ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿದ್ದ ಎಚ್.ಡಿ ಕುಮಾರಸ್ವಾಮಿ ಸದ್ಯ ಸಿಎಂ ಹುದ್ದೆ ಕಳೆದುಕೊಂಡಿದ್ದಾರೆ. ಅದರೊಂದಿಗೆ ಮತ್ತೊಂದು ಹುದ್ದೆ ಸಿಗುವುದು ಅನುಮಾನವಾಗಿದೆ.
ಬೆಂಗಳೂರು [ಜು.25] : ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿರುವ ಎಚ್.ಡಿ.ಕುಮಾರಸ್ವಾಮಿ ಅವರು ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಪ್ರತಿಪಕ್ಷದ ನಾಯಕನ ಸ್ಥಾನವನ್ನೂ ಅಲಂಕರಿಸುವುದಕ್ಕೆ ಸಾಧ್ಯವಾಗುತ್ತಿಲ್ಲ.
ಸಂಖ್ಯಾಬಲದಲ್ಲಿ ಕಾಂಗ್ರೆಸ್ ದೊಡ್ಡ ಪಕ್ಷವಾಗಿರುವುದರಿಂದ ಪ್ರತಿಪಕ್ಷದ ನಾಯಕನ ಸ್ಥಾನ ಸಹಜವಾಗಿಯೇ ಆ ಪಕ್ಷಕ್ಕೆ ಸೇರಲಿದೆ.
ಒಂದು ವೇಳೆ ಉಭಯ ಪಕ್ಷಗಳು ಮೈತ್ರಿ ಕೂಟ ಮುಂದುವರೆಸಿ ಜಂಟಿಯಾಗಿ ತಮ್ಮ ನಾಯಕನನ್ನಾಗಿ ಕುಮಾರಸ್ವಾಮಿ ಅವರನ್ನು ಆಯ್ಕೆ ಮಾಡಿಕೊಂಡು ಸ್ಪೀಕರ್‌ಗೆ ಪತ್ರ ಬರೆದು ಕೊಟ್ಟಲ್ಲಿ ಮಾತ್ರ ಪ್ರತಿಪಕ್ಷದ ನಾಯಕನ ಸ್ಥಾನ ಅವರ ಪಾಲಾಗಬಹುದು. ಇಲ್ಲದಿದ್ದರೆ ಜೆಡಿಎಸ್ ಶಾಸಕಾಂಗ ನಾಯಕರಾಗಿ ಮಾತ್ರ ಮುಂದುವರೆಯುತ್ತಾರೆ. ಸದ್ಯದ ಸನ್ನಿವೇಶದಲ್ಲಿ ಮೈತ್ರಿ ಕೂಟ ಆ ಮಟ್ಟಕ್ಕೆ ಮುಂದುವರೆಯುವ ಸಾಧ್ಯತೆ ಇಲ್ಲವೇ ಇಲ್ಲ ಎನ್ನಬಹುದು.
