ಮುಂಬೈ[ಜು.10]: ಕಳೆದೊಂದು ವಾರದಿಂದ ನಡೆಯುತ್ತಿರುವ ರಾಜಕೀಯ ಹೈಡ್ರಾಮಾ ಇಂದು ಮುಂಬೈಗೆ ಶಿಫ್ಟ್ ಆಗಿದೆ. ರಾಜೀನಾಮೆ ನೀಡಿ ಮುಂಬೈಗೆ ಹಾರಿದ್ದ ಅತೃಪ್ತ ಶಾಸಕರ ಮನವೊಲಿಸಲು ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಖುದ್ದು ಅಖಾಡಕ್ಕಿಳಿದಿದ್ದರು. ಆದರೆ ರೂಂ ಬುಕ್ ಮಾಡಿದ್ದರೂ ಪೊಲೀಸರು ಡಿಕೆಶಿಯನ್ನು ಹೋಟೆಲ್ ಪ್ರವೇಶಿಸದಂತೆ ತಡೆದಿದ್ದ ಹಿನ್ನೆಲೆ ಬಹುದೊಡ್ಡ ಪ್ರಸಂಗ ನಡೆದಿತ್ತು. ಇದೀಗ ರಾಷ್ಟ್ರ ಮಟ್ಟದಲ್ಲಿ ಗಮನಸೆಳೆದ ಹೋಟೆಲ್ ಡಿಕೆಶಿ ಬುಕ್ ಮಾಡಿದ್ದ ರೂಂ ಕ್ಯಾನ್ಸಲ್ ಮಾಡಿದೆ.

"

ಬುಧವಾರ ಮುಂಜಾನೆ ಕರ್ನಾಟಕ ರಾಜಕಾರಣ ಬಹುದೊಡ್ಡ ತಿರುವು ಪಡೆದುಕೊಂಡಿದ್ದು, ಬೆಂಗಳೂರಿನಿಂದ ಈ ಡ್ರಾಮಾ ಮುಂಬೈಗೆ ಶಿಪ್ಟ್ ಆಗಿದೆ. ಅತೃಪ್ತರ ಮನವೊಲಿಸುವ ಸಲುವಾಗಿ ಕಾಂಗ್ರೆಸ್ ನಾಯಕ ಡಿ. ಕೆ ಶಿವಕುಮಾರ್ ಶಾಸಕರಿದ್ದ ಹೋಟೆಲ್ ನಲ್ಲೇ ರೂಂ ಬುಕ್ ಮಾಡಿದ್ದರು. ಆದರೆ ಹೊಟೇಲ್ ತಲುಪುವ ಮುನ್ನವೇ ಮುಂಬೈ ಪೊಲೀಸರು ಅವರನ್ನು ತಡೆದಿದ್ದರು. ಆದರೆ ಪಟ್ಟು ಬಿಡದ ಡಿಕೆಶಿ ತಾನು ತೃಪ್ತರನ್ನು ಭೇಟಿಯಾಗಿಯೇ ವಾಪಾಸಾಗುತ್ತೇನೆ ಎಂದು ಹೋಟೆಲ್ ಆವರಣದಲ್ಲೇ ನಿಂತಿದ್ದರು. 

ಡಿಕೆಶಿ ನಡೆ ಗಮನಿಸಿದ ಅತೃಪ್ತ ಶಾಸಕರು 'ನಾವು ನಿಮ್ಮನ್ನು ಭೇಟಿಯಾಗುವುದಿಲ್ಲ. ದಯವಿಟ್ಟು ಇಲ್ಲಿಂದ ತೆರಳಿ. ನಿಮಗೆ ಅವಮಾನವಾಗುವುದು ಬೇಡ. ಬೆಂಗಳೂರಿನಿಂದ ವಾಪಾಸಾದ ಬಳಿಕ ನಿಮ್ಮನ್ನು ಭೇಟಿಯಾಗುತ್ತೇನೆ' ಎಂಬ ಸಂದೇಶ ರವಾನಿಸಿದ್ದರು. ಹೀಗಿದ್ದರೂ ಡಿಕೆಶಿ ಕದಲಿರಲಿಲ್ಲ. ಈ ವಿಚಾರ ರಾಷ್ಟ್ರ ಮಟ್ಟದಲ್ಲೇ ಸದ್ದು ಮಾಡಿತ್ತು. 

ಆದರೀಗ ಈ ಎಲ್ಲಾ ಹೈಡ್ರಾಮಾದಿಂದ ಹೋಟೆಲ್ ಹೆಸರು ಕೆಡುತ್ತದೆ ಎಂಬ ನಿಟ್ಟಿನಲ್ಲಿ, ಇಲ್ಲಿನ ಸಿಬ್ಬಂದಿ ಡಿಕೆಶಿ ಬುಕ್ ಮಾಡಿದ್ದ ರೂಂ ಕ್ಯಾನ್ಸಲ್ ಮಾಡಿದ್ದಾರೆ.  ಆದರೆ ಇದರಿಂದ ಕೆರಳಿರುವ ಮಾಡಲು ಡಿಕೆ ಶಿವಕುಮಾರ್ ಮಾತ್ರ ಅಲ್ಲಿಂದ ಕದಲಿಲ್ಲ. 'ಹೋಟೆಲ್ ಬುಕ್ ಮಾಡಿದ್ದ ರೂಂ ಕ್ಯಾನ್ಸಲ್ ಮಾಡಿದ್ರೆ ಮಾಡ್ಲಿ, ನನ್ನಂತಹ ಗ್ರಾಹಕರನ್ನು ಹೊಂದಿರುವುದಕ್ಕೆ ಅವರು ಹೆಮ್ಮೆಪಟ್ಟುಕೊಳ್ಳಬೇಕು. ಮುಂಬೈ ಅಂದ್ರೆ ನನಗಿಷ್ಟ. ನಾನು ಬೇರೆ ಕಡೆ ಬುಕ್ ಮಾಡುತ್ತೇನೆ' ಎಂದಿದ್ದಾರೆ. ಮಳೆ ಸುರಿಯುತ್ತಿದ್ದರೂ ಪರವಾಗಿಲ್ಲ, ಅದೇನೇ ಆದರೂ ಇಂದು ಅತೃಪ್ತರನ್ನುಭೇಟಿಯಾಗಿಯೇ ತೆರಳುತ್ತೇನೆ ಎಂಬ ಧಾಟಿಯಲ್ಲಿ ನಿಂತಿದ್ದಾರೆ.