ಬೆಳಗಾವಿ[ಜು.08]: ರಾಜ್ಯದ ರಾಜಕಾರಣದಲ್ಲಿ ದಿಢೀರ್ ಬೆಳವಣಿಗೆಯಿಂದ ಸದ್ಯ ಅಥಣಿ ಶಾಸಕ ಮಹೇಶ್ ಕುಮಠಳ್ಳಿ ಹಾಗೂ ಜೆಡಿಎಸ್ ಶಾಸಕ ಎಚ್.ವಿಶ್ವನಾಥ್ ರಾಜೀನಾಮೆ ನೀಡಿದ್ದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಈ ಇಬ್ಬರು ಶಾಸಕರ ಭಾವ ಚಿತ್ರಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಎಂದು ಬರೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಜೆಡಿಎಸ್ ಕಾರ್ಯಕರ್ತರನೋರ್ವ ಶಾಸಕರಾದ ಕುಮಠಳ್ಳಿ ಹಾಗೂ ವಿಶ್ವನಾಥ ವಿರುದ್ಧ ಆಕ್ರೋಶಗೊಂಡು ರಾಜೀನಾಮೆ ನೀಡಿದ ದಿನವಾದ ಜು.೬ ರಂದು ದಿನಾಂಕ ಹಾಗೂ ಭಾವಪೂರ್ವ ಶ್ರದ್ಧಾಂಜಲಿ ಎಂದು ಬರೆದು ಆಕ್ರೋಶ ಹೊರಹಾಕಿದ್ದಾರೆ.

ಅಥಣಿ ಶಾಸಕ ಮಹೇಶ್ ಕುಮಠಳ್ಳಿ ತಮ್ಮ ಭಿನ್ನಮತಕ್ಕೆ ಇಷ್ಟುದಿನ ಅಥಣಿ ಮತಕ್ಷೇತ್ರದ ಅಭಿವೃದ್ಧಿ ಕೊರತೆಯ ಹೆಸರು ಹೇಳುತ್ತ ಬಂದಿದ್ದು ಪಕ್ಷ ತೊರೆಯುವದಿಲ್ಲ ಎಂದು ಜನರನ್ನು ನಂಬಿಸಿದ್ದಾರೆ. ಸದ್ಯ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಜೊತೆ ಚರ್ಚಿಸದೆ ದಿಢೀರ್ ರಾಜೀನಾಮೆ ಕೊಟ್ಟಿದ್ದು ಸರಿಯಲ್ಲ. ಅವರ ನಿರ್ಧಾರ ತಪ್ಪಾಗಿದ್ದು ಜನರಲ್ಲಿ ತಪ್ಪು ಕಲ್ಪನೆ ಮೂಡುವಂತೆ ಮಾಡಿದ್ದಾರೆ. ಅದಕ್ಕಾಗಿ ಅವರಿಗೆ ಮತನೀಡಿದ ಮತದಾರರು ಹಾಗೂ ಮುಖಂಡರ ಜೊತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಿ ಎಂದು ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.