ಸಿದ್ದರಾಮಯ್ಯ ಸರ್ಕಾರದ ಕೊನೆಯ ಬಜೆಟ್’ನಲ್ಲಿ ರೈತರ ಸಾಲ ಮನ್ನಾ ಆಫರ್..?

First Published 15, Feb 2018, 11:39 AM IST
Karnatas Budget 2018 News
Highlights

ರಾಜ್ಯ ಕಾಂಗ್ರೆಸ್ ಸರ್ಕಾರದ ಕೊನೆಯ ಹಾಗೂ 6ನೇ ಬಜೆಟ್ ಶುಕ್ರವಾರ ಮಂಡನೆಯಾಗಲಿದ್ದು, ಸರ್ಕಾರಿ ನೌಕರರು ಮತ್ತು ರೈತರಿಗೆ ಇದು ಬಂಪರ್ ಬಜೆಟ್ ಆಗಿರುವ ಸಾಧ್ಯತೆಯಿದೆ. ಅದೇ ರೀತಿ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಕ್ರಿಶ್ಚಿಯನ್ನರನ್ನು ಹೊರತಂದು ಅವರಿಗೇ ಪ್ರತ್ಯೇಕ ನಿಗಮ ಘೋಷಿಸುವ ಸಾಧ್ಯತೆಯೂ ಇದೆ.

ವರದಿ : ಶಿವಕುಮಾರ್ ಬೆಳ್ಳಿತಟ್ಟೆ

ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರ್ಕಾರದ ಕೊನೆಯ ಹಾಗೂ 6ನೇ ಬಜೆಟ್ ಶುಕ್ರವಾರ ಮಂಡನೆಯಾಗಲಿದ್ದು, ಸರ್ಕಾರಿ ನೌಕರರು ಮತ್ತು ರೈತರಿಗೆ ಇದು ಬಂಪರ್ ಬಜೆಟ್ ಆಗಿರುವ ಸಾಧ್ಯತೆಯಿದೆ. ಅದೇ ರೀತಿ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಕ್ರಿಶ್ಚಿಯನ್ನರನ್ನು ಹೊರತಂದು ಅವರಿಗೇ ಪ್ರತ್ಯೇಕ ನಿಗಮ ಘೋಷಿಸುವ ಸಾಧ್ಯತೆಯೂ ಇದೆ.

ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರಿಗೆ ವೇತನ ಪರಿಷ್ಕರಣೆ ಮತ್ತು ರೈತರ ಸಾಲ ಮನ್ನಾ ಸೇರಿದಂತೆ ಅನೇಕ ಜನಪ್ರಿಯ ಘೋಷಣೆಗಳು ಬಜೆಟ್‌ನಲ್ಲಿ ಪ್ರಕಟವಾಗುವ ನಿರೀಕ್ಷೆ ಇದೆ. ಆದರೆ, ಈ ಹಿಂದಿನ ಬಜೆಟ್‌ಗಳಂತೆ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತ (ಅಹಿಂದ) ವರ್ಗಕ್ಕೆ ವಿಶೇಷ ಘೋಷಣೆ ಮಾಡುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಫೆ.16ರಂದು ಹಣಕಾಸು ಸಚಿವರಾಗಿ 13ನೇ ಬಜೆಟ್ ಮಂಡಿಸಲಿದ್ದು, ಇದರಲ್ಲಿ ಸರ್ಕಾರಿ ನೌಕರಿಗೆ ಶೇ.20ರಿಂದ 30ರ ವರೆಗೂ ವೇತನ ಪರಿಷ್ಕರಣೆ ಪ್ರಕಟಿಸುವ ಸಾಧ್ಯತೆ ಇದೆ. ಹಾಗೆಯೇ ಸಹಕಾರ ಸಂಘಗಳಲ್ಲಿ ರೈತರು ಪಡೆದಿರುವ ಬೆಳೆ ಸಾಲವನ್ನೂ ಮನ್ನಾ ಮಾಡುವ ಸಂಭವವಿದೆ.

