ಕಾರವಾರ (ಜೂ. 02): ಕುಟುಂಬ ನಿರ್ವಹಣೆಗಾಗಿ ಎತ್ತಿನಂತೆ ಉಳುಮೆ ಮಾಡುತ್ತಿದ್ದ ಗಿರಿಧರ ಗುನಗಿ ಕುರಿತ ವಿಶೇಷ ವರದಿ ‘ಕನ್ನಡಪ್ರಭ’ದಲ್ಲಿ ಶನಿವಾರ ಪ್ರಕಟವಾಗುತ್ತಿದ್ದಂತೆ ಕಾರವಾರ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಅವರು ಗಿರಿಧರ ಅವರಿಗೆ ಪವರ್ ಟಿಲ್ಲರ್, ತಳ್ಳುವ ಗಾಡಿ ಹಾಗೂ ನಾಲ್ಕು ಚಕ್ರದ ಬೈಕ್ ನೀಡುವ ಭರವಸೆ ನೀಡಿದ್ದಾರೆ.

ಈ ಬಗ್ಗೆ ಶಾಸಕಿ ‘ಕನ್ನಡಪ್ರಭ’ದೊಂದಿಗೆ ಮಾತನಾಡಿ, ಶೀಘ್ರದಲ್ಲಿಯೇ ಗಿರಿಧರ ಅವರನ್ನು ಭೇಟಿಯಾಗುತ್ತೇನೆ. ಅವರಿಗೆ ಬೇಕಾಗಿರುವ ಅಗತ್ಯ ಸೌಲಭ್ಯಗಳನ್ನು ದೊರಕಿಸುತ್ತೇವೆ. ಈಗಾಗಲೇ ತಮ್ಮ ಕಚೇರಿಯ ಅಧಿಕಾರಿಗಳು ಗಿರಿಧರ ಅವರನ್ನು ಭೇಟಿ ಮಾಡಿ ನೆರವು ನೀಡುವ ಬಗ್ಗೆ ತಿಳಿಸಿದ್ದಾರೆ ಎಂದು ಹೇಳಿದ್ದಾರೆ. ಜಿಲ್ಲಾಧಿಕಾರಿ ಹರೀಶಕುಮಾರ್ ಕೆ. ಮತ್ತು ಜಿಪಂ ಸಿಇಒ ಎಂ.ರೋಶನ್ ಅವರು ರೈತ ಗಿರಿಧರ ನೆರವಿಗೆ
ಸೂಕ್ತವಾಗಿ ಸ್ಪಂದಿಸುವುದಾಗಿ ಹೇಳಿದ್ದಾರೆ.

ಕೆಲವು ದಾನಿಗಳು ವೈಯಕ್ತಿಕವಾಗಿ ಸಹಾಯ ಮಾಡಲು ಮುಂದೆ ಬಂದಿದ್ದಾರೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಳ್ಳು ಗಾಡಿ ಹಾಗೂ ಟಿಲ್ಲರ್‌ಗೆ ಅರ್ಜಿ ಪಡೆದಿದ್ದಾರೆ. ಈ ಬಗ್ಗೆ ಕನ್ನಡಪ್ರಭಕ್ಕೆ ಗಿರಿಧರ್ ಧನ್ಯವಾದ ಸಲ್ಲಿಸಿದ್ದಾರೆ.