ಬೆಂಗಳೂರು (ಜು. 17): ಶಾಲಾ-ಕಾಲೇಜುಗಳಲ್ಲಿ ಹೆಚ್ಚುತ್ತಿರುವ ಡ್ರಗ್ಸ್ ಬಳಕೆಗೆ ಕಡಿವಾಣ ಹಾಕಲು ‘ಮಾದಕ ದ್ರವ್ಯ ವಸ್ತು ನಿಗ್ರಹ ದಳ’ ರಚನೆ ಮಾಡುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.   

ರಾಜ್ಯದಲ್ಲಿ ಡ್ರಗ್ಸ್  ಮಾಫಿಯಾ ಹೆಡೆಮುರಿ ಕಟ್ಟುವ ಸಂಪೂರ್ಣ ಹೊಣೆಯನ್ನು ಎಸ್‌ಪಿ ಹಾಗೂ ಡಿಸಿಪಿಗಳು ಹೊರಬೇಕು, ಮಾದಕ ದ್ರವ್ಯ ಜಾಲ ನಿಗ್ರಹ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಒಂದು ವಾರದೊಳಗೆ ಕಾರ್ಯಯೋಜನೆ ಸಿದ್ಧಪಡಿಸಿ ವರದಿ ನೀಡುವಂತೆ ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ರಾಜ್ಯದಲ್ಲಿ ವ್ಯಾಪಕವಾಗುತ್ತಿರುವ ಡ್ರಗ್ಸ್ ಮಾಫಿಯಾ ಜಾಲ ನಿಯಂತ್ರಣ ಸಂಬಂಧ ಸೋಮವಾರ ವಿಧಾನಸೌಧದಲ್ಲಿ ಐಪಿಎಸ್ ಅಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳೊಂದಿಗೆ ಡಾ.ಜಿ. ಪರಮೇಶ್ವರ್ ಸಭೆ ನಡೆಸಿದರು.

ಡ್ರಗ್ಸ್ ದಂಧೆ ಬಗ್ಗೆ ತೀವ್ರ ದೂರುಗಳು ಕೇಳಿ ಬರುತ್ತಿದ್ದು, ಬೇರು ಮಟ್ಟದಲ್ಲಿಯೇ ಡ್ರಗ್ಸ್ ಮಾಫಿಯಾವನ್ನು ಕಿತ್ತೊಗೆಯಬೇಕು. ಇಲ್ಲದಿದ್ದರೆ ಕರ್ನಾಟಕ ಮತ್ತೊಂದು ಪಂಜಾಬ್ ಆಗಬಹುದು ಎಂಬ ಆತಂಕ ಜನರಲ್ಲಿ ವ್ಯಕ್ತವಾಗುತ್ತಿದೆ. ಹೀಗಾಗಿ ಮಾದಕ ದ್ರವ್ಯ ವ್ಯಸನಕ್ಕೆ ಬೇಗ ಬಲಿಯಾಗುವ ಶಾಲಾ-ಕಾಲೇಜುಗಳ ಮಕ್ಕಳ ಬಗ್ಗೆ ವಿಶೇಷ ನಿಗಾ ವಹಿಸಬೇಕು. ಇದಕ್ಕಾಗಿ ಅಗತ್ಯವಾದರೆ ಆ್ಯಂಟಿ ರ‌್ಯಾಗಿಂಗ್ ಸ್ಕ್ವಾಡ್ ಮಾದರಿಯಲ್ಲಿ ‘ಆ್ಯಂಟಿ ಡ್ರಗ್ಸ್ ಸ್ಕ್ವಾಡ್’ ರಚನೆ ಮಾಡಬೇಕು ಎಂದರು.

ರಾಜ್ಯದಲ್ಲಿ ಹಾಗೂ ಶಾಲಾ-ಕಾಲೇಜುಗಳಲ್ಲಿ  ಮೊದಲು ರ‌್ಯಾಗಿಂಗ್ ದೊಡ್ಡ ತಲೆ ನೋವಾಗಿತ್ತು. ಆ್ಯಂಟಿ ರ‌್ಯಾಗಿಂಗ್ ಸ್ಕ್ವಾಡ್ ರಚನೆ ಬಳಿಕ ರ‌್ಯಾಗಿಂಗ್ ಕಡಿಮೆ ಆಗಿತ್ತು. ಅದೇ ಮಾದರಿಯಲ್ಲಿ ಮಾದಕ ವಸ್ತುಗಳ ನಿಯಂತ್ರಣ ಸಮಿತಿ ಅಥವಾ ದಳ ರಚಿಸುವ ಬಗ್ಗೆ ಕಾರ್ಯತಂತ್ರ ರೂಪಿಸಬೇಕು. ಈ ಬಗ್ಗೆ ಪೊಲೀಸ್ ಇಲಾಖೆಯೊಂದಿಗೆ ಶಿಕ್ಷಣ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳು ಕೈ ಜೋಡಿಸಬೇಕು ಎಂದು ಸೂಚನೆ ನೀಡಿದರು.

ಪೊಲೀಸರ ಭಯ ಹೋಗಿದೆ:

ಡ್ರಗ್ಸ್ ಮಾಫಿಯಾ ವ್ಯಾಪಕವಾಗಲು ಪೊಲೀಸರ ಭಯ ಇಲ್ಲದಿರುವುದು ಮುಖ್ಯ ಕಾರಣ. ಪೊಲೀಸರು ಕ್ರಮ ತೆಗೆದುಕೊಳ್ಳುತ್ತಾರೆ ಎನ್ನುವ ಭಯ ಮಾರಾಟ ಮಾಡುವವರಿಗೆ ಹಾಗೂ ಖರೀದಿ ಮಾಡುವವರಿಗೆ ಇಬ್ಬರಿಗೂ ಇಲ್ಲ. ಈ ಭಯ ಇಲ್ಲದ ಕಾರಣದಿಂದಲೇ ಅವರು ಆರಾಮವಾಗಿ ಇದ್ದಾರೆ. ಇದರ ನಿಯಂತ್ರಣಕ್ಕೆ ಪೊಲೀಸ್ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಜಿಲ್ಲಾ ವ್ಯಾಪ್ತಿಯಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ನಗರ ಮಟ್ಟದಲ್ಲಿ ಪೊಲೀಸ್ ಉಪ ಆಯುಕ್ತರು ಈ ಹೊಣೆ ಹೊರಬೇಕು ಎಂದು ಸೂಚನೆ ನೀಡಿದರು. ಗಾಂಜಾ ಬೆಳೆ ತಡೆಯಿರಿ: ಕೆಲವು ಜಿಲ್ಲೆಗಳಲ್ಲಿ ಗಾಂಜಾ ಬೆಳೆಯನ್ನು ಬೆಳೆಯುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ವಿಶೇಷವಾಗಿ ಚಿಕ್ಕಬಳ್ಳಾಪುರ, ಹಾಸನ, ಶಿವಮೊಗ್ಗ ಸೇರಿದಂತೆ ಹಲವು ಕಡೆ ಗಾಂಜಾ ಬೆಳೆಯುತ್ತಿದ್ದಾರೆ. ಅಂತಹ ಬೆಳೆ ಬೆಳೆಯುತ್ತಿರುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಿ ಎಂದು ಸೂಚನೆ ನೀಡಿದರು. ಸಭೆಯಲ್ಲಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು, ನಗರ ಪೊಲೀಸ್ ಆಯುಕ್ತ ಸುನೀಲ್ ಕುಮಾರ್ ಮತ್ತಿತರಿದ್ದರು.