ಶ್ರೀನಗರ(ಡಿ.27): ಊರು ಹೋಗಂತಿದೆ, ಕಾಡು ಬಾ ಅಂತಿದೆ ಅನ್ನೋ ವಯಸ್ಸಿನಲ್ಲಿ ಅಜ್ಜ-ಅಜ್ಜಿ ಮುದ್ದಾದ ಮಗುವೊಂದನ್ನು ಮಡಿಲಲ್ಲಿಟ್ಟುಕೊಂಡು ಊರ ತುಂಬೆಲ್ಲಾ ‘ನಮ್ದು..ನಮ್ದು.. ಅಂತಾ ತಿರುಗುತ್ತಿದ್ದರೆ, ಊರ ಜನರೆಲ್ಲಾ ‘ಭಲೇ ಜೋಡಿ’ ಅಂತಾ ನಗು ಬೀರುತ್ತಿದೆ.

ಈ ಜಗತ್ತು ವಿಸ್ಮಯಗಳ ಆಗರ. ಈ ವಿಶ್ವದ ಒಂದಲ್ಲ ಒಂದು ಮೂಲೆಯಲ್ಲಿ ಏನಾದರೂ ವಿಸ್ಮಯಗಳು ನಡೆಯುತ್ತಲೇ ಇರುತ್ತವೆ. ಮಾನವನ ಜೀವನ ಕೂಡ ಈ ವಿಸ್ಮಯದಿಂದ ಹೊರತಲ್ಲ.

ಅನೇಕ ವಿಸ್ಮಯಗಳಲ್ಲಿ ಇದೂ ಒಂದು ಹೌದಾದರೂ, ಈ ಸುದ್ದಿ ಓದಿದ ಬಳಿಕ ನೀವು ಈ ಜೋಡಿಗೆ ಶುಭಾಶಯ ಖಂಡಿತ ತಿಳಿಸುತ್ತಿರಿ. ಅಷ್ಟಕ್ಕೂ ಇದೇನು ಸ್ಟೋರಿ ಗೊತ್ತಾ?.

ಕಣಿವೆ ರಾಜ್ಯದ ಸೇಲನ್ ಜಿಲ್ಲೆಯಲ್ಲಿನ ಮಹಿಳೆಯೋರ್ವಳು ಮುದ್ದಾದ ಮಗುವಿಗೆ ಜನ್ಮ ನೀಡಿದ್ದಾಳೆ. ಅರೆ! ಇದರಲ್ಲೇನು ವಿಶೇಷ ಅಂತೀರಾ?. ವಿಶೇಷತೆ ಖಂಡಿತ ಇದೆ. ಈಗಷ್ಟೇ ಅಮ್ಮಳಾಗಿರುವ ಈ ಮಹಿಳೆಗೆ ಬರೋಬ್ಬರಿ 65 ವರ್ಷ

ಹೌದು, ಜಮ್ಮು ಮತ್ತು ಕಾಶ್ಮೀರದಲ್ಲಿ 65 ವರ್ಷದ ವೃದ್ಧೆ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಇದಕ್ಕೂ ವಿಶೇಷ ಅಂದರೆ ಈಕೆಯ ಪತಿ ಹಕೀಮ್ ದಿನ್ ಅವರಿಗೆ ಈಗ ಬರೋಬ್ಬರಿ 80 ವರ್ಷ.

ಈ ಪವಾಡಕ್ಕೆ ಸೇಲನ್ ಜಿಲ್ಲಾಸ್ಪತ್ರೆ ಸಿಬ್ಬಂದಿ ಬೆರಗಾಗಿದ್ದು, ಅಜ್ಜ-ಅಜ್ಜಿ ನಡುವಿನ ಪ್ರೀತಿಗೆ, ಅವರ ಶಾರೀರಿಕ ಸಧೃಡತೆಗೆ ಸೈ ಎಂದಿದೆ. 
ಸಾಮಾನ್ಯವಾಗಿ ಭಾರತದಲ್ಲಿ ಮಹಿಳೆಯರು 47 ವರ್ಷದ ಬಳಿಕ ತಾಯಿಯಾಗುವ ಸಂಭವ ಕಡಿಮೆ. ಆದರೆ ಈ ಮಹಿಳೆ 65ನೇ ವಯಸ್ಸಿನಲ್ಲಿ ತಾಯಿಯಾಗಿರುವುದು ನಿಜಕ್ಕೂ ಪವಾಡ ಅಂತಾರೆ ವೈದ್ಯ ಡಾ. ಶಬೀರ್ ಸಿದ್ಧಿಕಿ.