`ಕರಾವಳಿಯಲ್ಲಿ ಎಚ್ಚೆತ್ತುಕೊಳ್ಳಿ, ಹೈ- ಕದಲ್ಲೂ ಎಚ್ಚರದಿಂದಿರಿ' ಎಂದು ಚುನಾವಣೆ ಸಿದ್ಧತೆ ಕುರಿತು ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ. ಅವರು ನಡೆಸುತ್ತಿರುವ ಕಾಂಗ್ರೆಸ್ ವಿಭಾಗವಾರು ಸಭೆಯಲ್ಲಿ `ಸುವರ್ಣ ನ್ಯೂಸ್' ಮತ್ತು `ಕನ್ನಡಪ್ರಭ' ಸಮೀಕ್ಷೆ ಕುರಿತು ಗಂಭೀರ ಚರ್ಚೆ ನಡೆದಿದೆ.
ಬೆಂಗಳೂರು(ಡಿ.8): `ಕರಾವಳಿಯಲ್ಲಿ ಎಚ್ಚೆತ್ತುಕೊಳ್ಳಿ, ಹೈ- ಕದಲ್ಲೂ ಎಚ್ಚರದಿಂದಿರಿ' ಎಂದು ಚುನಾವಣೆ ಸಿದ್ಧತೆ ಕುರಿತು ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ. ಅವರು ನಡೆಸುತ್ತಿರುವ ಕಾಂಗ್ರೆಸ್ ವಿಭಾಗವಾರು ಸಭೆಯಲ್ಲಿ `ಸುವರ್ಣ ನ್ಯೂಸ್' ಮತ್ತು `ಕನ್ನಡಪ್ರಭ' ಸಮೀಕ್ಷೆ ಕುರಿತು ಗಂಭೀರ ಚರ್ಚೆ ನಡೆದಿದೆ.
ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಕನ್ನಡಪ್ರಭ ಸಮೀಕ್ಷೆ ಪ್ರಸ್ತಾಪಿಸಿದ ಅವರು, ಹೈದರಾಬಾದ್ ಕರ್ನಾಟಕದಲ್ಲಿ ಕಾಂಗ್ರೆಸ್’ಗೆ ಉತ್ತಮ ವಾತಾವರಣವಿದೆ ಎಂದು ಹೇಳಿದೆ. ಇದೇ ವೇಳೆ ಕರಾವಳಿ ಭಾಗದಲ್ಲಿ ಪಕ್ಷದ ಪರಿಸ್ಥಿತಿ ಕಷ್ಟಕರವಿದೆ ಎಂದೂ ಹೇಳಿದೆ. ಈ ಸಮೀಕ್ಷೆಯನ್ನು ನಾವು ಒಂದು ಎಚ್ಚರಿಕೆ ಗಂಟೆಯಾಗಿ ಪರಿಗಣಿಸಬೇಕು. ಕರಾವಳಿ ಭಾಗದಲ್ಲಿ ಪಕ್ಷದ ಸಂಘಟನೆಯನ್ನು ಮತ್ತಷ್ಟು ಹೆಚ್ಚಿಸಬೇಕು ಹಾಗೂ ಅಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದ್ದರೆ ಅದಕ್ಕೆ ಕಾರಣವನ್ನು ಪತ್ತೆ ಮಾಡಿ ಶೀಘ್ರ ಸರಿಪಡಿಸಿಕೊಳ್ಳಬೇಕು ಎಂದು ರಾಜ್ಯ ನಾಯಕರಿಗೆ ಸೂಚಿಸಿದರು.
