ಕನ್ನಡಿಗ ಸಿಂಗಂ ವಿರುದ್ಧ ಇದೀಗ ಬಿಜೆಪಿ ಗರಂ ಆಗಿದೆ. ಅವರ ವಿರುದ್ಧ ಕ್ರಮಕ್ಕೆ ಮುಂದಾಗಿದ್ದು ದೂರು ಸಲ್ಲಿಕೆ ಮಾಡಿದೆ. ಯತೀಶ್ ಚಂದ್ರ ವಿರುದ್ಧ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ಕೇರಳ ಬಿಜೆಪಿ ದೂರು ಸಲ್ಲಿಸಿದೆ.
ತಿರುವನಂತಪುರ: ಶಬರಿಮಲೆ ಅಯ್ಯಪ್ಪ ದರ್ಶನಕ್ಕೆಂದು ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್ ಅವರು ಬಂದಿದ್ದಾಗ ಅವರ ಜತೆ ವಾಕ್ಸಮರ ನಡೆಸಿ ಸುದ್ದಿಯಾಗಿದ್ದ ಕರ್ನಾಟಕದ ದಾವಣಗೆರೆ ಮೂಲದ ಕೇರಳ ಐಪಿಎಸ್ ಅಧಿಕಾರಿ, ‘ಸಿಂಗಂ’ ಖ್ಯಾತಿಯ ಯತೀಶ್ ಚಂದ್ರ ವಿರುದ್ಧ ಸಿಬ್ಬಂದಿ ಮತ್ತು ತರಬೇತಿ ಇಲಾಖೆಗೆ ಬಿಜೆಪಿ ದೂರು ಸಲ್ಲಿಸಿದೆ.
ಕೇಂದ್ರ ಸಚಿವರಿಗೆ ಯತೀಶ್ ಅಪಮಾನ ಮಾಡಿದ್ದಾರೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಪಿ.ಎಸ್. ಶ್ರೀಧರನ್ ಪಿಳ್ಳೈ ದೂರಿನಲ್ಲಿ ಹೇಳಿದ್ದಾರೆ. ಇದೇ ವೇಳೆ, ಬಿಜೆಪಿ ರಾಜ್ಯ ಕಾರ್ಯದರ್ಶಿ ಎ.ಎನ್.ರಾಧಾಕೃಷ್ಣನ್ ಅವರು ಯತೀಶ್ ಅವರನ್ನು ಕ್ರಿಮಿನಲ್ ಎಂದು ಜರಿದಿದ್ದಾರೆ.
ಚಳವಳಿಗಳನ್ನು ಹಿಂಸೆಯ ಮೂಲಕ ಎದುರಿಸುವ ಹಿನ್ನೆಲೆಯನ್ನು ಯತೀಶ್ ಹೊಂದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಚಿವ ರಾಧಾಕೃಷ್ಣನ್ ಅವರು ಶಬರಿಮಲೆಗೆ ಬಂದಾಗ ಖಾಸಗಿ ವಾಹನಗಳನ್ನು ಪಂಪಾವರೆಗೂ ಬಿಡಿ ಎಂದು ತಾಕೀತು ಮಾಡಿದ್ದರು. ಸಮಸ್ಯೆಯಾಗುತ್ತದೆ ಎಂಬ ಕಾರಣಕ್ಕೆ ಯತೀಶ್ ಅವರು ನಿರಾಕರಿಸಿದ್ದಾಗ ಇಬ್ಬರ ನಡುವೆ ವಾಕ್ಸಮರ ನಡೆದಿತ್ತು.
