ಕಸ ಸಂಗ್ರಹಣೆಯಲ್ಲಿ ಶುಲ್ಕ ಸಂಗ್ರಹಿಸಲು ಮುಂದಾಗಿರುವ ಬಿಬಿಎಂಪಿ ನಿರ್ಧಾರಕ್ಕೆ ಕಾಂಗ್ರೆಸ್‌ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಬಿಬಿಎಂಪಿಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಬೆಂಗಳೂರು(ಡಿ.17): ಬಿಬಿಎಂಪಿಯು ಸಾರ್ವಜನಿಕರಿಂದ ದುಬಾರಿ ತ್ಯಾಜ್ಯ ಶುಲ್ಕ ಸಂಗ್ರಹ ಮಾಡುವ ಮೂಲಕ ಜನರ ಲೂಟಿಗೆ ಮುಂದಾಗಿದೆ. ಇದರ ವಿರುದ್ಧ ಡಿ.21ರಂದು ಬಿಬಿಎಂಪಿ ಕೇಂದ್ರ ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌ ಎಚ್ಚರಿಕೆ ನೀಡಿದ್ದಾರೆ.

ಕೆಪಿಸಿಸಿ ವತಿಯಿಂದ ಬೆಂಗಳೂರಿನ ಮೌರ್ಯವೃತ್ತದ ಬಳಿ ತ್ಯಾಜ್ಯ ಶುಲ್ಕ ಸಂಗ್ರಹದ ವಿರುದ್ಧ ಹಮ್ಮಿಕೊಂಡಿದ್ದ ಬೃಹತ್‌ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೊರೋನಾದಿಂದ ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿರುವ ಸಾರ್ವಜನಿಕರನ್ನು ಲೂಟಿ ಮಾಡಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಮುಂದಾಗಿವೆ. ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ದರ ಏರಿಕೆಗಳಂತಹ ಕ್ರಮಗಳಿಂದ ಬಡವರ ಶೋಷಿಸುತ್ತಿರುವ ಸರ್ಕಾರವು ಇದೀಗ ಪ್ರತಿ ಮನೆಯಿಂದ ಮಾಸಿಕ 200 ರು. ಕಸ ಶುಲ್ಕ ಸಂಗ್ರಹಿಸುವ ಮೂಲಕ ಜನರನ್ನು ಲೂಟಿ ಹೊಡೆಯಲು ಮುಂದಾಗಿದೆ ಎಂದು ಕಿಡಿ ಕಾರಿದರು.

ಜೇಬಿಗೆ ಕತ್ತರಿ: ಬಿಬಿಎಂಪಿಯಿಂದ ಜನವರಿಯಿಂದಲೇ ಕಸ ಶುಲ್ಕ ವಸೂಲಿ..?

Scroll to load tweet…

ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಮಾತನಾಡಿ, ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದ್ದು ಇದರ ಭಾರವನ್ನು ಜನರ ಮೇಲೆ ಹಾಕುತ್ತಿದೆ ಎಂದು ದೂರಿದರು. ಈ ವೇಳೆ ಶಾಸಕರಾದ ಎನ್‌.ಎ. ಹ್ಯಾರಿಸ್‌, ವಿಧಾನಪರಿಷತ್‌ ಸದಸ್ಯ ಬಿ.ಕೆ. ಹರಿಪ್ರಸಾದ್‌, ಎಂ. ನಾರಾಯಣಸ್ವಾಮಿ, ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ಸೇರಿ ಹಲವರು ಹಾಜರಿದ್ದರು.