ಬೆಳಗಾವಿ[ಸೆ.09]: ಬೆಳಗಾವಿ ಜಿಲ್ಲೆಯ ‘ಸಾಹುಕಾರ್‌’ ಕುಟುಂಬದ ರಾಜಕೀಯ ಮೇಲಾಟ ಮುಂದುವರೆದಿದ್ದು, ಅನರ್ಹ ಶಾಸಕ, ತಮ್ಮ ಸಹೋದರ ರಮೇಶ್‌ ಜಾರಕಿಹೊಳಿ ವಿರುದ್ಧ ಮಾಜಿ ಸಚಿವ ಸತೀಶ್‌ ಜಾರಕಿಹೊಳಿ ಮತ್ತೆ ವಾಗ್ದಾಳಿ ನಡೆಸಿದ್ದಾರೆ.

ಭಾನುವಾರ ಇಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸತೀಶ್‌ ಜಾರಕಿಹೊಳಿ ಅವರು, ರಮೇಶ್‌ ಜಾರಕಿಹೊಳಿ ಸಮ್ಮಿಶ್ರ ಸರ್ಕಾರ ಪತನಗೊಳಿಸಿ ಹೀರೋ ಆಗಿರಬಹುದು. ಆದರೆ ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಹೀರೋ ಆಗಲು ಸಾಧ್ಯವಿಲ್ಲ. ಅವನು ನಮ್ಮ ಮುಂದೆ ಜೀರೋ ಎಂದರು.

‘ನನಗೆ ಪ್ರಮುಖ ಖಾತೆ ಹಾಗೂ ಡಿಸಿಎಂ ಪೋಸ್ಟ್ ಆಫರ್ ಇತ್ತು’

ಇದೇ ವೇಳೆ, ಈಗಾಗಲೇ ರಾಜೀನಾಮೆ ನೀಡಿ ಅನರ್ಹಗೊಂಡ ಶಾಸಕರಿಗೇ ಸಚಿವ ಸ್ಥಾನ ಸಿಗುತ್ತಿಲ್ಲ. ಇನ್ನೂ 15 ಮಂದಿ ಹೋದರೆ ಮಂತ್ರಿಗಿರಿ ಸಿಗುವುದು ಕಷ್ಟದ ಮಾತು. ಅಷ್ಟಕ್ಕೂ ಜೆಡಿಎಸ್‌, ಕಾಂಗ್ರೆಸ್‌ನಿಂದ ಇನ್ಯಾರೂ ರಮೇಶ್‌ ಜಾರಕಿಹೊಳಿ ಜತೆ ಹೋಗುವುದಿಲ್ಲ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಸಮ್ಮಿಶ್ರ ಸರ್ಕಾರ ಪತನಕ್ಕೆ ಯಾರು ಕಾರಣ ಎನ್ನುವುದನ್ನು ರಮೇಶ್‌ ಜಾರಕಿಹೊಳಿ ಸ್ಪಷ್ಟವಾಗಿ ಹೇಳಲಿ. ರಾಜಕೀಯ ಹತಾಶೆಯಿಂದ ಮಾತನಾಡುವುದು ಸರಿಯಲ್ಲ. ರಮೇಶ್‌ ಜಾರಕಿಹೊಳಿ ಸರ್ಕಾರ ಬೀಳಿಸಿ ಹೆಸರು ಮಾಡಿರಬಹುದು. ಅಲ್ಲದೆ ರಾಜ್ಯದಲ್ಲಿ ದೊಡ್ಡವನಾಗಿರಬಹುದು. ಆದರೆ ಜನರ ಮುಂದೆ ಅವರು ಜೀರೋ ಆಗಿದ್ದಾರೆ ಎಂದರು.

ಸತೀಶ್‌ ಸಾವಿರ ಎಕ್ರೆ ಭೂಮಿ ಹೊಡೆದಿದ್ದಾರೆ: ತಮ್ಮನ ವಿರುದ್ಧ ಬಾಂಬ್ ಸಿಡಿಸಿದ ಅಣ್ಣ!

ನೀಚ ಬುದ್ಧಿ ನನಗಿಲ್ಲ:

ಕಾಂಗ್ರೆಸ್‌ ಯುವ ಧುರೀಣ ಲಖನ್‌ ಹಾಗೂ ರಮೇಶ್‌ ಜಾರಕಿಹೊಳಿ ನಡುವೆ ಜಗಳ ಹಚ್ಚಿ ಲಾಭ ತೆಗೆದುಕೊಳ್ಳುವ ವ್ಯಕ್ತಿ ನಾನಲ್ಲ. ಅವರಿಗೆ ಜಗಳ ಹಚ್ಚುವ ನೀಚ ಬುದ್ಧಿಯೂ ನನಗಿಲ್ಲ. ಯಾವುದೊಂದು ಕಾರಣಕ್ಕೆ ಬೇರೆಯವರ ಹೆಸರು ತಳುಕು ಹಾಕುವುದು ಅವನ ಜಾಯಮಾನ. ನನಗೆ ಯಾವುದೇ ಲಾಭವಾಗುತ್ತಿಲ್ಲ ಅದು ಜನರಿಗೆ ಗೊತ್ತಿದೆ. ಅವನು ಸರ್ಕಾರ ಪತನಗೊಳಿಸಿ ದೊಡ್ಡ ಹೆಸರು ಮಾಡಿರಬಹುದು ಎಂದು ಹೇಳಿದರು.