ನಗರದ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಇಂದು ಉಸಿರಾಟದ ತೊಂದರೆ ನಿವಾರಿಸಲು ಶ್ವಾಸನಾಳ ಛೇದನ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇದರಿಂದಾಗಿ ಅವರ ಉಸಿರಾಟ ಕ್ರಿಯೆ ಸರಾಗವಾಗಿ ನಡೆಯುವಂತಾಗಲಿದೆ.

ಚೆನ್ನೈ(ಡಿ.16): ಉಸಿರಾಟದ ತೊಂದರೆಯಿಂದ ಗುರುವಾರ ತಡರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದ ಡಿಎಂಕೆ ಮುಖ್ಯಸ್ಥ ಎಂ.ಕರುಣಾನಿಧಿ (92)ಅವರ ಆರೋಗ್ಯ ಸ್ಥಿರವಾಗಿದೆ.

ನಗರದ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಇಂದು ಉಸಿರಾಟದ ತೊಂದರೆ ನಿವಾರಿಸಲು ಶ್ವಾಸನಾಳ ಛೇದನ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇದರಿಂದಾಗಿ ಅವರ ಉಸಿರಾಟ ಕ್ರಿಯೆ ಸರಾಗವಾಗಿ ನಡೆಯುವಂತಾಗಲಿದೆ.

ಇದೇ ವೇಳೆ ಪರಿಣತ ವೈದ್ಯರ ತಂಡ ಅವರ ಆರೋಗ್ಯದ ಮೇಲೆ ನಿಗಾ ಇರಿಸಿದೆ ಎಂದು ಅವರು ಚಿಕಿತ್ಸೆ ಪಡೆಯುತ್ತಿರುವ ಕಾವೇರಿ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಸ್.ಅರವಿಂದನ್ ತಿಳಿಸಿದ್ದಾರೆ. ಕರುಣಾನಿಧಿ ಅನಾರೋಗ್ಯದ ಹಿನ್ನೆಲೆಯಲ್ಲಿ ಡಿಎಂಕೆ ನಾಯಕರೆಲ್ಲ ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸುತ್ತಿದ್ದಾರೆ.

ಡಿ.7ರಂದು ಒಂದು ವಾರ ಚಿಕಿತ್ಸೆ ಪಡೆದ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಅ.25ರಂದು ಡಿಎಂಕೆ ಮುಖ್ಯಸ್ಥರೇ ತಾವು ಔಷಧ ಅಲರ್ಜಿಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದರು.

ಇದೇ ವೇಳೆ ತಮಿಳುನಾಡು ವಿಧಾನಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿರುವ ಎಂ.ಕೆ.ಸ್ಟಾಲಿನ್‌'ರನ್ನು ಡಿಎಂಕೆಯ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತದೆ ಎಂದು ಹೇಳಲಾಗಿದೆ. ಈ ಬಗ್ಗೆ ಡಿ.20ರಂದು ನಡೆಯುವ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಮತ್ತೊಬ್ಬ ಪುತ್ರ ಎಂ.ಕೆ.ಅಳಗಿರಿಯವರಿಗೆ ಡಿಎಂಕೆಯಲ್ಲಿ ಸ್ಥಾನಮಾನ ಕೊಡಲಾಗುವ ಬಗ್ಗೆ ಪಕ್ಷದ ನಾಯಕರು ಮೌನ ವಹಿಸಿದ್ದಾರೆ.