ಬೆಂಗಳೂರು [ಜು.19]:  ಶುಕ್ರವಾರ ಮಧ್ಯಾಹ್ನದೊಳಗಾಗಿ ಸರ್ಕಾರದ ಬಹುಮತ ಸಾಬೀತುಪಡಿಸುವಂತೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ರಾಜ್ಯಪಾಲರು ಸ್ಪಷ್ಟಸೂಚನೆ ರವಾನಿಸಿದ ಬೆನ್ನಲ್ಲೇ ಪ್ರತಿಪಕ್ಷ ಬಿಜೆಪಿ ನಿಟ್ಟುಸಿರು ಬಿಟ್ಟಿದೆ. ಆದರೂ ವಿಧಾನಸಭೆಯಲ್ಲಿನ ಗುರುವಾರದ ತಮ್ಮ ಅಹೋರಾತ್ರಿ ಧರಣಿಯನ್ನು ವಾಪಸ್‌ ಪಡೆದುಕೊಳ್ಳದ ಬಿಜೆಪಿ ನಾಯಕರು ಮುಂದೇನು ಮಾಡಬೇಕು ಎಂಬುದರ ಲೆಕ್ಕಾಚಾರ ಹಾಕುವುದರಲ್ಲಿ ನಿರತರಾಗಿದ್ದರು.

1- ವಿಶ್ವಾಸಮತ ಯಾಚನೆಗೆ ಗಡುವು ನಿಗದಿಯಾಗಿರುವುದರಿಂದ ಶುಕ್ರವಾರ ಆ ಪ್ರಕ್ರಿಯೆ ಮುಗಿಯುವವರೆಗೆ ತಮ್ಮ ಶಾಸಕರನ್ನು ಹಿಡಿದಿಟ್ಟುಕೊಳ್ಳುವುದು ಮುಖ್ಯವಾದದ್ದು. ಹೀಗಾಗಿ, ಆಡಳಿತಾರೂಢ ಪಕ್ಷಗಳ ಆಮಿಷಕ್ಕೆ ಬಲಿಯಾಗಬಹುದು ಎಂಬ ಅನುಮಾನವಿರುವ ಶಾಸಕರ ಮೇಲೆ ನಿಗಾವಹಿಸಲು ಮುಂದಾಗಬಹುದು.

2- ಒಂದು ವೇಳೆ ಆಡಳಿತಾರೂಢ ಪಕ್ಷಗಳು ಶುಕ್ರವಾರ ಬೆಳಗ್ಗೆ ಸುಪ್ರೀಂಕೋರ್ಟ್‌ ಮೊರೆ ಹೋಗಿ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ನೀಡಿರುವ ಆದೇಶಕ್ಕೆ ತಡೆ ತರಲು ಯಶಸ್ವಿಯಾದಲ್ಲಿ ಬಿಜೆಪಿ ಕೂಡ ಕಾನೂನು ಹೋರಾಟ ನಡೆಸಲು ಮುಂದಾಗಬಹುದು.

3​- ಒಂದು ವೇಳೆ ಆಡಳಿತಾರೂಢ ಪಕ್ಷಗಳು ರಾಜ್ಯಪಾಲರ ಆದೇಶ ಧಿಕ್ಕರಿಸುವ ನಿರ್ಧಾರ ಕೈಗೊಂಡಲ್ಲಿ ಸರ್ಕಾರವನ್ನು ವಜಾಗೊಳಿಸುವಂತೆ ಕೋರಿ ಮತ್ತೊಮ್ಮೆ ರಾಜಭವನದ ಕದ ತಟ್ಟಬಹುದು.

4- ವಿಶ್ವಾಸಮತ ಯಾಚನೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅನರಿಗೆ ಸೋಲುಂಟಾಗಿ ಸರ್ಕಾರ ಪತನಗೊಂಡಲ್ಲಿ ಪರ್ಯಾಯ ಸರ್ಕಾರ ರಚನೆ ಸಂಬಂಧ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲು ಮುಂದಾಗಬಹುದು.