ನವದೆಹಲಿ[ಜು.09]: ಕರ್ನಾಟಕ ರಾಜಕೀಯ ಹೈಡ್ರಾಮಾ ಸದ್ಯ ರಾಷ್ಟ್ರಾದ್ಯಂತ ಸದ್ದು ಮಾಡುತ್ತಿದೆ. ದೋಸ್ತಿ ಸರ್ಕಾರಕ್ಕೇನೂ ತೊಂದರೆ ಇಲ್ಲ, ನಿಶ್ಚಿಂತೆಯಿಂದ ಮುಂದುವರೆಯುತ್ತದೆ ಎನ್ನುತ್ತಿರುವಾಗಲೇ ರಾಜೀನಾಮೆ ನೀಡುತ್ತಾರೆಂದು ಊಹಿಸಲೂ ಸಾಧ್ಯವಾಗದ ನಾಯಕರು ತಮ್ಮ ಸ್ಥಾನಕ್ಕೆ ಗುಡ್ ಬೈ ಎಂದಿದ್ದಾರೆ. ಹಾಗಾದ್ರೆ ನೋಡ ನೋಡುತ್ತಿದ್ದಂತೆಯೇ ದೋಸ್ತಿ ಸರ್ಕಾರಕ್ಕೆ ಈ ಬಹುದೊಡ್ಡ ಶಾಕ್ ಕೊಟ್ಟವರು ಯಾರು? ಈ ರಾಜಕೀಯ ನಾಟಕದ ಹಿಂದಿನ ರೂವಾರಿ ಯಾರು ಎಂಬ ಪ್ರಶ್ನೆ ಮೂಡುವುದು ಸಹಜ.

ಸದ್ಯ ಈ ಎಲ್ಲಾ ರಾಜಕೀಯ ಬೆಳವಣಿಗೆಗಳ ಹಿಂದೆ ಕೇಂದ್ರ ಸಚಿವರೊಬ್ಬರು ಇದ್ದಾರೆನ್ನಲಾಗುತ್ತಿದೆ. ಬಿಜೆಪಿಯು ಕರ್ನಾಟಕದ ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಬೀಳಿಸುವ ಸಂಪೂರ್ಣ ಹೊಣೆಯನ್ನು ಇವರೇ ವಹಿಸಿದ್ದರೆಂದು, ರಾಷ್ಟ್ರೀಯ ಪತ್ರಿಕೆಯೊಂದು ವರದಿ ಮಾಡಿದೆ. 

ಆಪರೇಷನ್ ಕಮಲದ ಜವಾಬ್ದಾರಿ ಪಡೆದುಕೊಂಡಿದ್ದ ಮಹಾರಾಷ್ಟ್ರ ಮೂಲದ ಈ ಬಿಜೆಪಿ ನಾಯಕ, ಪ್ರತಿಯೊಂದೂ ಆಗು ಹೋಗುಗಳನ್ನು ಖುದ್ದು ಪರಿಶೀಲಿಸುತ್ತಿದ್ದರು. ಇದಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಘಟಕದ ನಾಯಕರೂ ಕೇಂದ್ರ ಸಚಿವರಿಗೆ ಸಹಕರಿಸಿದ್ದರು. ರಾಜೀನಾಮೆ ನೀಡಿದ್ದ ಅತೃಪ್ತ ಶಾಸಕರು ಮುಂಬೈಗೆ ತೆರಳಿದ್ದಾಗ, ಅವರಿಗೆ ಎಲ್ಲಾ ವ್ಯವಸ್ಥೆ ಮಾಡಿಸುವಂತೆ ರಾಜ್ಯ ಬಿಜೆಪಿಯ ಈ ಇಬ್ಬರು ನಾಯಕರು ಮಹಾರಾಷ್ಟ್ರ ಬಿಜೆಪಿಗೆ ಸೂಚಿಸಿದ್ದರೆನ್ನಲಾಗಿದೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅದೇನಿದ್ದರೂ ಪ್ರಸ್ತುತ ದೋಸ್ತಿ ಸರ್ಕಾರ ಯಾವುದೇ ಲಕ್ಷಣಗಳು ಕಂಡು ಬರುತ್ತಿಲ್ಲ. ಒಂದೆಡೆ ಕೈ ನಾಯಕರು ಕಾಂಗ್ರೆಸ್ ಸಭೆಗೆ ಗೈರಾಗಿದ್ದಾರೆ. ಹಾಜರಾದ ನಾಯಕರು ದೋಸ್ತಿ ಮುಂದುವರೆಸುವುದು ಬೇಡ ಎಂದಿದ್ದಾರೆ. ಹೀಗಿರುವಾಗ ಬಿಜೆಪಿ ಸರ್ಕಾರ ರಚಿಸುವ ಸಾಧ್ಯತೆಗಳೇ ಹೆಚ್ಚು ಎನ್ನಲಾಗುತ್ತಿದೆ. 

ಎಲ್ಲವಕ್ಕೂ ಮಿಗಿಲಾಗಿ ರಾಜ್ಯ ರಾಜಕಾರಣದ ಈ ಕ್ಷಿಪ್ರ ಬೆಳವಣಿಗೆಗೆ ಮೂಲತಃ ಜೆಡಿಎಸ್‌ನಿಂದ ಬಂದ ಕಾಂಗ್ರೆಸ್‌ನ ಪ್ರಭಾವಿ ಸಚಿವರೇ ಮೂಲ ಕಾರಣವೆನ್ನಲಾಗುತ್ತಿದೆ. ಈ ಸಚಿವರ ವಿರುದ್ಧ ಸೇಡು ತೀರಿಸಿಕೊಳ್ಳಲು ಹೊರಟ ಕುಮಾರಸ್ವಾಮಿ ವಿರುದ್ಧ ಸಂಚು ರೂಪಿಸಿ, ಬೆಂಗಳೂರಿನ ಬಹುತೇಕ ಶಾಸಕರು ಹಾಗೂ ಅತೃಪ್ತರಿಂದ ರಾಜೀನಾಮೆ ಕೊಡಿಸಿದ್ದಾರೆಂದು ಬಲ್ಲ ಮೂಲಗಳು ಸ್ಪಷ್ಟಪಡಿಸಿವೆ.