ಬೆಂಗಳೂರು :  ಪಾಕಿಸ್ತಾನದ ಪ್ರಜೆಗಳನ್ನು ಭಾರತೀಯರು ಎಂದು ದೃಢೀಕರಿಸಿ ದೇಶದಲ್ಲಿ ನೆಲೆಸಲು ಆಸ್ಪದ ನೀಡುವ ವಿವಾಹ ದೃಢೀಕರಣ ಪತ್ರ ವಿತರಿಸುವ ಜಾಲವೊಂದು ಕೇರಳದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಘಾತಕಾರಿ ಸಂಗತಿಯನ್ನು ಕೇಂದ್ರ ಗುಪ್ತಚರ ಇಲಾಖೆ ಪತ್ತೆಹಚ್ಚಿದೆ!

ಈ ಜಾಲದ ಹಿಂದಿರುವುದು ಕೇರಳದ ಪಾಲಕ್ಕಾಡ್‌ ಜಿಲ್ಲೆಯ ಅನ್ಸರುಲ್‌ ಇಸ್ಲಾಂ ಮೊಹಲ್ಲು ಸಮಿತಿ. ಈ ಸಮಿತಿಯ ಕಾರ್ಯವೈಖರಿ ಕುತೂಹಲಕಾರಿಯಾಗಿದೆ. ಸಾಮಾನ್ಯ ಪ್ರವಾಸದ ಕಾರಣ ನೀಡಿ ಪಾಕಿಸ್ತಾನಿ ಪಾಸ್‌ಪೋರ್ಟ್‌ ಮೂಲಕ ಭಾರತಕ್ಕೆ ಬರುವ ಪಾಕಿಸ್ತಾನಿ ಜೋಡಿಗಳು ಅನಂತರ ಭಾರತದಲ್ಲಿ ಮದುವೆಯಾಗುತ್ತವೆ. ಹೀಗೆ ಮದುವೆಯಾಗುವ ಜೋಡಿಗಳನ್ನು ಭಾರತೀಯ ಎಂದು ಗುರುತಿಸಿ ವಿವಾಹ ದೃಢೀಕರಣ ಪ್ರಮಾಣ ಪತ್ರವನ್ನು ಈ ಸಮಿತಿ ನೀಡುತ್ತದೆ. ಈ ಪತ್ರದ ಆಧಾರದ ಮೇಲೆ ಇತರೆ ಅಗತ್ಯ ದಾಖಲೆಗಳನ್ನು (ಆಧಾರ್‌, ಮತದಾರರ ಗುರುತಿನ ಚೀಟಿ ಇತ್ಯಾದಿ) ಸರ್ಕಾರದಿಂದ ಪಡೆಯುವ ಈ ಪಾಕಿಸ್ತಾನಿ ದಂಪತಿಗಳು, ಭಾರತೀಯರಂತೆಯೇ ದೇಶದಲ್ಲಿ ನೆಲೆಸುತ್ತಾರೆ. ಇಂತಹ ಹಲವು ಪ್ರಕರಣಗಳು ನಡೆದಿವೆ ಎಂದು ಕೇಂದ್ರ ಗುಪ್ತಚರ ಇಲಾಖೆಯ ಅಂಗಸಂಸ್ಥೆಯಾದ ವಿದೇಶೀಯರ ಪ್ರಾದೇಶಿಕ ನೋಂದಣಿ ಕಚೇರಿಯು ರಾಜ್ಯ ಹೈಕೋರ್ಟ್‌ಗೆ ಮಾಹಿತಿ ನೀಡಿದೆ.

ಈ ಮಾಹಿತಿಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಹೈಕೋರ್ಟ್‌, ಕೇರಳದ ಅನ್ಸರುಲ್‌ ಇಸ್ಲಾಂ ಮೊಹಲ್ಲು ಸಮಿತಿ ಇಂತಹ ಕಾರ್ಯ ನಡೆಸುತ್ತಿದ್ದರೆ ಅದು ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿ. ಹೀಗಾಗಿ ಕೇರಳದ ಈ ಸಮಿತಿ ಹೇಗೆ ಮತ್ತು ಯಾವ ಆಧಾರದ ಮೇಲೆ ವಿವಾಹ ನೋಂದಣಿ ಪ್ರಮಾಣಪತ್ರ ವಿತರಿಸುತ್ತಿದೆ? ಅದನ್ನು ತಡೆಯಲು ಕೈಗೊಂಡ ಕ್ರಮಗಳೇನು? ಈ ಪರಿಸ್ಥಿತಿ ನಿಭಾಯಿಸಲು ಅನುಸರಿಸಬಹುದಾದ ಕ್ರಮಗಳೇನು ಎಂಬ ಬಗ್ಗೆ ವರದಿ ಸಲ್ಲಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೀಗೆ:

