ಜಲಂಧರ್[ಜ.05]: ಆಂಧ್ರ ವಿಶ್ವವಿದ್ಯಾನಿಲಯದ ಉಪಕುಲಪತಿ ಜಿ. ನಾಗೇಶ್ವರ್ ರಾವ್ ಹೇಳಿಕೆಯೊಂದು ಭಾರೀ ವೈರಲ್ ಆಗುತ್ತಿದೆ. Indian Science Congress ಉದ್ದೇಶಿಸಿ ಮಾತನಾಡಿದ ರಾವ್, ಕೌರವರು ಸ್ಟೆಮ್ ಸೆಲ್ಸ್ ಹಾಗೂ ಟೆಸ್ಟ್ ಟ್ಯೂಬ್ ತಂತ್ರಜ್ಞಾನದಿಂದ ಜನಿಸಿದ್ದಾರೆಂದು ತಿಳಿಸಿದ್ದಾರೆ. ಭಾರತೀಯರು ಸಾವಿರಾರು ವರ್ಷಗಳ ಹಿಂದೆಯೇ ಈ ತಂತ್ರಜ್ಞಾನವನ್ನು ತಿಳಿದುಕೊಂಡಿದ್ದರು ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ರಾಮಾಯಣವನ್ನೂ ಉಲ್ಲೇಖಿಸಿರುವ ಉಪಕುಲಪತಿಗಳು, ಪುರಾತನ ಕಾಲದಲ್ಲೇ ಭಗವಂತ ಶ್ರೀರಾಮ ಗುರಿ ತಲುಪಿ ಮರಳಿ ತನ್ನ ಬಳಿಯೇ ಬರುವಂತಹ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದ್ದರು ಎಂದಿದ್ದಾರೆ. ಈ ಮೂಲಕ ಕ್ಷಿಪಣಿ ವಿಜ್ಞಾನ ಭಾರತೀಯರಿಗೆ ಹೊಸದಲ್ಲ, ಸಾವಿರಾರು ವರ್ಷಗಳ ಹಿಂದೆಯೇ ಇದನ್ನು ಪ್ರಯೋಗಿಸಿದ್ದರೆಂದಿದ್ದಾರೆ.

"ರಾಮಾಯಣದಲ್ಲಿ ರಾವಣನ ಬಳಿ ಪುಷ್ಪಕ ವಿಮಾನವಷ್ಟೇ ಅಲ್ಲದೆ, ವಿವಿಧ ಆಕಾರದ ಹಾಗೂ ವಿಭಿನ್ನ ಶಕ್ತಿಯ 24 ರೀತಿಯ ವಿಮಾಗಳಿದ್ದವು ಎನ್ನಲಾಗಿದೆ. ರಾವಣ ಶ್ರೀಲಂಕಾದಲ್ಲಿ ಹಲವಾರು ವಿಮಾನ ನಿಲ್ದಾಣಗಳನ್ನು ನಿರ್ಮಿಸಿದ್ದರು. ಈ ವಿಮಾನಗಳನ್ನು ಯುದ್ಧಕ್ಕೆ ಮಾತ್ರವಲ್ಲದೇ, ಇತರ ಕೆಲಸಗಳಿಗೂ ಬಳಸುತ್ತಿದ್ದರು" ಎನ್ನುವ ಮೂಲಕ ತ್ರೇತಾಯುಗದಲ್ಲೇ ಇಲ್ಲಿ ತಂತ್ರಜ್ಞಾನವನ್ನು ಬಳಸಲಾಗುತ್ತಿತ್ತು ಎಂದಿದ್ದಾರೆ.

ಕೌರವರ ಕುರಿತಾಗಿ ಹೇಳಿಕೆ ನೀಡಿರುವ ರಾವ್ "ಗಾಂಧಾರಿ 100 ಮಕ್ಕಳಿಗೆ ಜನ್ಮ ನೀಡಿದ್ದು ಎಲ್ಲರಿಗೂ ಅಚ್ಚರಿ ಮೂಡಿಸುವ ವಿಚಾರ. ಇದು ಹೇಗೆ ಸಾಧ್ಯ ಎನ್ನುವ ಮೂಲಕ ನಂಬಲು ಹಿಂದೇಟು ಹಾಕುತ್ತಾರೆ. ಮಹಿಳೆಯೊಬ್ಬಳು 100 ಮಕ್ಕಳಿಗೆ ಜನ್ಮ ನೀಡಿಲು ಸಾಧ್ಯವೇ? ಎಂದು ಪ್ರಶ್ನಿಸುತ್ತಾರೆ. ಆದರೀಗ ಟೆಸ್ಟ್ ಟ್ಯೂಬ್ ಮೂಲಕ ಮಕ್ಕಳು ಹುಟ್ಟಲು ಸಾಧ್ಯ ಎಂದು ನಮಗೆ ತಿಳಿದಿದೆ. ಮಹಾಬಾರತದಲ್ಲಿ ಹೇಳಿದ ಹಾಗೆ 100 ಮೊಟ್ಟೆಗಳನ್ನು ಫಲವತ್ತಾಗಿಸಿ, ಅವುಗಳನ್ನು 100 ತುಪ್ಪದ ಗಡಿಕೆಗಳಲ್ಲಿ ಇಡಲಾಯಿತು. ಹಾಗಾದರೆ ಅವು ಟೆಸ್ಟ್ ಟ್ಯೂಬ್ ಶಿಶುಗಳಲ್ವಾ? ನಮ್ಮ ದೇಶದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಸ್ಟೆಮ್ ಸೆಲ್ ಶೋಧ ನಡೆದಿತ್ತು" ಎಂದಿದ್ದಾರೆ.