ಬೆಂಗಳೂರು[ಜು.08]: ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಔಷಧ, ಪರಿಹಾರ ಕಂಡು ಹಿಡಿದಿದ್ದೇವೆ. ಸದ್ಯದಲ್ಲೇ ಎಲ್ಲ ಗೊಂದಲಗಳೂ ನಿವಾರಣೆ ಆಗಲಿವೆ. ಆದರೆ, ನಾವು ಹುಡುಕಿಕೊಂಡಿರುವ ಪರಿಹಾರ ಏನು ಎಂಬುದನ್ನು ಬಹಿರಂಗಪಡಿಸುವುದಿಲ್ಲ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಅಗತ್ಯ ಔಷಧ, ಪರಿಹಾರ ಸಿದ್ಧಪಡಿಸಿಕೊಂಡಿದ್ದೇವೆ. ಸೋಮವಾರ ಡಾ.ಜಿ. ಪರಮೇಶ್ವರ್ ಅವರ ನಿವಾಸದಲ್ಲಿ ಎಲ್ಲರೂ ಸೇರುತ್ತಿದ್ದೇವೆ. ಮಂಗಳವಾರ ಪಕ್ಷದ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ವಿಪ್ ಜಾರಿ ಮಾಡಿ ಎಲ್ಲರಿಗೂ ನೋಟಿಸ್ ನೀಡಿದ್ದೇವೆ. ಎಲ್ಲ ಶಾಸಕರಿಗೂ ನೋಟಿಸ್ ತಲುಪಲಿದೆ. ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು

ಮಧ್ಯಂತರ ಚುನಾವಣೆಗೆ ಬಿಜೆಪಿ ಯತ್ನ: ಕಾಂಗ್ರೆಸ್‌ನ ೭೮ ಮಂದಿ ಶಾಸಕರಿಗೂ ಚುನಾವಣೆ ಬೇಡ ಎಂದು ಹೇಳಿದ್ದಾರೆ. ಪಕ್ಷ ಉಳಿಯಲಿ ಹಾಗೂ ಸರ್ಕಾರ ಉಳಿಯಲಿ ಎಂಬುದು ಬಹುತೇಕರ ಅಭಿಪ್ರಾಯ. ಬಿಜೆಪಿ ಶಾಸಕರೂ ಸಹ ‘ಅಣ್ಣಾ ಏನಾದರೂ ಮಾಡಿ ಚುನಾವಣೆಗೆ ಹೋಗದಂತೆ ತಡೆಯಿರಿ’ ಎಂದು ಮನವಿ ಮಾಡುತ್ತಿದ್ದಾರೆ. ಆದರೆ, ಬಿಜೆಪಿ ಹೈಕಮಾಂಡ್ ತಕ್ಷಣ ಚುನಾವಣೆಗೆ ಹೋಗುವ ತಯಾರಿಯಲ್ಲಿದ್ದಾರೆ. ಹೀಗಾಗಿ ರಾಜೀನಾಮೆ ನೀಡುತ್ತಿರುವ ಎಲ್ಲ ಶಾಸಕರಿಗೂ ಸಚಿವ ಸ್ಥಾನದ ಭರವಸೆ ನೀಡಿದ್ದಾರೆ. ಎಲ್ಲರನ್ನೂ ಮಂತ್ರಿ ಮಾಡಲು ಅವಕಾಶಗಳಿಲ್ಲ. ಹೀಗಾಗಿ ಅವರದ್ದೇ ಆದ ತಂತ್ರ ಇಟ್ಟುಕೊಂಡು ಹೋಗುತ್ತಿದ್ದಾರೆ.

ಬಿಜೆಪಿಯವರು ಈವರೆಗೆ ನಾವು ಸರ್ಕಾರ ರಚಿಸಲು ಹೋಗುವುದಿಲ್ಲ ಎನ್ನುತ್ತಿದ್ದರು. ಇದೀಗ ಸರ್ಕಾರ ರಚಿಸಲು ಸಿದ್ಧ ಎನ್ನುತ್ತಿದ್ದಾರೆ. ಬಿಜೆಪಿಯವರು ಯಾರ ಬಳಿ ಮಾತನಾಡುತ್ತಿದ್ದಾರೆ. ಏನು ಆಫರ್‌ಗಳನ್ನು ನೀಡಿದ್ದಾರೆಂಬುದು ನಮಗೆ ಗೊತ್ತಿದೆ. ಕಣ್ಮುಚ್ಚಿ ಹಾಲು ಕುಡಿಯುತ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದರು.

‘ಎಚ್‌ಡಿಕೆ ಬೆನ್ನಿಗೆ ಚೂರಿ ಹಾಕೋದಿಲ್ಲ’: ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಮಲ್ಲಿಕಾಜು ನರ್ ಖರ್ಗೆ ಅಥವಾ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡುವ ಆಯ್ಕೆಗಳನ್ನು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ತಳ್ಳಿ ಹಾಕಿದ್ದು, ‘ನಾನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಬೆನ್ನಿಗೆ ಚೂರಿ ಹಾಕುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾ

ಈಗಾಗಲೇ ಕಾಂಗ್ರೆಸ್ ಪಕ್ಷದ ವತಿಯಿಂದ ಐದು ವರ್ಷ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಆಗಿರಬೇಕು ಎಂದು ಮಾತು ನೀಡಿದ್ದೇವೆ. ಇದೀಗ ಖರ್ಗೆ ಅಥವಾ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು ಎಂದರೆ ಅದು ಹೈಕಮಾಂಡ್ ಹಂತದಲ್ಲಿ ತೀರ್ಮಾನ ಆಗಲಿ. ಇದರ ಬಗ್ಗೆ ನಾವು ಮಧ್ಯಪ್ರವೇಶ ಮಾಡುವುದಿಲ್ಲ. ಬೆನ್ನಿಗೆ ಚೂರಿ ಹಾಕಿ ನಮಗೆ ಅಧಿಕಾರ ಕೊಡಿ ಎಂದು ಕೇಳುವ ಹಂತದಲ್ಲಿ ನಾನು ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕುಮಾರಸ್ವಾಮಿ ಅವರ ಅಧಿಕಾರ ಕಿತ್ತುಕೊಳ್ಳಲು ನಾವು ಮುಂದಾಗುವುದಿಲ್ಲ. ಅಗತ್ಯವಾದರೆ ಪಕ್ಷಕ್ಕಾಗಿ ನಮ್ಮ ಅಧಿಕಾರವನ್ನೂ ತ್ಯಾಗ ಮಾಡಲು ಸಿದ್ಧವಿದ್ದೇವೆ ಎಂದರು.