ಪಾಕಿಸ್ತಾನದ ಕರಾಚಿ ಪ್ರಾಂತದ ಚಕ್ರಫೋಟ್‌ ಪ್ರದೇಶದಿಂದ ಬೆಂಗಳೂರಿಗೆ ಬಂದಿದ್ದ ಕಾಸೀಫ್‌ ಶಂಶುದ್ಧೀನ್‌ ಮತ್ತು ಕಿರಣ್‌ ಗುಲಾಮ್‌ ಅಲಿ ಎಂಬುವರು ಅನಂತರ ನಗರದಲ್ಲೇ ವಿವಾಹವಾದರು. ಅನಂತರ ಸ್ವದೇಶಕ್ಕೆ ತೆರಳದೆ ಭಾರತೀಯರಂತೆಯೇ ನಗರದಲ್ಲಿ ನೆಲೆಸಿದ್ದರು. ಈ ಪ್ರಕರಣ ಬೆಳಕಿಗೆ ಬಂದು ಪೊಲೀಸರು ಅವರನ್ನು ಬಂಧಿಸಿದ್ದರು. 44ನೇ ಮತ್ತು 3ನೇ ಎಸಿಸಿಎಂ ನ್ಯಾಯಾಲಯಗಳು ದಂಪತಿಗೆ ಪ್ರತ್ಯೇಕವಾಗಿ ತಲಾ 21 ತಿಂಗಳಂತೆ ಒಟ್ಟು 42 ತಿಂಗಳು ಕಠಿಣ ಜೈಲು ಶಿಕ್ಷೆ ವಿಧಿಸಿದ್ದವು. 21 ತಿಂಗಳು ಜೈಲು ವಾಸ ಅನುಭವಿಸಿದ ದಂಪತಿ, ಎರಡು ನ್ಯಾಯಾಲಯಗಳು ವಿಧಿಸಿರುವ ಶಿಕ್ಷೆಯ ಅವಧಿ ಏಕಕಾಲದಲ್ಲಿ ಜಾರಿಗೆ ಬರುವಂತೆ ಆದೇಶಿಸಿ, ತಮ್ಮನ್ನು ಬಿಡುಗಡೆ ಮಾಡಬೇಕು ಎಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಈ ಪ್ರಕರಣದ ಸಂಬಂಧ ಗುಪ್ತಚರ ಇಲಾಖೆ ಪ್ರಾಥಮಿಕ ತನಿಖೆ ನಡೆಸಿತ್ತು. ಆ ತನಿಖಾ ವರದಿಯನ್ನು ಇತ್ತೀಚೆಗೆ ಕೇಂದ್ರ ಗೃಹ ಇಲಾಖೆಯ ಅಧೀನದ ವಲಸಿಗರ ಬ್ಯೂರೋವಿನ ವಿದೇಶೀಯರ ಪ್ರಾದೇಶಿಕ ನೋಂದಣಿ ಅಧಿಕಾರಿ (ಎಫ್‌ಆರ್‌ಆರ್‌ಓ) ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್‌ಗೆ ಸಲ್ಲಿಸಿದ್ದರು. ಲಕೋಟೆಯನ್ನು ಕೋರ್ಟ್‌ ಮಾತ್ರವೇ ನೋಡಬೇಕು ಎಂದು ಕೋರಿದ್ದರು. ಅದರಂತೆ ಹೈಕೋರ್ಟ್‌ ಲಕೋಟೆಯನ್ನು ತೆರೆದು ಅದರಲ್ಲಿದ್ದ ಮಾಹಿತಿಯನ್ನು ಪರಿಶೀಲಿಸಿ ನಂತರ ಹಿಂದಿರುಗಿಸಿತ್ತು.

ರಹಸ್ಯ ಲಕೋಟೆಯಲ್ಲಿ ಏನಿದೆ:

