ಬೆಂಗಳೂರು [ಜು.19] :  ಶುಕ್ರವಾರ ಮಧ್ಯಾಹ್ನ 1.30ರೊಳಗೆ ವಿಶ್ವಾಸಮತ ಸಾಬೀತು ಪಡಿಸುವಂತೆ ರಾಜ್ಯಪಾಲರ ನಿರ್ದೇಶನವನ್ನು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಪಾಲನೆ ಮಾಡಲಿದ್ದಾರೆಯೇ ಎಂಬುದು ಸಾಕಷ್ಟು ಕುತೂಹಲ ಮೂಡಿಸಿದೆ.

ರಾಜ್ಯಪಾಲರು ಸೂಚನೆ ನೀಡುತ್ತಿದ್ದಂತೆ ಕಾನೂನು ತಜ್ಞರ ಮೊರೆ ಹೋದ ಮುಖ್ಯಮಂತ್ರಿ ಕುಮಾರಸ್ವಾಮಿ ಮುಂದೆ ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ತಡರಾತ್ರಿವರೆಗೆ ಸಮಾಲೋಚನೆ ನಡೆಸಿದರು. ಕಾನೂನು ತಜ್ಞರ ಸಲಹೆ ಮೇರೆಗೆ ಮುಂದಿನ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ಹೇಳಿವೆ.

ಈ ನಡುವೆ, ಈಗಾಗಲೇ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆ ನಿರ್ಣಯವನ್ನು ಮಂಡಿಸಲಾಗಿದೆ. ಇದೇ ವಿಚಾರವಾಗಿ ಚರ್ಚೆ ನಡೆಯುತ್ತಿದೆ. ಹೀಗಾಗಿ ಈ ವಿಚಾರ ಇನ್ನೇನಿದ್ದರೂ ವಿಧಾನಸಭೆಯ ವಿವೇಚನಕ್ಕೆ ಬಿಟ್ಟಿದ್ದಾಗಿದೆ. ಹೀಗಿರುವಾಗ ರಾಜ್ಯಪಾಲರು ಸೂಚನೆ ನೀಡಲು ಸಾಧ್ಯವೇ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಅಲ್ಲದೇ, ವಿಶ್ವಾಸ ಮತಯಾಚನೆ ಈಗಾಗಲೇ ಮಂಡಿಸಿರುವ ಕಾರಣ ಕಾಲಾವಕಾಶ ಅಗತ್ಯ ಇದೆ ಎಂದು ಸುಪ್ರೀಂಕೋರ್ಟ್‌ ಮೊರೆ ಹೋಗುವ ಸಾಧ್ಯತೆ ಇದೆ. ಸರ್ಕಾರದ ಸಾಧನೆ ಮತ್ತು ಪ್ರತಿಪಕ್ಷ ಸರ್ಕಾರ ಪತನಗೊಳಿಸಲು ಅನುಸರಿಸಿದ ತಂತ್ರಗಾರಿಕೆ ಬಗ್ಗೆ ಜನತೆಗೆ ತಿಳಿಸಬೇಕಾಗಿರುವ ಕಾರಣ ಕಾನೂನಿನಲ್ಲಿ ರಕ್ಷಣೆಗೆ ಇರುವ ಅಂಶಗಳ ಕುರಿತು ಚರ್ಚಿಸಲಾಗಿದೆ ಎಂದು ಹೇಳಲಾಗಿದೆ.

ಇದಲ್ಲದೇ, ರಾಜ್ಯಪಾಲರ ನಿರ್ದೇಶನವನ್ನು ಧಿಕ್ಕರಿಸಿದರೆ ಎದುರಿಸಬಹುದಾದ ಕಾನೂನು ಸಮಸ್ಯೆಗಳ ಕುರಿತು ಸಹ ಕಾನೂನು ತಜ್ಞರಿಂದ ಸಲಹೆಗಳನ್ನು ಪಡೆದುಕೊಳ್ಳಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕ್ರಿಯಾಲೋಪದ ಬಗ್ಗೆ ಪ್ರಸ್ತಾಪಿಸಿದ್ದು, ಇದರ ಬಗ್ಗೆ ನ್ಯಾಯಾಲಯದ ಮೆಟ್ಟಿಲೇರುವ ಬಗ್ಗೆ ತಿಳಿಸಿದ್ದರು. ಇದನ್ನೇ ನೆಪವಾಗಿಟ್ಟುಕೊಂಡು ವಿಶ್ವಾಸ ಮತಯಾಚನೆಯನ್ನು ಮುಂದೂಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ.