೇಂದ್ರ ಸರ್ಕಾರಕ್ಕೆ ದುರಂತದ ಸಂಪೂರ್ಣ ಅರಿವಾಗಿದೆ ಎಂದು ಅನಿಸುತ್ತಾ?
ಈ ಬಗ್ಗೆ ಸ್ಪಷ್ಟಪಡಿಸುತ್ತೇನೆ, ಕೇರಳ ಪ್ರವಾಹದ ಬಗ್ಗೆ ಭಾರತ ಸರ್ಕಾರ ಧನಾತ್ಮಕವಾಗಿಯೇ ಪ್ರತಿಕ್ರಿಯಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ರಾಜನಾಥ್ ಸಿಂಗ್ ಕೇರಳದ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಭಾರತೀಯ ಸೇನೆ ರಕ್ಷಣಾ ಕಾರ್ಯಕ್ಕೆ ಮುಂದೆ ಬಂದಿದೆ. ಕೇಂದ್ರ ಸರ್ಕಾರ ಕೇರಳಕ್ಕಾಗಿ 600 ಕೋಟಿ ರು. ಪರಿಹಾರ ಘೋಷಿಸಿದೆ. ಈ ಬಗ್ಗೆ ನನಗೆ ಸಂತೋಷ ವಿದೆ. ಪ್ರಸ್ತುತ ಬಿಕ್ಕಟ್ಟಿನ ಭೀಕರತೆ ತಿಳಿದು ಇನ್ನು ಮುಂದೆಯೂ ಕೇರಳದ ಪುನರ್‌ನಿರ್ಮಾಣಕ್ಕೆ ಕೈಜೋಡಿಸಲಿದ್ದಾರೆ ಎಂಬ ಭರವಸೆ ಇದೆ.

ವಿಪತ್ತಿನ ಬಗ್ಗೆ ಕೇಂದ್ರದ ಪ್ರತಿಕ್ರಿಯೆ ಶೀಘ್ರವಾಗಿತ್ತೇ? ಅದರ ನೆರವಿನ ಬಗ್ಗೆ ರಾಜ್ಯ ಸರ್ಕಾರದ ನಿಲುವೇನು?

ಪ್ರಾಥಮಿಕ ಅಂದಾಜಿನ ಪ್ರಕಾರ ಮಹಾಮಳೆಯಿಂದಾಗಿ ಸುಮಾರು 20,000 ಕೋಟಿ ರು. ನಷ್ಟ ಸಂಭವಿಸಿದೆ. ಎಲ್ಲಾ ಕ್ಷೇತ್ರಗಳನ್ನು ಪರಿಗಣನೆಗೆ ತೆಗೆದುಕೊಂಡರೆ ಅದು ಮತ್ತಷ್ಟು ಹೆಚ್ಚುತ್ತದೆ. ವಾಸ್ತವ ನಷ್ಟ ಎಷ್ಟು ಎಂಬ ಲೆಕ್ಕಾಚಾರ ನಡೆಯುತ್ತಿದೆ. ಸನ್ನಿವೇಶದ ಸಮೀಕ್ಷೆಗೆ ಮತ್ತೊಂದು ತಂಡ ಕಳುಹಿಸಿಕೊಡಲು ನರೇಂದ್ರ ಮೋದಿಯವರನ್ನು ಕೋರಿದ್ದೇವೆ.

