ಬೆಂಗಳೂರು[ಜು.09]: ಮೈತ್ರಿಯ ಉಭಯ ಪಕ್ಷಗಳ ಅತೃಪ್ತ ಶಾಸಕರ ರಾಜೀನಾಮೆ, ಸರ್ಕಾರ ಬೆಂಬಲಿಸಿದ್ದ ಪಕ್ಷೇತರ ಶಾಸಕರಿಂದ ಬೆಂಬಲ ವಾಪಸ್‌ ಹಾಗೂ ಸಚಿವರ ರಾಜೀನಾಮೆ ಹಿನ್ನೆಲೆಯಲ್ಲಿ ಮುಂದೆ ಅನುಸರಿಸಬೇಕಾದ ಸಂವಿಧಾನಾತ್ಮಕ ಕ್ರಮಗಳ ಬಗ್ಗೆ ಹೈಕೋರ್ಟ್‌ ಅಡಿಷನಲ್‌ ಸಾಲಿಸಿಟರ್‌ ಜನರಲ್‌ ಪ್ರಭುಲಿಂಗ ನಾವಡಗಿ ಅವರ ಜೊತೆ ರಾಜ್ಯಪಾಲ ವಿ.ಆರ್‌. ವಾಲಾ ಚರ್ಚೆ ನಡೆಸಿದರು.

ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸದಸ್ಯರು ವಿಧಾನಸಭೆ ಸದಸ್ಯತ್ವಕ್ಕೆ ನೀಡಿರುವ ರಾಜೀನಾಮೆ ಪತ್ರಗಳನ್ನು ಮಂಗಳವಾರ ಪರಿಶೀಲಿಸುವುದಾಗಿ ಸಭಾಧ್ಯಕ್ಷ ರಮೇಶಕುಮಾರ್‌ ಹೇಳಿದ್ದಾರೆ. ಮಂಗಳವಾರ ಅಂಗೀಕರಿಸುತ್ತಾರೋ ಅಥವಾ ಮತದಾರರ ಅಭಿಪ್ರಾಯ ಪಡೆದು ನಿರ್ಧರಿಸುತ್ತಾರೋ ಇನ್ನೂ ಸ್ಪಷ್ಟವಾಗಿಲ್ಲ. ಒಂದು ವೇಳೆ ಅಂಗೀಕಾರವಾದರೆ ಸಹಜವಾಗಿ ಸರ್ಕಾರದ ಬಹುಮತ ಕಳೆದುಕೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ಅನುಸರಿಸಬೇಕಾದ ಹೆಜ್ಜೆಗಳ ಬಗ್ಗೆ ಚರ್ಚೆ ನಡೆಸಿದರೆಂದು ಹೇಳಲಾಗಿದೆ.

ಜೊತೆಗೆ ಮೈತ್ರಿ ಸರ್ಕಾರ ಉಳಿಸುವ ನಿಟ್ಟಿನಲ್ಲಿ ಉಭಯ ಪಕ್ಷಗಳ ಸಚಿವರು ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಹೊಸ ಸಚಿವ ಸಂಪುಟ ರಚಿಸಬೇಕಾಗುತ್ತದೆ. ಸಚಿವರಿಲ್ಲದೇ ಎಷ್ಟುದಿನಗಳ ಕಾಲ ಸರ್ಕಾರ ನಡೆಸಬಹುದು, ಕಾನೂನಿನಲ್ಲಿ ಇರುವ ಅವಕಾಶಗಳೇನು ಎಂಬ ಬಗ್ಗೆ ಸಲಹೆ ಪಡೆದುಕೊಂಡರೆಂದು ತಿಳಿದು ಬಂದಿದೆ.