೬ನೇ ವೇತನ ಆಯೋಗದ ಅಧ್ಯಕ್ಷ ಡಾ.ಎಂ.ಆರ್. ಶ್ರೀನಿವಾಸಮೂರ್ತಿ ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಿ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ ಶಿಫಾರಸು ಮಾಡಿದ್ದಾರೆ. ಇದನ್ನಾಧರಿಸಿ ಅವರಿಗೆ ಶೇ.20ರಿಂದ 30ರಷ್ಟು ವೇತನ ಪರಿಷ್ಕರಣೆ ಮಾಡುವ ಪ್ರಸ್ತಾಪ ಬಜೆಟ್‌ನಿಂದ ಹೊರ ಬೀಳಬಹುದು. ಇದರಿಂದ ಸರ್ಕಾರದ ಬೊಕ್ಕಸಕ್ಕೆ 10,508 ಕೋಟಿ ವರೆಗೂ ಹೊರೆ ಬೀಳುವ ಸಾಧ್ಯತೆ ಇದೆ. ಆದರೆ 5.2 ಲಕ್ಷ ಸರ್ಕಾರಿ ನೌಕರರು, 5.73 ಪಿಂಚಣಿದಾರರು ಇದರ ಲಾಭ ಪಡೆಯುವುದರಿಂದ ಅವರ ಒಲವು ಕಾಂಗ್ರೆಸ್ ಪರ ವ್ಯಕ್ತವಾಗಬಹುದು ಎನ್ನುವುದು ಸರ್ಕಾರದ ಲೆಕ್ಕಾಚಾರವಾಗಲಿದೆ.

ಇದೇ ರೀತಿ ಸರ್ಕಾರ ಕಳೆದ ಬಜೆಟ್‌ನಲ್ಲಿ ಘೋಷಿಸಿದ ರೈತರ ಸಾಲ ಮನ್ನಾ ಯೋಜನೆಯ ಲಾಭವನ್ನು ಈತನಕ 8.89 ಲಕ್ಷ ರೈತರು ಪಡೆದಿದ್ದಾರೆ. ಇನ್ನೂ 14 ಲಕ್ಷ ರೈತರಿಗೆ ಜೂನ್‌ವರೆಗೂ ಸಾಲ ಮನ್ನಾ ಅನ್ವಯಿಸುತ್ತದೆ. ಇದಕ್ಕಾಗಿ ಸರ್ಕಾರ 8.165 ಕೋಟಿಯನ್ನು ಭರಿಸಿದೆ. ಹಾಗೆಯೇ 50 ಸಾವಿರಕ್ಕಿಂತ ಹೆಚ್ಚು ಮೊತ್ತದ ಸಾಲ ಪಡೆದಿರುವ 5 ಲಕ್ಷ ರೈತರಿದ್ದು, ಅದರ ಮೊತ್ತ ಸುಮಾರು 2500 ಕೋಟಿ ಆಗಲಿದೆ.

ಇದನ್ನೂ ಮನ್ನಾ ಮಾಡಿದರೆ ರೈತರ ಸಾಲ ಸಂಪೂರ್ಣ ಮನ್ನಾ ಆಗಲಿದೆ. ಹೀಗಾಗಿ ಸರ್ಕಾರ ಬಜೆಟ್‌ನಲ್ಲಿ ಇದನ್ನು ಪ್ರಧಾನವಾಗಿ ಪ್ರಸ್ತಾಪ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಇದೇ ವೇಳೆ ಈ ಬಾರಿ ಚುನಾವಣೆಯಲ್ಲಿ ವಿದ್ಯಾರ್ಥಿಗಳು ಮತ್ತು ಯುವ ಜನತೆಯನ್ನು ಹೆಚ್ಚು ಆಕರ್ಷಿಸಲು ಎಲ್ಲಾ ವಿದ್ಯಾರ್ಥಿಗಳಿಗೂ ಬಸ್ ಪಾಸ್, ಲ್ಯಾಪ್‌ಟಾಪ್‌ನಂತಹ ಜನಪ್ರಿಯ ಯೋಜನೆಗಳು, ವಿದ್ಯಾಸಿರಿ ಯೋಜನೆಗೆ ಹೆಚ್ಚಿನ ಅನುದಾನ ಹಂಚಿಕೆ ಹಾಗೂ ಯುವ ಜನತೆಯ ಉದ್ಯೋಗ ಮತ್ತು ಸ್ವಯಂ ಉದ್ಯೋಗಕ್ಕೆ ಪೂರಕವಾಗುವ ಜನಪ್ರಿಯ ಯೋಜನೆಗಳನ್ನು ಪ್ರಕಟಿಸುವ ಸಾಧ್ಯತೆ ಕಾಣುತ್ತಿದೆ.

