ಹುಬ್ಬಳ್ಳಿ[ಜು. 07]  ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ರಾಜಿನಾಮೆ ಎನ್ನುವುದ ಕಂಪ್ಲೀಟ್ ಸಿದ್ದರಾಮಯ್ಯ ಗೇಮ್ ಪ್ಲ್ಯಾನ್‌. ಇದರಲ್ಲಿ ಬಿಜೆಪಿಯ ಯಾವುದೇ ಪಾತ್ರವಿಲ್ಲ.
ಸಿದ್ದರಾಮಯ್ಯ ಸಿಎಂ ಆಗಲಿ ಅಂತಾ ಕಾಂಗ್ರೆಸ್‌ನ ಒಂದು ಗುಂಪು ಕೆಲಸ ಮಾಡುತ್ತಿದೆ‌. ಇನ್ನೊಂದು ಗುಂಪು ಸಿದ್ದರಾಮಯ್ಯ ವಿರುದ್ಧ ಬಂಡೆದ್ದಿದೆ ಎಂದು ಕೇಂದ್ರ ಸಚಿವ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ್ ಜೋಶಿ ವಿಶ್ಲೇಷಣೆ ಮಾಡಿದ್ದಾರೆ.

ಕಾಂಗ್ರೆಸ್‌ನಲ್ಲಿ ರಾಷ್ಟ್ರಮಟ್ಟದಲ್ಲಿ ನಾಯಕತ್ವ ಇಲ್ಲವಾಗಿದೆ. ವೇಣುಗೋಪಾಲ್ ಮಾತನ್ನು ಯಾರೂ ಕೇಳುತ್ತಿಲ್ಲ. ರಾಹುಲ್ ಗಾಂಧಿ ಯಾವ ದೇಶಕ್ಕೆ ಹೋಗಿದ್ದಾರೆ, ಯಾಕೆ  ಹೋಗಿದ್ದಾರೆ ಎಂದು ಯಾರಿಗೂ ಗೊತ್ತಿಲ್ಲ ಎಂದು ಹೇಳಿದ್ದಾರೆ.

ನಮಗೆ ಸಚಿವ ಸ್ಥಾನ ಬೇಡವೇ ಬೇಡ; ಗೌಡ್ರ ಕುಟುಂಬದ ವಿರುದ್ಧ ತಿರುಗಿ ಬಿದ್ದ ಅತೃಪ್ತ ಶಾಸಕರು

ನಾಯಕರಿಲ್ಲದೆ ಕಾಂಗ್ರೆಸ್ ಶಾಸಕರು ಬಂಡೆದಿದ್ದಾರೆ. ಬಿಜೆಪಿಗೆ ಸರ್ಕಾರ ರಚನೆಯ ಬಗ್ಗೆ ಯಾವುದೇ ಆತುರವಿಲ್ಲ. ಅತೃಪ್ತ ಶಾಸಕರಿಗೆ ಬಿಜೆಪಿಯಿಂದ ವಿಮಾನ ಮಾಡಿ ಕೊಟ್ಟಿಲ್ಲ. ರಾಜೀನಾಮೆ ಕೊಟ್ಟ ಶಾಸಕರಲ್ಲಿ ಹಲವರು ಸ್ವಂತ ವಿಮಾನ ಖರೀದಿಸುವ ಸಾಮರ್ಥ್ಯ ಹೊಂದಿದ್ದಾರೆ‌.

ಇದು ಸಿದ್ದರಾಮಯ್ಯ ಆಟ ಎಂದು ಖರ್ಗೆಯವರಿಗೂ ಗೊತ್ತಿದೆ. ಮೈತ್ರಿ ಸರ್ಕಾರ ಕುಸಿದರೆ ಚುನಾವಣೆ ನಡೆಯಲು ಬಿಜೆಪಿ ಬಿಡಲ್ಲ. ನಾವೇ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸುತ್ತೇವೆ. ಸ್ಪೀಕರ್ ರಾಜಿನಾಮೆ ಸ್ವೀಕರಿಸುತ್ತಾರೆ ಎನ್ನುವ ವಿಶ್ವಾಸವಿದೆ. ಅವರು ಯಾಕೆ ಕಚೇರಿಗೆ ಬರುತ್ತಿಲ್ಲ ಎನ್ನುವ ಪ್ರಶ್ನೆ ಎದುರಾಗುತ್ತೆ‌. ಹೀಗಾಗಿ ಮಂಗಳವಾರದವರೆಗೆ ಕಾಯ್ದು ನೋಡೋಣ‌ ಎಂದು ಹೇಳಿದರು.

ಅತೃಪ್ತ ಶಾಸಕರು ಬಿಜೆಪಿಗೆ ಬರುವುದಾದರೆ ಅವರ ಹಿನ್ನೆಲೆ ಪರಿಶೀಲಿಸಿ ತೆಗೆದುಕೊಳ್ಳುತ್ತೇವೆ. ನಮ್ಮ ರಾಷ್ಟ್ರೀಯ ನಾಯಕರ ಬಗ್ಗೆ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿರುವುದು ದುರದೃಷ್ಟಕರ ಎಂದು ಹೇಳಿದರು.