ಬೆಂಗಳೂರು [ಜು.24]: ವಿಶ್ವಾಸಮತ ನಿರ್ಣಯಕ್ಕೆ ಸೋಲುಂಟಾಗಿ ರಾಜ್ಯ ಸರ್ಕಾರ ಪತನವಾಗಿದ್ದರೂ, ಅತೃಪ್ತ ಶಾಸಕರ ಅನರ್ಹತೆ ಪ್ರಕ್ರಿಯೆ ನಿಂತಿಲ್ಲ. ಸುಪ್ರೀಂ ಕೋರ್ಟ್ ತೀರ್ಪಿನ ಹೊರತಾಗಿಯೂ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಅವರು ವಿಪ್ ಜಾರಿ ಹಕ್ಕು ಶಾಸಕಾಂಗ ಪಕ್ಷಕ್ಕಿದೆ ಎಂಬ ರೂಲಿಂಗ್ ನೀಡಿದ್ದರಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಸದನಕ್ಕೆ ಹಾಜರಾಗಿ ಕಲಾಪದಲ್ಲಿ ಸರ್ಕಾರದ ಪರ ಮತ ಹಾಕುವಂತೆ ನೀಡಿದ ವಿಪ್ ತಾಂತ್ರಿಕವಾಗಿ ಅನ್ವಯವಾಗುತ್ತದೆ.

ಕಾಂಗ್ರೆಸ್ ಈಗಾಗಲೇ ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಅತೃಪ್ತ ಕಾಂಗ್ರೆಸ್ ಶಾಸಕರ ವಿರುದ್ಧ ಸ್ಪೀಕರ್‌ಗೆ ದೂರು ದಾಖಲಿಸಿದೆ. ಈ ಪ್ರಕರಣದ ವಿಚಾರಣೆ ಇನ್ನು ನಡೆಯಬೇಕಿದೆ. ಹೀಗಾಗಿ ಸದನ ನಡೆಯದಿದ್ದರೂ ಸ್ಪೀಕರ್ ಅವರು ಈ ಪ್ರಕ್ರಿಯೆಯನ್ನು ನಡೆಸಿ ಅತೃಪ್ತರ ಮೇಲೆ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಸ್ಪೀಕರ್ ಇಂತಹ ತೀರ್ಮಾನ ಕೈಗೊಂಡರೂ ಅದನ್ನು ಅತೃಪ್ತರು ನ್ಯಾಯಾಲಯದಲ್ಲಿ ಪ್ರಶ್ನಿಸಬಹುದು. ಅಂತಿಮವಾಗಿ ಈ ವಿಚಾರ ನ್ಯಾಯಾಲಯದಲ್ಲೇ ಇತ್ಯರ್ಥವಾಗುವ ಸಂಭವವೇ ಹೆಚ್ಚು.

ಕಾಲಾವಕಾಶ ಕೋರಿದ ಅತೃಪ್ತರು: ಪಕ್ಷಾಂತರ ನಿಷೇಧ ಕಾಯ್ದೆಯಡಿ ತಮ್ಮ ವಿರುದ್ಧ ದಾಖಲಾಗಿರುವ ಅನರ್ಹತೆ ಪ್ರಕರಣದ ದೂರಿನ ವಿಚಾರಣೆಗೆ ಮಂಗಳವಾರ ಹಾಜರಾಗ ಬೇಕಿದ್ದ 16 ಮಂದಿ ಅತೃಪ್ತ ಶಾಸಕರು ನಾಲ್ಕು ವಾರಗಳ ಕಾಲಾವಕಾಶ ಕೋರಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ಸದನಕ್ಕೆ ಹಾಜರಾಗುವಂತೆ ನೀಡಿದ್ದ ವಿಪ್ ಉಲ್ಲಂಘನೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನ 12 ಮತ್ತು
ಜೆಡಿಎಸ್‌ನ ಮೂವರು ಹಾಗೂ ಕಾಂಗ್ರೆಸ್ ಸಹ ಸದಸ್ಯ ಆರ್.ಶಂಕರ್ ಸೇರಿ 16 ಅತೃಪ್ತರ ವಿರುದ್ಧ ಕಾಂಗ್ರೆಸ್ ಶಾಸಕಾಂಗ ನಾಯಕ ಸಿದ್ದರಾಮಯ್ಯ ಮತ್ತು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ನಿರ್ಗಮಿತ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಅನರ್ಹತೆ ದೂರು ದಾಖಲಿಸಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಸ್ಪೀಕರ್ ಎಲ್ಲ ಅತೃಪ್ತ ಶಾಸಕರಿಗೆ ನೋಟಿಸ್ ಜಾರಿ ಮಾಡಿದ್ದರು. 

ನೋಟಿಸ್ ಹಿನ್ನೆಲೆಯಲ್ಲಿ ಸ್ಪೀಕರ್‌ಗೆ ಪತ್ರ ಬರೆದಿರುವ ಅತೃಪ್ತರು ವಿಚಾರಣೆಗೆ ಹಾಜರಾಗಲು ೪ ವಾರ ಕಾಲಾವಕಾಶ ಕೋರಿದ್ದಾರೆ.ಸ್ಪೀಕರ್ ಕಚೇರಿಗೆ ಅತೃಪ್ತರ ಪರ ವಕೀಲರು: ಅತೃಪ್ತ ಶಾಸಕರು ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಅತೃಪ್ತ ಶಾಸಕರ ಪರ ವಕೀಲರು ಮಂಗಳವಾರ ಸ್ಪೀಕರ್ ಜೊತೆ ಚರ್ಚೆ ನಡೆಸಿದರು. ಅನರ್ಹತೆ ಬಗ್ಗೆ ನಮ್ಮ ಶಾಸಕರಿಗೆ ಪಕ್ಷದಿಂದ ನೋಟಿಸ್ ಬಂದಿಲ್ಲ. ವಿಪ್ ಜಾರಿ ಹಾಗೂ ಉಲ್ಲಂಘನೆ ಯಾದರೆ ಆ ಬಗ್ಗೆ ನೋಟಿಸ್ ನೀಡಬೇಕು. ಪಕ್ಷದಿಂದ ನೋಟಿಸ್ ಜಾರಿ ಮಾಡಿ 7 ದಿನ ನೀಡಬೇಕು. ಆದರೆ ಇದ್ಯಾವುದನ್ನೂ ಪಾಲಿಸದೆ ಅನರ್ಹತೆ ದೂರು ನೀಡಲಾಗಿದೆ. ಹೀಗಾಗಿ ವಿಚಾರಣೆಗೆ ಹಾಜರಾಗಲು ಕಾಲಾವಕಾಶ ನೀಡುವಂತೆ ವಕೀಲರು ಮನವಿ ಮಾಡಿದರು.