ಬೆಂಗಳೂರು[ಜು.09]: ‘ನಾನು ಬೆಂಗಳೂರಿಗೆ ಹೊರಗಿನವನಲ್ಲ. ಅಲ್ಲದೆ, ಕಳೆದ ವರ್ಷಕ್ಕಿಂತ ಹೆಚ್ಚು ಅನುದಾನವನ್ನು ಬೆಂಗಳೂರಿಗೆ ಮೀಸಲಿಟ್ಟಿದ್ದೇವೆ. ಬೆಂಗಳೂರು ಶಾಸಕರ ಸಭೆ ಕರೆದಾಗ ಯಾವ್ಯಾವ ಶಾಸಕರು ಬಂದಿದ್ದರು ಎಂಬ ಹಾಜರಾತಿಯೂ ಇದೆ’ ಎಂದು ಬೆಂಗಳೂರಿನ ಅತೃಪ್ತ ಶಾಸಕರಿಗೆ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನ ಬಗ್ಗೆ ಕಾಳಜಿ ಇರುವ ರಾಮಲಿಂಗಾರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡಿದ್ದರೆ ಈ ಪರಿಸ್ಥಿತಿಯೇ ಉದ್ಭವಿಸುತ್ತಿರಲಿಲ್ಲ. ಪರಮೇಶ್ವರ್‌ ಅವರಿಗೆ ಜೀರೋ ಟ್ರಾಫಿಕ್‌ ಬಿಟ್ಟರೆ ಬೇರೆ ಯಾವುದೇ ಅಧಿಕಾರ ಇಲ್ಲ ಎಂದು ರಾಜರಾಜೇಶ್ವರಿನಗರ ಶಾಸಕ ಮುನಿರತ್ನ ಅವರು ಹೇಳಿಕೆ ನೀಡಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪರಮೇಶ್ವರ್‌, ನಾನು 1971ರಲ್ಲೇ ಬೆಂಗಳೂರಿಗೆ ಬಂದವನು. ನನಗೆ ಬೆಂಗಳೂರಿನ ಗಲ್ಲಿ ಗಲ್ಲಿಯೂ ಗೊತ್ತಿದೆ. ನನ್ನನ್ನು ಹೊರಗಿನವನು ಎಂದರೆ ಹೇಗೆ? ಯಾವುದೋ ಒಂದು ಜಿಲ್ಲೆಯಿಂದ ಬರುತ್ತಾರೆ ಎಂಬ ಮಾನದಂಡ ಏಕಿರಬೇಕು. ಜನಪ್ರತಿನಿಧಿಗೆ ಯಾವ ಜಿಲ್ಲೆಯಾದರೆ ಏನು ಎಂದು ಪ್ರಶ್ನಿಸಿದರು.

ಅಲ್ಲದೆ, ಶಾಸಕರಿಗೆ ಹೆಚ್ಚು ಹಣ ನೀಡಲಾಗಿದೆ. ಕಳೆದ ಬಾರಿಗಿಂತ ಈ ಬಾರಿ 11 ಸಾವಿರ ಕೋಟಿ ರು. ಬಜೆಟ್‌ನಲ್ಲಿ ಕೊಡಲಾಗಿದೆ. ನಾನು ಹಲವು ಬಾರಿ ಬೆಂಗಳೂರು ಶಾಸಕರ ಸಭೆ ನಡೆಸಿದ್ದೇನೆ. ಸಭೆಗೆ ಯಾವ್ಯಾವ ಶಾಸಕರು ಬಂದಿದ್ದರು, ಬಂದಿಲ್ಲ ಎಂಬ ಬಗ್ಗೆ ನನ್ನ ಬಳಿ ಹಾಜರಾತಿ ಇದೆ ಎಂದು ತಿರುಗೇಟು ನೀಡಿದರು.