ಇನ್ನು ಅಲ್ಪಾಸಂಖ್ಯಾತರಿಗಾಗಿ ಇರುವ ಪ್ರತ್ಯೇಕ ಅಭಿವೃದ್ಧಿ ನಿಗಮದಿಂದ ಕ್ರಿಶ್ಚಿಯನ್ ಸಮುದಾಯ ವನ್ನು ಬೇರ್ಪಡಿಸಿ ಹೊಸತಾಗಿ ಕ್ರಿಶ್ಚಿಯನ್ನರ ಅಭಿವೃದ್ಧಿನಿಗಮ ಸ್ಥಾಪಿಸುವ ಬಗ್ಗೆ ಸರ್ಕಾರ ಪ್ರಸ್ತಾಪಿಸುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಕೊನೆಯ ಬಜೆಟ್ ಮಂಡನೆಗೆ ನಲವತ್ತೆಂಟು ಗಂಟೆಗಳು ಬಾಕಿ ಇರುವಂತೆಯೇ ಕಳೆದ ವರ್ಷದ ಆಯ-ವ್ಯಯದಲ್ಲಿಹೇಳಿದ್ದೇನು, ಮಾಡಿದ್ದೇನು ಎಂಬ ಬಗ್ಗೆ ಹಿಂದಿರುಗಿ ನೋಡಿದಾಗ ಬಹುತೇಕ ಕಾರ್ಯಕ್ರಮಗಳು,ಯೋಜನೆಗಳು ಅನುಷ್ಠಾನಕ್ಕೆ ಬಂದಿವೆ ಎಂದೇ ಹೇಳಬಹುದು. ಹಾಗಂತ ನೂರಕ್ಕೆ ನೂರರಷ್ಟು ಬಜೆಟ್ ನಲ್ಲಿ ಘೋಷಿಸಿದ ಎಲ್ಲ ಕಾರ್ಯಕ್ರಮಗಳು ಜಾರಿಗೆ ಬಂದಿವೆ ಎಂದು ಹೇಳಲಾಗುವುದಿಲ್ಲ.

ಕ್ರಿಯಾ ಯೋಜನೆ, ಟೆಂಡರ್, ಅರ್ಜಿ ಆಹ್ವಾನ, ಫಲಾನುಭವಿಗಳ ಆಯ್ಕೆ ... ಈ ಎಲ್ಲ ಪ್ರಕ್ರಿಯೆಗಳು ಆದ ಮೇಲೆಯೇ ಘೋಷಿಸಿದ ಕಾರ್ಯಕ್ರಮಗಳು ಅನುಷ್ಠಾನವಾಗಬೇಕಿದೆ. ಹಾಗಾಗಿ ಬಜೆಟ್‌ನಲ್ಲಿ ಘೋಷಿಸಿದ ಕೆಲವು ಕಾರ್ಯಕ್ರಮಗಳು ಈಗ ಶುರುವಾಗುತ್ತಿವೆ ಎಂದು ಹೇಳಬಹುದು.

