ಚುನಾವಣಾ ವೆಚ್ಚ : ಕುಮಾರಸ್ವಾಮಿ ಮೇಲೋ..? ಸಿದ್ದರಾಮಯ್ಯ ಮೇಲೋ..?

First Published 1, Aug 2018, 2:05 PM IST
Karnataka state polls most expensive ever
Highlights

ಕರ್ನಾಟಕ ಚುನಾವಣೆಯಲ್ಲಿ ಈ ಬಾರಿ ರಾಜಕಾರಣಿಗಳು ಅತ್ಯಧಿಕ ಪ್ರಮಾಣದಲ್ಲಿ ಖರ್ಚು ವೆಚ್ಚಗಳನ್ನು ಮಾಡಿದ್ದಾರೆ. ಈ ಬಾರಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗಿಂತ ಸಿದ್ದರಾಮಯ್ಯ ಅವರೇ ಅತ್ಯಧಿಕ ಪ್ರಮಾಣದಲ್ಲಿ ಖರ್ಚು ಮಾಡಿದ್ದಾರೆ.

ಬೆಂಗಳೂರು :  ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿಯೇ ಲಕ್ಷಾಂತರ ರು. ಖರ್ಚು ಮಾಡಲಾಗುತ್ತದೆ. ಇನ್ನು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿದರೆ ಕೋಟಿ ಕೋಟಿ ರು. ಖರ್ಚು ಮಾಡಬೇಕಾಗುತ್ತದೆ ಎಂಬುದು ಸಾಮಾನ್ಯರ ಊಹೆ. ಆದರೆ, ವಿಧಾನಸಭೆ ಚುನಾವಣೆಯಲ್ಲಿ ಯಾರೂ ಊಹಿಸದಷ್ಟು ಹಣವನ್ನು ಅಭ್ಯರ್ಥಿ ಯೊಬ್ಬರು ಖರ್ಚು ಮಾಡಿದ್ದಾರೆ.

ಅದು ಕೇವಲ 500 ರು...! ಆಶ್ಚರ್ಯವೆನಿಸಿದರೂ ಇದು ಸತ್ಯ. ಶಿರಹಟ್ಟಿ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅಮೃತ್ ರತ್ನಾಕರ್ ಏಣಿ ಕೇವಲ 500 ರು. ಮಾತ್ರ ಚುನಾವಣಾ  ವೆಚ್ಚ ಮಾಡಿರುವ ಬಗ್ಗೆ ಚುನಾ ವಣಾ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ. ಅಮೃತ್ ರತ್ನಾಕರ್ ಏಣಿ ಕೇವಲ 500 ರು. ವೆಚ್ಚ ಮಾಡುವ ಮೂಲಕ 2018ರ ಚುನಾ ವಣೆಯಲ್ಲಿ ಅತಿ ಕಡಿಮೆ ಖರ್ಚು ಮಾಡಿದರೆ, ಮಂಗಳೂರು ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಾಜಿ ಶಾಸಕ ಜೆ.ಆರ್. ಲೋಬೋ 27.27 ಲಕ್ಷ ರು. ವೆಚ್ಚ ಮಾಡುವ ಮೂಲಕ ಅತಿ ಹೆಚ್ಚು ಖರ್ಚು ಮಾಡಿದ್ದಾರೆ.

ಚುನಾವಣೆ ಆಯೋಗಕ್ಕೆ ನೀಡಿರುವ ಮಾಹಿತಿಯಲ್ಲಿ ಈ ವಿಷಯ ಗೊತ್ತಾಗಿದೆ. ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಬೇಕಾದರೆ ಕೋಟ್ಯಂತರ ಹಣ ಸುರಿಯಬೇಕಾಗುತ್ತದೆ ಎಂಬುದು ಕಟು ಸತ್ಯ. ಅಭ್ಯರ್ಥಿಗಳು ಮತದಾರರನ್ನು ಸೆಳೆಯಲು ಕೋಟಿ ಕೋಟಿ ರು. ವ್ಯಯಿಸಬೇಕಾಗುತ್ತದೆ. 

ಆದರೆ, ಅದು ಅನಧಿಕೃತ. ಚುನಾವಣೆ ಆಯೋಗಕ್ಕೆ ಅಧಿಕೃತವಾಗಿ ನೀಡಿರುವ ಮಾಹಿತಿ ಮಾತ್ರ ಲಕ್ಷದ ಲೆಕ್ಕದಲ್ಲಿ ಮಾತ್ರ. ಚುನಾವಣಾ ಆಯೋಗವು ಪ್ರತಿ ಅಭ್ಯರ್ಥಿಗೆ ಗರಿಷ್ಠ ವೆಚ್ಚ 28  ಲಕ್ಷ ರು. ಎಂದು ನಿಗದಿ ಮಾಡಿತ್ತು. ಅದರಂತೆ ಅಭ್ಯರ್ಥಿಗಳು ಆಯೋಗ ನಿಗದಿಪಡಿಸಿದ ಗಡಿಯಲ್ಲಿಯೇ ಲೆಕ್ಕ ತೋರಿಸಿದ್ದಾರೆ. ಕಳೆದ ಮೇ ತಿಂಗಳಲ್ಲಿ ನಡೆದ ಚುನಾವಣೆಗೆ ಸ್ಪರ್ಧಿಸಿದ್ದ ಎಲ್ಲಾ ಅಭ್ಯರ್ಥಿಗಳು ಚುನಾವಣಾ ಆಯೋಗ ಸೂಚಿಸಿ ದಂತೆ ಚುನಾವಣಾ ವೆಚ್ಚವನ್ನು ಸಲ್ಲಿಕೆ ಮಾಡಿದ್ದಾರೆ. 

ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಪೈಕಿ 145  ಮಂದಿ 15 ರಿಂದ 20 ಲಕ್ಷ ರು. ವರೆಗೆ ಖರ್ಚು ಮಾಡಿರುವ ವಿವರ ಸಲ್ಲಿಸಿದ್ದಾರೆ. 24  ಅಭ್ಯರ್ಥಿಗಳು 20- 27 ಲಕ್ಷ ರು. ವೆಚ್ಚ ಮಾಡಿರುವ ಬಗ್ಗೆ ಮಾಹಿತಿ ಒದಗಿಸಿದ್ದಾರೆ. 82 ಕ್ಕೂ ಹೆಚ್ಚು ಅಭ್ಯರ್ಥಿಗಳು 5 ಸಾವಿರ ರು. ವೆಚ್ಚ ಮಾಡಿರುವ ಬಗ್ಗೆ ವಿವರಣೆ ನೀಡಿದ್ದಾರೆ. ಇನ್ನುಳಿದ ಅಭ್ಯರ್ಥಿಗಳು 10 ಸಾವಿರ ರು.ನಿಂದ 14 ಲಕ್ಷ ರು.ವರೆಗೆ ಚುನಾವಣೆಯಲ್ಲಿ ಖರ್ಚು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಘಟಾನುಘಟಿಗಳ ಮಾಹಿತಿ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಮತ್ತು ಶಾಸಕ ಶ್ರೀರಾಮುಲು ಎರಡು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದು,ಚುನಾವಣಾ ಆಯೋಗದ ಮಿತಿಯಲ್ಲಿ ಖರ್ಚು ಮಾಡಿರುವ ಬಗ್ಗೆ ಮಾಹಿತಿ ಒದಗಿಸಿದ್ದಾರೆ. ಕುಮಾರಸ್ವಾಮಿ ಅವರು ರಾಮನಗರ ಕ್ಷೇತ್ರದಲ್ಲಿ 9.51 ಲಕ್ಷ ರು. ಮತ್ತು ಚನ್ನಪಟ್ಟಣದಲ್ಲಿ 10.22 ಲಕ್ಷ ರು. ವೆಚ್ಚ ಮಾಡಿರುವ ಬಗ್ಗೆ ಮಾಹಿತಿ ಒದಗಿಸಿದ್ದಾರೆ. ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ 17.51  ಲಕ್ಷ ರು. ಹಾಗೂ ಬದಾಮಿ ಕ್ಷೇತ್ರದಲ್ಲಿ 19. 60 ಲಕ್ಷ ರು., ಮತ್ತು ಶ್ರೀ ರಾಮುಲು ಮೊಳಕಾಲ್ಮೂರಿನಲ್ಲಿ 19.12 ಲಕ್ಷ ರು. ಮತ್ತು ಬದಾಮಿಯಲ್ಲಿ 20 ಲಕ್ಷ ರು. ವೆಚ್ಚ ಮಾಡಲಾಗಿದೆ ಎಂಬ ವಿವರ ಸಲ್ಲಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಶಿಕಾರಿಪುರ ಕ್ಷೇತ್ರದಲ್ಲಿ 18. 14 ಲಕ್ಷ ರು. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದಲ್ಲಿ 16.56 ಲಕ್ಷ ರು. ಕೆ.ಎಸ್. ಈಶ್ವರಪ್ಪ ಶಿವಮೊಗ್ಗ ಕ್ಷೇತ್ರದಲ್ಲಿ 17.80 ಲಕ್ಷ ರು. ಡಿ.ಕೆ.ಶಿವಕುಮಾರ್ ಕನಕಪುರ ಕ್ಷೇತ್ರದಲ್ಲಿ 12.96 ಲಕ್ಷ ರು. ಎಚ್.ಡಿ.ರೇವಣ್ಣ ಹೊಳೇನರಸೀಪುರ ಕ್ಷೇತ್ರದಲ್ಲಿ 9.90 ಲಕ್ಷ ರು., ಡಾ.ಜಿ.ಪರಮೇಶ್ವರ್ ಕೊರಟಗೆರೆ ಕ್ಷೇತ್ರದಲ್ಲಿ 8.68 ಲಕ್ಷ ರು. ವೆಚ್ಚ ಮಾಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ನಡುವೆ, ಕೆಲವರು ಅಭ್ಯರ್ಥಿಗಳು ಇನ್ನು ಚುನಾವಣಾ ವೆಚ್ಚ ಸಲ್ಲಿಸಿಲ್ಲ ಎಂದು ಹೇಳಲಾಗಿದೆ. 

loader