ಬೆಂಗಳೂರು :  ರಾಜ್ಯ ಸಚಿವ ಸಂಪುಟದ ಕುರಿತು ತೀರ್ಮಾನಕ್ಕೆ ಬರಲು ಇನ್ನೂ ಮೂರರಿಂದ ನಾಲ್ಕು ದಿನ ಆಗಬಹುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇಲ್ಲಿನ ಕರ್ನಾಟಕ ಭವನದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಸೀಟು ಹಂಚಿಕೆ ಪ್ರಕ್ರಿಯೆ ಅಂತಿಮಗೊಂಡಿದೆ. ಕಾಂಗ್ರೆಸ್‌ಗೆ 22 ಹಾಗೂ ಜೆಡಿಎಸ್ ಗೆ 12  ಖಾತೆ ಹಂಚಿಕೆ ಯಾಗಿದೆ. 

ಇನ್ನು ಖಾತೆಗಳ ಹಂಚಿಕೆ ಯಷ್ಟೇ ಬಾಕಿ ಇದೆ. ಅದೇ ರೀತಿ ಸಚಿವರ ಪ್ರಮಾಣ ವಚನ ಪ್ರಕ್ರಿಯೆ ಒಂದೇಸುತ್ತಿ ನಲ್ಲಿ ಪೂರ್ಣಗೊಳ್ಳಬೇಕೇ ಅಥವಾ ಎರಡು ಸುತ್ತಿನಲ್ಲಿ ಆಗಬೇಕೇ ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಬೇಕಿದೆ. ಶನಿವಾರ ರಾಹುಲ್ ಗಾಂಧಿ ಜತೆ ನಡೆಸಿದ ಚರ್ಚೆಯಲ್ಲಿ ಈ ಕುರಿತು ಯಾವುದೇ ತೀರ್ಮಾನ ಸಾಧ್ಯವಾಗಲಿಲ್ಲ ಎಂದು ಸಿದ್ದರಾಮಯ್ಯತಿಳಿಸಿದರು. 

ಖಾತೆ ಹಂಚಿಕೆ ಬಗ್ಗೆ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಅವರು, ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸ ಬಹುದು. ಅಗತ್ಯ ಬಿದ್ದರೆ ನಾನೂ ಮಾತುಕತೆಯಲ್ಲಿ ಭಾಗವಹಿಸುತ್ತೇನೆ ಎಂದರು. ಇದೇ ವೇಳೆ ಸಚಿವ ಸಂಪುಟ ರಚನೆ ಬಗ್ಗೆ ಯಾವುದೇ ಗೊಂದಲಗಳಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಏತನ್ಮಧ್ಯೆ ಹೊಸಬರಿಗೆ ಸಚಿವ ಸ್ಥಾನ ನೀಡುತ್ತೀರಾ ಎಂಬ ಪ್ರಶ್ನೆಗೆ, ಸಚಿವ ಸ್ಥಾನಕ್ಕೆ ಹೊಸಬರು ಬೇಡಿಕೆ ಇಟ್ಟಿದ್ದಾರೆ, ನೋಡೋಣ ಎಂದಷ್ಟೇ ಉತ್ತರಿಸಿದರು.  ನವದೆಹಲಿ: ‘ರಾಹುಲ್ ಗಾಂಧಿ ವಿದೇಶಕ್ಕೆ ತೆರಳಿದ್ದಾರೆ. ಆದರೆ ಅವರು ವಿದೇಶಕ್ಕೆ ತೆರಳಿದ ಮಾತ್ರಕ್ಕೆ ಕರ್ನಾಟಕ ಸಂಪುಟ ವಿಸ್ತರಣೆ ವಿಳಂಬ ಆಗುವುದಿಲ್ಲ’ ಎಂದು ಕರ್ನಾಟಕದ ಕಾಂಗ್ರೆಸ್ ಪ್ರಭಾರಿ ಕೆ.ಸಿ. ವೇಣು ಗೋಪಾಲ್ ಅವರು ಸ್ಪಷ್ಟಪಡಿ ಸಿದ್ದಾರೆ. 

ಭಾನುವಾರ ರಾತ್ರಿ ಇಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ರಾಹುಲ್ ಗಾಂಧಿ ಅವರು ಫೋನ್‌ನಲ್ಲಿ ಲಭ್ಯವಿದ್ದು, ಅಲ್ಲಿಯೇ ಅವರು ತಮ್ಮ ನಿರ್ಣಯ ತಿಳಿಸುತ್ತಾರೆ’ ಎಂದು ಹೇಳಿದರು. ‘ಕರ್ನಾಟಕದ ಕಾಂಗ್ರೆಸ್ ನಾಯಕರು ಹಾಗೂ ನಾನು, ಜೆಡಿಎಸ್ ಜತೆ ಮಾತನಾಡುತ್ತಿ ದ್ದೇವೆ. ನಾವು ಒಂದು ನಿರ್ಣಯ ತೆಗೆದುಕೊಂಡ ಬಳಿಕ ನಂತರ ರಾಹುಲ್ ಜತೆ ಮಾತನಾಡುತ್ತೇವೆ. ಇದು ಪ್ರಕ್ರಿಯೆ. ೧-೨ ದಿನದಲ್ಲಿ ಖಾತೆ ಹಂಚಿಕೆ ಪ್ರಕ್ರಿಯೆ ಮುಗಿಯಲಿದೆ. ನಂತರ ಸಂಪುಟ ವಿಸ್ತರಣೆ ಮಾಡಲಿದ್ದೇವೆ’ ಎಂದು ವೇಣು ಗೋಪಾಲ್ ತಿಳಿಸಿದರು.