ವಿದ್ಯಾರ್ಥಿಗಳಿಗೆ ಸಿಗದ ಲ್ಯಾಪ್‌ಟಾಪ್: 2017-18 ನೇ ಸಾಲಿನಲ್ಲಿ ಪ್ರಥಮ ವರ್ಷದ ಪದವಿಗೆ ಪ್ರವೇಶ ಪಡೆದಿರುವ ಎಂಜಿನಿಯರಿಂಗ್, ವೈದ್ಯಕೀಯ, ಪಾಲಿಟೆಕ್ನಿಕ್ ಮತ್ತು ಪ್ರಥಮ ದರ್ಜೆ ಸರ್ಕಾರಿ ಮತ್ತು ಅನುದಾನಿತಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಎಲ್ಲ ಜಾತಿ-ಧರ್ಮಗಳ 1.5 ಲಕ್ಷ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‌ಟಾಪ್ ವಿತರಿಸುವುದಾಗಿ ಬಜೆಟ್‌ನಲ್ಲಿಘೋಷಿಸಲಾಗಿತ್ತು. ಯೋಜನೆ ಟೆಂಡರ್ ಹಂತದಲ್ಲಿದ್ದು,ಪ್ರಕ್ರಿಯೆ ಪೂರ್ಣಗೊಳ್ಳಲು ಕನಿಷ್ಠ ಒಂದು ತಿಂಗಳ ಅವಧಿಬೇಕಾಗಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಾದಲ್ಲಿ ಯೋಜನೆ ಅನುಷ್ಠಾನ ಅನುಮಾನವಾಗಿದೆ.

25 ಪಾಲಿಟೆಕ್ನಿಕ್ ಕೆಲಸ ಅರ್ಧಂಬರ್ಧ: ಗ್ರಾಮೀಣ, ಹಿಂದುಳಿದ ಮತ್ತು ಆರ್ಥಿಕವಾಗಿ ಹಿಂದುಳಿದ  ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣಕ್ಕೆ ಉತ್ತೇಜನ ನೀಡಲು ರಾಜ್ಯಾದ್ಯಂತ ಗ್ರಾಮೀಣ ಪ್ರದೇಶದಲ್ಲಿ 25 ಹೊಸ ಸರ್ಕಾರಿಪಾಲಿಟೆಕ್ನಿಕ್‌ಗಳು ಹಾಗೂ ಸರ್ಕಾರಿ ಪಾಲಿಟೆಕ್ನಿಕ್‌ಗಳಲ್ಲಿ 23 ಮಹಿಳಾ ಹಾಸ್ಟೆಲ್ ಆರಂಭಿಸುವ ಯೋಜನೆಗಳು ಅರ್ಧಂಬರ್ಧವಾಗಿವೆ.

ಜಾರಿಯಾಗದ ‘ನೀರಾ ನೀತಿ’:  ರಾಜ್ಯದ ತೆಂಗು ಬೆಳೆಗಾರರಿಗೆ ಅನುಕೂಲವಾಗಿಸುವುದು ಹಾಗೂ ನೀರಾ ಪ್ರಿಯರಿಗೆ ಪೌಷ್ಠಿಕ ಪಾನೀಯ ಒದಗಿಸಲು 2017-18 ನೇ ಸಾಲಿನ ಬಜೆಟ್‌ನಲ್ಲಿ ಘೋಷಣೆಯಾಗಿದ್ದ ‘ನೀರಾ ನೀತಿ’ ಇಲ್ಲಿಯವರೆಗೂ ಅನುಷ್ಠಾನಕ್ಕೆ ಬಂದಿಲ್ಲ. ನೀರಾ ಉತ್ಪಾದನೆ ಉತ್ತೇಜಿಸುವ ಸಲುವಾಗಿ ರಾಜ್ಯ ಅಬಕಾರಿ ಕಾಯಿದೆಗೆ ತಿದ್ದುಪಡಿ ತಂದು ನಿಯಮ ರೂಪಿಸಲಾಗಿತ್ತು. ಆದರೆ, ಸರ್ಕಾರ ರೂಪಿಸಿರುವ ನಿಯಮಗಳನ್ನು ಅನುಷ್ಠಾನ ಮಾಡಲು ರೈತರಿಗೆ ಸಾಧ್ಯವಾಗದಂತಾಗಿದೆ.

