ಬೆಂಗಳೂರು [ಆ.10]:  ನೆರೆ ಹಾವಳಿಯಿಂದಾಗಿ ಸಂಕಷ್ಟಕ್ಕೊಳಗಾಗಿರುವ ನಾಡಿನ ಸಂತ್ರಸ್ತರಿಗೆ ನೆರವು ನೀಡಲು ತತ್‌ಕ್ಷಣ 3 ಸಾವಿರ ಕೋಟಿ ರು. ಬಿಡುಗಡೆ ಮಾಡುವಂತೆ ಕೋರಿ ಕೇಂದ್ರಕ್ಕೆ ಪತ್ರ ಬರೆದಿರುವ ರಾಜ್ಯ ಸರ್ಕಾರ, ನೆರೆ ಸಂತ್ರಸ್ತರು ಧೃತಿಗೆಡಬೇಕಾದ ಅಗತ್ಯ ಇಲ್ಲ. ಎಲ್ಲಾ ರೀತಿಯ ನೆರವು ನೀಡಲು ಸರ್ಕಾರ ಬದ್ಧವಾಗಿದೆ ಎಂದು ಅಭಯ ನೀಡಿದೆ.

ರಾಜ್ಯದ ಪ್ರವಾಹ ಪರಿಸ್ಥಿತಿ ಮತ್ತು ಕೈಗೊಂಡಿರುವ ಕ್ರಮಗಳ ಕುರಿತು ಶನಿವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ರಾಜ್ಯದ ಅರ್ಧಕ್ಕರ್ಧ ಜಿಲ್ಲೆಗಳು ಪ್ರವಾಹದಿಂದ ನಲುಗಿವೆ. ಭಾರೀ ಪ್ರಮಾಣದಲ್ಲಿ ಉಂಟಾಗಿರುವ ನೆರೆ ಹಾವಳಿಯಿಂದ ಅಂದಾಜು ಆರು ಸಾವಿರ ಕೋಟಿ ರು.ನಷ್ಟುಮೌಲ್ಯದ ಆಸ್ತಿ-ಪಾಸ್ತಿಯ ನಷ್ಟವಾಗಿರಬಹುದು ಎಂದು ಊಹಿಸಲಾಗಿದೆ. ಹೀಗಾಗಿ ರಾಜ್ಯದ ನೆರವಿಗೆ ಧಾವಿಸುವಂತೆ ಕೇಂದ್ರದ ಮೊರೆ ಹೋಗಿದ್ದು, ತಕ್ಷಣ 3 ಸಾವಿರ ಕೋಟಿ ರು. ನೆರವು ನೀಡುವಂತೆ ಕೋರಿ ಕೇಂದ್ರ ಹಣಕಾಸು ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ಹೇಳಿದರು.

ಸಂತ್ರಸ್ತರಿಗೆ ಅಗತ್ಯ ನೆರವು ನೀಡಲು ಸರ್ಕಾರ ಬದ್ಧವಿದೆ. ಅಪಾರ ಪ್ರಮಾಣದಲ್ಲಿ ಸರ್ಕಾರಕ್ಕೆ ದೇಣಿಗೆ ಬರುತ್ತಿದ್ದು, ಎಷ್ಟೇ ಖರ್ಚಾದರೂ ಶಾಶ್ವತ ಪುನರ್ವಸತಿ ಕಲ್ಪಿಸಲಾಗುವುದು. ಯಾರೂ ಆತಂಕ ಪಡುವ ಅಗತ್ಯ ಇಲ್ಲ. ಪ್ರವಾಹದ ಭೀಕರತೆ ಎದುರಿಸಲು ಸರ್ಕಾರ ಬದ್ಧವಾಗಿದ್ದು, ಸಂತ್ರಸ್ತರು ಧೈರ್ಯ ಕಳೆದುಕೊಳ್ಳಬೇಕಾದ ಅಗತ್ಯ ಇಲ್ಲ. ಸರ್ಕಾರವು ನಿಮ್ಮ ಜತೆ ಇದೆ ಎಂದು ಇದೇ ವೇಳೆ ಆಶ್ವಾಸನೆ ನೀಡಿದರು.