ಅಲ್ಲದೆ, ಹೈದರಾಬಾದ್ ಕರ್ನಾಟಕದಲ್ಲಿ ಕಾಂಗ್ರೆಸ್ ಪರಿಸ್ಥಿತಿ ಉತ್ತಮವಾಗಿದ್ದರೂ, ಅಲ್ಲಿ ಕಾಂಗ್ರೆಸ್ ಕೆಲ ಶಾಸಕರು ಪಕ್ಷ ತೊರೆಯಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಇಂತಹ ಸೂಚನೆಗಳು ನಮಗೂ ಇವೆ. ಈ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿರುವ ಈ ಭಾಗದ ಶಾಸಕರನ್ನು ಕೂಡಲೇ ಸಂಪರ್ಕಿಸಿ ಅವರ ಮನವೊಲಿಸಿ ಪಕ್ಷದಲ್ಲೇ ಉಳಿಯುವಂತೆ ಮಾಡಬೇಕು ಎಂದು ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಮ್ಮ ಪ್ರಕಾರ ಕಾಂಗ್ರೆಸ್'ಗೆ 132 ಸ್ಥಾನ ಸಿಗುತ್ತದೆ : ಪರಮೇಶ್ವರ್ ಸುವರ್ಣನ್ಯೂಸ್ ಹಾಗೂ ಕನ್ನಡಪ್ರಭ ನಡೆಸಿರುವ ಸಮೀಕ್ಷೆ ಅಷ್ಟೇನೂ ನಿಖರವಾಗಿದೆ ಎಂದು ನನಗೆ ಅನಿಸುತ್ತಿಲ್ಲ. ಕಾಂಗ್ರೆಸ್ಗೆ ಕಡಿಮೆ ಸೀಟು ನೀಡಲಾಗಿದೆ ಎಂದು ನಾನು ಈ ಮಾತು ಹೇಳುತ್ತಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್’ಗೆ ವಿರುದ್ಧವಾಗಿರುವ ಯಾವ ಅಂಶಗಳೂ ಈಗ ಇಲ್ಲ. ವಾಸ್ತವವಾಗಿ ಕಾಂಗ್ರೆಸ್ ಪರವಾದ ವಾತಾವರಣ ರಾಜ್ಯದಲ್ಲಿದೆ. ಹೀಗಿರುವಾಗ ಕಾಂಗ್ರೆಸ್ 80ರ ಆಸುಪಾಸು ಸೀಟು ದೊರೆಯುತ್ತದೆ ಎಂದು ಸಮೀಕ್ಷೆ ಹೇಳಿದರೆ ನಂಬಲಾಗದು. ಹೀಗಾಗಿ ಈ ಸಮೀಕ್ಷೆ ನಿಖರವಾಗಿಲ್ಲ ಎಂದು ನನ್ನ ಅಭಿಪ್ರಾಯ. ಕಾಂಗ್ರೆಸ್ ಪಕ್ಷ ನಡೆಸಿದ ಆಂತರಿಕ ಸಮೀಕ್ಷೆಯು ಕಾಂಗ್ರೆಸ್’ಗೆ 132 ಸ್ಥಾನ ದೊರೆಯುತ್ತದೆ ಎಂದು ಹೇಳುತ್ತಿದೆ. ಹೀಗಾಗಿ ಸರ್ಕಾರ ರಚಿಸಲು ಅಗತ್ಯವಿರುವಷ್ಟು ಸಂಖ್ಯೆ ಕಾಂಗ್ರೆಸ್’ಗೆ ಸುಲಭವಾಗಿಯೇ ದೊರೆಯುತ್ತದೆ ಎಂಬ ವಿಶ್ವಾಸವಿದೆ. ಕಾಂಗ್ರೆಸ್ ಪಕ್ಷಕ್ಕೆ 80ರ ಗಡಿಯಲ್ಲಿ ಸೀಟು ಬರುತ್ತದೆ ಎಂದು ಎಂಟು ತಿಂಗಳ ಹಿಂದೆ ಹೇಳಿದ್ದರೆ ಅದನ್ನು ಒಪ್ಪಬಹುದಿತ್ತು. ಆದರೆ, ಈಗ ಕಾಂಗ್ರೆಸ್ ಪರಿಸ್ಥಿತಿ ಉತ್ತಮಗೊಂಡಿದೆ. ವಿಶೇಷವಾಗಿ ರೈತರ ಸಾಲಮನ್ನಾ ಹಾಗೂ ಭಾಗ್ಯ ಯೋಜನೆಗಳು ಜನರ ಮನಸ್ಸನ್ನು ಗೆದ್ದಿವೆ. ಹೀಗಾಗಿ ಈ ಸಮೀಕ್ಷೆ ನಿಖರವಾಗಿಲ್ಲ ಎಂದು ನನಗೆ ಅನಿಸುತ್ತದೆ ಎಂದಿದ್ದಾರೆ.
