ಕಾಸರಗೋಡು: ಬೈಕ್‌ನಲ್ಲಿ ತೆರಳುತ್ತಿದ್ದ ಇಬ್ಬರು ಕಾಂಗ್ರೆಸ್ ಯುವ ಕಾರ್ಯಕರ್ತರ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದವರ ಪೈಕಿ ಕೆಲವರು ಕರ್ನಾಟಕಕ್ಕೆ ಪರಾರಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. 

ಈ ಹಿನ್ನೆಲೆಯಲ್ಲಿ ಅವರ ಬಂಧನಕ್ಕೆ ಸಹಕರಿಸುವಂತೆ ಕರ್ನಾಟಕ ಪೊಲೀಸರಿಗೆ ಕೇರಳ ಸರ್ಕಾರ ಕೋರಿಕೊಂಡಿದೆ. ಏತನ್ಮಧ್ಯೆ ಇಬ್ಬರು ಶಂಕಿತರನ್ನು ಸೋಮವಾರ ಪೊಲೀಸರು ತಮ್ಮ ವಶಕ್ಕೆ ಪಡೆದಿದ್ದಾರೆ. ಇನ್ನು ಕಾಂಗ್ರೆಸ್ ಕಾರ್ಯಕರ್ತರ ಹತ್ಯೆ ಖಂಡಿಸಿ, ಕಾಸರಗೋಡಿನಲ್ಲಿ ಕಾಂಗ್ರೆಸ್ ಕೈಗೊಂಡಿದ್ದ ಪ್ರತಿಭಟನೆಯು ಹಿಂಸಾ ಚಾರಕ್ಕೆ ತಿರುಗಿದೆ.

ಹತ್ಯೆಗೈದವರನ್ನು ಬಂಧಿಸಿ, ಅವರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವವರು ರಾಜ್ಯ ಡಿಜಿಪಿಗೆ ಸೂಚಿಸಿದ್ದಾರೆ. 

ರಾಹುಲ್ ಗಾಂಧಿ ಕಿಡಿ: ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಅವರು, ಕೇರಳದಲ್ಲಿ ಇಬ್ಬರು ಕಾಂಗ್ರೆಸ್ ಯುವ ಕಾರ್ಯಕರ್ತರ ಹತ್ಯೆಗೈದವರಿಗೆ ಕಾನೂನಿ ನಡಿ ಶಿಕ್ಷೆಗೆ ಗುರಿಪಡಿಸುವವರೆಗೂ ಪಕ್ಷ ವಿರಮಿಸುವುದಿಲ್ಲ ಎಂದು ಹೇಳಿದ್ದಾರೆ.