ಮದುವೆಯಾಗುವುದಕ್ಕಾಗಿ ಪಾಕಿಸ್ತಾನೀಯರು ಪಾಸ್‌ಪೋರ್ಟ್‌ ಮಾಡಿಸಿಕೊಂಡು ಭಾರತಕ್ಕೆ ಬರುತ್ತಾರೆ. ಕೇರಳದ ಈ ಸಮಿತಿಯು ಅಂತಹವರ ವಿವಾಹವನ್ನು ಧೃಢೀಕರಿಸುತ್ತದೆ. ಹಾಗೆಯೇ, ಅವರು ಭಾರತೀಯರೆಂದು ಸಹ ದೃಢೀಕರಿಸಿದ ಪ್ರಮಾಣಪತ್ರದಲ್ಲಿ ಉಲ್ಲೇಖಿಸುತ್ತದೆ. ಈ ಪ್ರಮಾಣ ಪತ್ರವನ್ನು ಬಳಸಿ ಪಾಕಿಸ್ತಾನೀಯರು ಭಾರತದ ಪಾಸ್‌ಪೋರ್ಟ್‌, ಆಧಾರ್‌ ಕಾರ್ಡ್‌ ಹಾಗೂ ಮತದಾನದ ಗುರುತಿನ ಚೀಟಿ ಪಡೆಯುತ್ತಾರೆ. ನಂತರ ಭಾರತದ ಪ್ರಜೆಗಳಾಗಿಯೇ ಗುರುತಿಸಿಕೊಂಡು ಇಲ್ಲಿಯೇ ನೆಲೆಸುತ್ತಾರೆ. ಆಗ ಅವರು ಭಾರತದಲ್ಲಿ ನೆಲೆಸುತ್ತಿರುವುದು ಕಾನೂನುಬದ್ಧವೂ ಆಗುತ್ತದೆ. ಇದರಿಂದ ಭಾರತದ ಆಂತರಿಕ ಭದ್ರತೆ ಮೇಲೆ ನೇರವಾಗಿ ದುಷ್ಪರಿಣಾಮ ಉಂಟಾಗುತ್ತದೆ ಎಂಬ ಅಂಶಗಳನ್ನು ಲಕೋಟೆಯಲ್ಲಿ ಉಲ್ಲೇಖಿಸಲಾಗಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ರಾಷ್ಟ್ರೀಯ ಭದ್ರತೆಗೆ ಧಕ್ಕೆ

ಲಕೋಟೆಯಲ್ಲಿ ಉಲ್ಲೇಖಿಸಿರುವ ಸಂಗತಿಗಳು ರಾಷ್ಟ್ರೀಯ ಭದ್ರತೆ ಮೇಲೆ ನೇರ ದುಷ್ಪರಿಣಾಮ ಬೀರುವಂತಹವು. ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಸಂಗತಿಗಳು ಭವಿಷ್ಯದಲ್ಲಿ ಮರುಕಳಿಸದಿರಲು ತಕ್ಷಣದಿಂದಲೇ ಅಗತ್ಯ ಕ್ರಮ ಕೈಗೊಳ್ಳುವುದು ಗುಪ್ತಚರ ಬ್ಯೂರೋ ಹಾಗೂ ಇತರೆ ಏಜೆನ್ಸಿಗಳ ಕರ್ತವ್ಯ. ಕೇರಳದ ಪಾಲಕ್ಕಾಡ್‌ ಪ್ರದೇಶದ ಅನ್ಸರುಲ್‌ ಇಸ್ಲಾಂ ಮೊಹಲ್ಲು ಸಮಿತಿಯು 2016ರ ಮಾ.30ರಂದು ಮೊಹಮ್ಮದ್‌ ಷಿಹಾಬ್‌ ತಚರಾಮ್‌ ಖುನ್ನಥ್‌ ಮತ್ತು ಶಮೀರ್‌ ವಿವಾಹವನ್ನು ದೃಢೀಕರಿಸಿ ಪ್ರಮಾಣಪತ್ರ ವಿತರಿಸಿದೆ. ಹೀಗಾಗಿ, ಸಮಿತಿ ದೃಡೀಕರಣ ಪತ್ರ ವಿತರಿಸುತ್ತಿರುವ, ಅದನ್ನು ಪಾರ್ಸ್‌ಪೋರ್ಟ್‌ ಹಾಗೂ ಭಾರತಕ್ಕೆ ಪ್ರವೇಶ ಪಡೆಯವುದನ್ನು ಕಾನೂನುಬದ್ಧಗೊಳಿಸುವ ಇತರೆ ದಾಖಲೆ ಪಡೆಯಲು ಬಳಸುತ್ತಿರುವ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಬೇಕು. ಇಂತಹ ದೃಢೀಕರಣ ಪತ್ರಗಳಿಂದ ವಿದೇಶೀಯರು ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸುತ್ತಿದ್ದಾರೆ. ಈ ಪರಿಸ್ಥಿತಿ ನಿಭಾಯಿಸಲು ಕೈಗೊಳ್ಳುವ ಕ್ರಮಗಳ ಬಗ್ಗೆಯೂ ವರದಿ ಸಲ್ಲಿಸಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ (ಗುಪ್ತಚರ ಬ್ಯೂರೋ ಹಾಗೂ ಇತರೆ ಏಜೆನ್ಸಿಗಳು) ಹೈಕೋರ್ಟ್‌ ನಿರ್ದೇಶಿಸಿದೆ.

ವರದಿ : ವೆಂಕಟೇಶ್ ಕಲಿಪಿ