ಪರಿಸ್ಥಿತಿ ನಿಭಾಯಿಸಲು ಅಗತ್ಯ ಇರುವಲ್ಲೆಲ್ಲಾ ಕೇಂದ್ರ ಸರ್ಕಾರ, ಸೇನೆಯ ನೆರವು ಕೇಳಿದ್ದೇವೆ. ಸಕಾಲದಲ್ಲಿ ಕೇಂದ್ರ ಸರ್ಕಾರವು ಸ್ಪಂದಿಸಿದೆ. ಭೂ, ಸೇನೆ, ನೌಕಾಪಡೆ ಮತ್ತು ವಾಯುಪಡೆಗಳ ನೆರವು ಪಡೆದಿದ್ದೇವೆ. ಪ್ರಸ್ತುತ ಎನ್‌ಡಿಆರ್‌ಎಫ್‌ನ 20 ತಂಡಗಳು, ಸೇನೆಯ 11 ತಂಡಗಳು, ನೌಕಪಡೆಯ 5 ತಂಡಗಳು, ವಾಯುಪಡೆಯ 4 ಹೆಲಿಕಾಪ್ಟರ್‌ಗಳು, ಎಸ್‌ಡಿಆರ್‌ಎಫ್‌ನ 2 ತಂಡಗಳು, ಅಗ್ನಿಶಾಮಕ ದಳದ ಸಿಬ್ಬಂದಿ, ಪೊಲೀಸ್‌ ಸಿಬ್ಬಂದಿ ಹಾಗೂ ಇತರರು ರಕ್ಷಣಾ ಕಾರ್ಯದಲ್ಲಿ ನಿರಂತರಾಗಿದ್ದಾರೆ ಎಂದು ಹೇಳಿದರು.

ರಾಯಚೂರು, ಯಾದಗಿರಿ, ವಿಜಯಪುರ, ಬಾಗಲಕೋಟೆ, ಗದಗ ಜಿಲ್ಲೆಗಳಲ್ಲಿ ವೈಮಾನಿಕ ಪ್ರವಾಸ ನಡೆಸಿದ್ದೇನೆ. ತರುವಾಯ ದೆಹಲಿಗೆ ತೆರಳಿ ಪ್ರಧಾನಿ, ಗೃಹ ಸಚಿವರು ಸೇರಿದಂತೆ ಇತರೆ ಸಚಿವರನ್ನು ಭೇಟಿಯಾಗಿ ರಾಜ್ಯದ ಪರಿಸ್ಥಿತಿ ಕುರಿತು ವಿವರಿಸಲಾಗಿದೆ. ಹಾಸನ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ದಕ್ಷಿಣ ಕನ್ನಡ, ಉತ್ತರ ಕನ್ನಡದಲ್ಲಿ ಕೂಡ ಗಂಭೀರ ಪರಿಸ್ಥಿತಿ ಎದುರಾಗಿದೆ. ಮಂಗಳೂರಿಗೆ ರಸ್ತೆ ಮತ್ತು ರೈಲು ಸಂಚಾರ ಕಡಿತವಾಗಿದೆ. ಕೊಡಗು, ದಕ್ಷಿಣ ಕನ್ನಡದಲ್ಲಿ ಭೂ ಕುಸಿತ, ಸಾವು-ನೋವು ಸಂಭವಿಸಿದೆ. ಶಾಸಕರು, ಸಂಸದರು ಪಕ್ಷಾತೀತವಾಗಿ ರಕ್ಷಣೆ ಮತ್ತು ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.

ಸಿಆರ್‌ಪಿಎಫ್‌ ಪರೀಕ್ಷೆ ಮುಂದೂಡಿಕೆ

ಆ.13ರಂದು ಸಿಆರ್‌ಪಿಎಫ್‌ಗೆ ನೇಮಕ ಪರೀಕ್ಷೆ ಇದ್ದು, ಪ್ರವಾಹದಿಂದಾಗಿ ಹಲವು ಜನರ ದಾಖಲೆಗಳು ನೀರುಪಾಲಾಗಿವೆ. ಕೆಲವರ ದಾಖಲೆಗಳು ಕೊಚ್ಚಿ ಹೋಗಿರುವ ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ಮುಂದೂಡುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಕೇಂದ್ರಕ್ಕೆ ಮನವಿ ಮಾಡಿದರು.

ಸಿಆರ್‌ಪಿಎಫ್‌ ಪರೀಕ್ಷೆಗೆ ರಾಜ್ಯದ ಮೂರು ಸಾವಿರ ಮಂದಿ ಹಾಜರಾಗಬೇಕಾಗಿದೆ. ಆದರೆ, ಪ್ರವಾಹದಿಂದಾಗಿ ಅಭ್ಯರ್ಥಿಗಳ ಮೂಲ ದಾಖಲೆಗಳು ಇಲ್ಲವಾಗಿವೆ. ದಾಖಲೆಗಳು ಇಲ್ಲದೆ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಅಭ್ಯರ್ಥಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕಾಗಿ ನೇಮಕ ಪ್ರಕ್ರಿಯೆಯನ್ನು ಮುಂದೂಡಬೇಕು ಎಂದರು.