ಬೆಂಗಳೂರು[ಜೂ.14]: ಮುಂದಿನ ವರ್ಷದ ಮೊದಲ ಮೂರು ತಿಂಗಳಲ್ಲಿ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವುದು ಖಚಿತ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಮುಂದುವರೆಯುವುದು ಇಷ್ಟವಿಲ್ಲ. ಅವರೂ ಮಧ್ಯಂತರ ಚುನಾವಣೆಗೆ ಹೋಗುವ ಬಗ್ಗೆ ಹೈಕಮಾಂಡ್ ಬಳಿ ವಾದ ಮಂಡಿಸಿದ್ದಾರೆ ಎಂದು ವಿಧಾನಸಭೆ ಮಾಜಿ ಸ್ಪೀಕರ್ ಕೆ. ಬಿ. ಕೋಳಿವಾಡ ಹೇಳಿದ್ದಾರೆ.

ಬೆಂಗಳೂರು ನಗರದ ತಮ್ಮ ನಿವಾಸದಲ್ಲಿ ಗುರುವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರವು ಪತನಗೊಂಡು 2020ರ ಮೊದಲ ತ್ರೈಮಾಸಿಕದಲ್ಲೇ ಮಧ್ಯಂತರ ಚುನಾವಣೆ ರಾಜ್ಯದಲ್ಲಿ ಬರಲಿದೆ. ಇದಕ್ಕೆ ಪುಷ್ಟಿಯಾಗಿ ನಿಲ್ಲಬಲ್ಲ ಸಾಕಷ್ಟು ಕಾರಣಗಳು ನನಗೆ ಗೊತ್ತಿವೆ. ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರ್ಕಾರದಿಂ ದಾಗಿ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಪೆಟ್ಟು ಬಿದ್ದಿದೆ. ಹೀಗಾಗಿ ಸಮ್ಮಿಶ್ರ ಸರ್ಕಾರವು ವಿಸರ್ಜನೆಯಾಗಿ ಚುನಾವಣೆ ನಡೆಯಲಿ ಎಂಬುದು ಬಹುತೇಕ ನಾಯಕರ ಅಭಿಮತ. ಇದರಂತೆ 8-9 ತಿಂಗಳಲ್ಲಿ ಈ ಸರ್ಕಾರ ಉರುಳಲಿದೆ ಎಂದು ಬಹಿರಂಗವಾಗಿ ಭವಿಷ್ಯ ನುಡಿದಿದ್ದಾರೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಸೇರಿದಂತೆ ಬಹುತೇಕ ನಾಯಕರಿಗೆ ಸಮ್ಮಿಶ್ರ ಸರ್ಕಾರ ಮುಂದುವರೆಯುವುದು ಇಷ್ಟವಿಲ್ಲ ಎಂದು ಹೇಳಿದರು.