ಕಾರವಾರ (ಆ. 05): ಇಲ್ಲಿನ ಐಎನ್‌ಎಸ್‌ ಕದಂಬ ನೌಕಾನೆಲೆಯಲ್ಲಿ ಭಾನುವಾರ ಭದ್ರತೆ ಹೆಚ್ಚಿಸಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ. ರಕ್ಷಣಾ ಇಲಾಖೆಯಿಂದ ತುರ್ತು ಸೂಚನೆ ಬಂದ ಹಿನ್ನೆಲೆಯಲ್ಲಿ ನೌಕಾನೆಲೆಯಲ್ಲಿ ಹಠಾತ್ತಾಗಿ ವ್ಯಾಪಕ ಭದ್ರತಾಕ್ರಮ ಕೈಗೊಳ್ಳಲಾಗಿದ್ದು, ಕಾರಣ ತಿಳಿದುಬಂದಿಲ್ಲ.

ಭಾನುವಾರ ಹಾಗೂ ಸೋಮವಾರ ಎರಡು ದಿನಗಳ ಕಾಲ ಬಿಗಿ ಭದ್ರತೆ ಕೈಗೊಳ್ಳಲಿದ್ದು, ನೌಕಾನೆಲೆ ಪ್ರವೇಶದ್ವಾರದಲ್ಲೂ ಹದ್ದಿನಕಣ್ಣು ಇಡಲಾಗಿದೆ. ಈ ಎರಡು ದಿನಗಳ ಕಾಲ ನೌಕಾನೆಲೆಗೆ ಗಣ್ಯರು ಹಾಗೂ ಅತಿಥಿಗಳ ಭೇಟಿಯನ್ನೂ ನಿರ್ಬಂಧಿಸಲಾಗಿದೆ.

ಪೂರ್ವನಿಗದಿತ ಭೇಟಿಯನ್ನೂ ರದ್ದುಗೊಳಿಸಲಾಗಿದ್ದು, ಜಮ್ಮು-ಕಾಶ್ಮೀರ ಸೇರಿದಂತೆ ದೇಶದ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಆದರೆ, ಈ ಬಗ್ಗೆ ಹೆಚ್ಚಿನ ವಿವರಗಳು ತಿಳಿದುಬಂದಿಲ್ಲ.