ಕೇಂದ್ರ ಸರ್ಕಾರ ಘೋಷಿಸಿರುವ ೫೦೦ ಕೋಟಿ ರು. ಯಾವುದಕ್ಕೂ ಸಾಲುವುದಿಲ್ಲ ಎಂದು ಕಾಂಗ್ರೆಸ್ ಹೇಳುತ್ತಿದೆ. ನೀವಿದನ್ನು ಒಪ್ಪುತ್ತೀರಾ?
ನಿಜ. ಕೇರಳಕ್ಕಾಗಿರುವ ನಷ್ಟಕ್ಕೆ ಹೋಲಿಸಿದರೆ ೫೦೦ ಕೋಟಿ ತುಂಬಾ ಚಿಕ್ಕದು. ನಾನು ಈ ಹಣವನ್ನು ಪ್ರಾಥಮಿಕ ಪರಿಹಾರ ಎಂದು ಭಾವಿಸುತ್ತೇನೆ. ಮುಂದಿನ ದಿನಗಳಲ್ಲಿ ಕೇಂದ್ರ ಮತ್ತಷ್ಟು ನೆರವಿನ ಹಸ್ತ ಚಾಚಿ ಹೆಚ್ಚು ಹಣ ಬಿಡುಗಡೆ ಮಾಡಲಿದೆ ಎಂಬ ಭರವಸೆ ಇದೆ.

ರಾಜ್ಯವು ಮುಂಜಾಗ್ರತಾ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿತ್ತೇ?
ಆಗಸ್ಟ್‌ನಲ್ಲಿ ಮಳೆಯ ಪ್ರಮಾಣ ಸಾಮಾನ್ಯವಾಗಿದೆ. ಮಾನ್ಸೂನ್ ಪ್ರಾರಂಭವಾದಾಗಿನಿಂದ ಡ್ಯಾಂ ನಿರ್ವಹಣಾ ತಂಡ ಪರಿಸ್ಥಿತಿಯನ್ನು ನಿಕಟವಾಗಿ ಮೌಲ್ಯಮಾಪನ ಮಾಡುತ್ತಿದೆ. ಡ್ಯಾಂಗಳಲ್ಲಿ ನಿರ್ದಿಷ್ಟ ಪ್ರಮಾಣದ ನೀರು ತುಂಬಿದ ಮೇಲೆಯೇ ಮುನ್ಸೂಚನೆ ನೀಡಿ ನೀರನ್ನು ಹೊರಬಿಡಲಾಗಿದೆ. ಆಗಾಗ ಪರಿಸ್ಥಿತಿಯನ್ನು ಅವಲೋಕಿಸಿದ್ದೇವೆ. ಇದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ. ಒಂದೊಮ್ಮೆ ಡ್ಯಾಂಗಳ ಗೇಟ್ ತೆರೆದಿಲ್ಲದಿದ್ದರೆ ದೊಡ್ಡ ದುರಂತ ಸಂಭವಿಸುತ್ತಿತ್ತು.

ಪರಿಸರ ಕಾಳಜಿ ಹೊಂದಿರದ ಯೋಜನೆಗಳ ಪರಿಣಾಮವೇ ಈ ಭೂಕುಸಿತ ಮತ್ತು ಪ್ರವಾಹ ಎಂದು ಕೆಲ ಪರಿಸರವಾದಿಗಳು ದೂರುತ್ತಿದ್ದಾರಲ್ಲ?
ಈ ಹಿಂದಿನ ಸರ್ಕಾರ ಕೂಡ ಪರಿಸರಸ್ನೇಹಿ ಅಭಿವೃದ್ಧಿ ಕಾರ್ಯಗಳ ಬಗ್ಗೆ ಗಮನಹರಿಸಿತ್ತು. ಆದಾಗ್ಯೂ ಇದು ವಾದಕ್ಕೆ ಸಮಯವಲ್ಲ. ಯೋಜನೆಗಳ ಜಾರಿಯಲ್ಲಿ ಸರ್ಕಾರ ಈ ಎಲ್ಲಾ ಅಂಶಗಳನ್ನು ಪರಿಗಣಿಸುತ್ತದೆ. ಈಗ ಮತ್ತೆ ಆರಂಭದಿಂದ ನಿರ್ಮಾಣ ಮಾಡಬೇಕು. ಈ ಎಲ್ಲಾ ಅಡೆತಡೆಗಳನ್ನು ದಾಟಿ ಮುನ್ನುಗ್ಗುತ್ತೇವೆ ಎಂಬ ಭರವಸೆ ನನಗಿದೆ.