ಅನುಷ್ಠಾನವಾಗದ ಘೋಷಣೆ

*ಸ್ತ್ರೀ ಶಕ್ತಿ ಒಕ್ಕೂಟಗಳ ಮೂಲಕ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ‘ಸವಿರುಚಿ’ ಸಂಚಾರಿ ಕ್ಯಾಂಟೀನ್ ಆರಂಭ 

*ಉತ್ತರ ಕರ್ನಾಟಕದಲ್ಲಿ ಪ್ರತ್ಯೇಕ ಬಯಲಾಟ ನಾಟಕ ಅಕಾಡೆಮಿ ಸ್ಥಾಪನೆ

*ಬೆಂಗಳೂರು ಮತ್ತು ಬೆಳಗಾವಿಯಲ್ಲಿ ತಲಾ 10 ಕೋಟಿ ರು. ವೆಚ್ಚದಲ್ಲಿ ಖಾದಿ ಪ್ಲಾಜಾ ಸ್ಥಾಪನೆ

*ಕರ್ನಾಟಕ ರಾಜ್ಯದ ಏಕೀಕರಣದ 60 ವರ್ಷಗಳ ಸವಿ ನೆನಪಿಗಾಗಿ ವಿಶ್ವ ಕನ್ನಡ ಸಮ್ಮೇಳನ ಆಯೋಜನೆ

ಕ್ರೈಸ್ತರಿಗೆಂದೇ ಆಯೋಗ?

ಇನ್ನು ಬಜೆಟ್‌ನಲ್ಲಿ ಹೊಸ ತೆರಿಗೆಗಳನ್ನು ಹಾಕದೆ, ಮಧ್ಯಮ ವರ್ಗಕ್ಕೆ ಮತ್ತು ಬಡವರಿಗೆ ಕೆಲವು ರಿಯಾಯಿತಿಗಳನ್ನು ಪ್ರಕಟಿಸುವ ಸಂಭವ ಇದೆ. ಕೃಷಿ ಮತ್ತು ಕೈಗಾರಿಕೆಗಳ ಉತ್ತೇಜನ ಮತ್ತು ಕೌಶಲ್ಯ ಅಭಿವೃದ್ಧಿ ಹಾಗೂ ನವ ಉದ್ಯಮಗಳಿಗೆ ಪ್ರೋತ್ಸಾಹ ನೀಡುವ ಕಾರ್ಯಕ್ರಮಗಳನ್ನು ಬಜೆಟ್‌ನಲ್ಲಿ ಪ್ರಸ್ತಾಪ ಮಾಡುವ ನಿರೀಕ್ಷೆ ಇದೆ.

ಆಡಳಿತ ಸುಧಾರಣೆಗೆ ಹೆಚ್ಚು ಗಮನ ಹರಿ ಸುವ ಸಾಧ್ಯತೆ ಇದ್ದು, ಆನ್‌ಲೈನ್ ಖಾತೆ, ಆನ್ ಲೈನ್ ಪೇಮೆಂಟ್‌ನಂಥ ಸುಧಾರಿತ ತಂತ್ರಜ್ಞಾನಗಳ ಮೂಲಕ ಆಡಳಿತಕ್ಕೆ ಒತ್ತು ನೀಡುವ ಸಾಧ್ಯತೆ ಇದೆ. ಸರ್ಕಾರ ಈಗಾಗಲೇ ಪ್ರಕಟಿಸಿರುವ ವಿದ್ಯುತ್ ಚಾಲಿತ ವಾಹನಗಳ ನೀತಿಗೆ ಅನುಗುಣವಾಗಿ ಸಾಲ ಸೌಲಭ್ಯ, ಹೂಡಿಕೆ ಗಳನ್ನು ಉತ್ತೇಜಿಸುವ ಕಾರ್ಯಕ್ರಮಗಳು ಮತ್ತು ಉದ್ಯಮ ಸ್ಥಾಪಿಸುವ ಬಗ್ಗೆ ಪ್ರಸ್ತಾಪಿಸುವ ಸಾಧ್ಯತೆಯೂ ಇದೆ. ಗ್ರಾಮೀಣ ಭಾಗಕ್ಕೆ ಹೆಚ್ಚಿನ ಸೌಲಭ್ಯ, ನಗರ ಪ್ರದೇಶದಲ್ಲಿ ಮೂಲಸೌಕರ್ಯಕ್ಕೆ ಹಾಗೂ ಬೆಂಗಳೂರು ನಗರದಲ್ಲಿ ಟ್ರಾಫಿಕ್ ಸಮಸ್ಯೆ ತಡೆಯುವ ಬೃಹತ್ ಯೋಜನೆಗಳಿಗೂ ಬಜೆಟ್‌ನಲ್ಲಿ ಆದ್ಯತೆ ಸಿಗುವ ಸಾಧ್ಯತೆ ಇದೆ.

ಒಟ್ಟಾರೆ ಈ ಬಾರಿ ಬಜೆಟ್ ಕೇವಲ ಅಹಿಂದ ಮಾತ್ರವಲ್ಲದೆ ಎಲ್ಲಾ ವರ್ಗದ ಜನರನ್ನೂ ಸಂತೃಪ್ತಿಗೊಳಿಸುವ ಕಾರ್ಯಕ್ರಮಗಳನ್ನು ಒಳಗೊಳ್ಳುವ ಸಾಧ್ಯತೆ ಇದ್ದು, ಇದಕ್ಕಾಗಿ ಹೆಚ್ಚಿನ ಸಂಪೂನ್ಮೂಲ ಬೇಕಿರುವುದರಿಂದ ಬಜೆಟ್ ಗಾತ್ರ 2.1 ಲಕ್ಷ ಕೋಟಿ ಸಮೀಪಿಸುವ ಸಾಧ್ಯತೆ ಇದೆ. ಇದಕ್ಕಾಗಿ ಬೇಕಾಗುವ ರಾಜಸ್ವವನ್ನು ವಾಣಿಜ್ಯ ತೆರಿಗೆ ಮತ್ತು ಕೇಂದ್ರ ಸರ್ಕಾರದ ಅನುದಾನಗಳಿಂದ ನಿರೀಕ್ಷಿಸಬಹು ದಾಗಿದೆ. ಉಳಿದಂತೆ ಸ್ವಂತ ಮೂಲದಿಂದ ರಾಜಸ್ವ ಹೆಚ್ಚಿಸಿಕೊಳ್ಳಲು ಗಮನ ಹರಿಸಬೇಕಾಗುತ್ತದೆ ಎಂದು ತೆರಿಗೆ ತಜ್ಞ ಬಿ.ಟಿ.ಮನೋಹರ್ ಹೇಳಿದ್ದಾರೆ.

ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಸಾರಿಗೆ ಇಲಾಖೆಗೆ ಹೆಚ್ಚಿನ ಅನುದಾನ ನಿರೀಕ್ಷಿಸಲಾಗಿದೆ. ಮಹಿಳೆಯರಿಗೆ ಮೀಸಲಾದ ಇಂದಿರಾ ಸಾರಿಗೆ, ರಿಯಾಯಿತಿ ದರದ ಇಂದಿರಾ ಪಾಸ್, ಸಾರಿಗೆ ನೌಕರರು ಹಾಗೂ ಅವರ ಕುಟುಂಬದ ಆರೋಗ್ಯ ಸೇವೆಗಾಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ, ಕೆಎಸ್‌ಆರ್‌ಟಿಸಿಗೆ 15 ಡಬಲ್ ಡೆಕ್ಕರ್ ಬಸ್ ಖರೀದಿ, ಮಹಿಳೆಯರಿಗೆ ಉಚಿತ ವಾಹನ ತರಬೇತಿ ಹಾಗೂ ಚಾಲನಾ ಪರವಾನಗಿ ಕಾರ್ಯಕ್ರಮ ಜಾರಿಯಾಗುವ ನಿರೀಕ್ಷೆ ಇದೆ.

loader