ಬೆಂಗಳೂರು[ಜು.12]: ಅತೃಪ್ತ ಶಾಸಕರು ಖುದ್ದು ಸ್ಪೀಕರ್‌ ರಮೇಶ್‌ ಕುಮಾರ್‌ ಅವರ ಮುಂದೆ ಹಾಜರಾಗಿರುವ ಹಿನ್ನೆಲೆಯಲ್ಲಿ ಸ್ಪೀಕರ್‌ ಅವರಿಗೆ ಶಾಸಕರ ರಾಜೀನಾಮೆ ಅಂಗೀಕರಿಸದೆ ಬೇರೆ ದಾರಿ ಇಲ್ಲ ಎಂದು ಬಿಜೆಪಿ ನಾಯಕ ಹಾಗೂ ಶಾಸಕ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಗುರುವಾರ ಸಂಜೆ ವಿಧಾನಸೌಧದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಎತ್ತಿರುವ ಕೆಲ ವಿಷಯ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಪಕ್ಷಾಂತರ ನಿಷೇಧ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಸುಪ್ರೀಂ ಕೋರ್ಟ್‌ಗೆ ಈ ಬಗ್ಗೆ ಅಧಿಕಾರ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಆದೇಶ ನೀಡಿರುವುದು ಸಂವಿಧಾನ ಬದ್ಧವಾಗಿದೆ. ಸುಪ್ರೀಂ ಕೋರ್ಟ್‌ ಸ್ಪಷ್ಟವಾಗಿ ನಿರ್ದೇಶನ ನೀಡಿದೆ. ಕೇವಲ ಸತ್ಯ ಇದೆ ಎಂಬುದನ್ನಷ್ಟೇ ಸ್ಪೀಕರ್‌ ಅವರು ನೋಡಬೇಕು. ಶಾಸಕರು ಸ್ಪೀಕರ್‌ ಅವರ ಮುಂದೆ ಹಾಜರಾಗಿರುವ ಕಾರಣ ರಾಜೀನಾಮೆಯನ್ನು ಅಂಗೀಕರಿಸಲೇಬೇಕು. ಸ್ಪೀಕರ್‌ ಅವರು ರಾಜೀನಾಮೆ ಅಂಗೀಕರಿಸುತ್ತಾರೆ ಎಂದು ವಿಶ್ವಾಸ ಇದೆ ಎಂದರು.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಾಜ್ಯದಲ್ಲಿ ಅಲ್ಪಮತಕ್ಕೆ ಕುಸಿದ ಸರ್ಕಾರ ಮುಂದುವರೆಯಬಾರದು ನಮ್ಮ ಆಶಯ. ಶಾಸಕರೇ ನಮಗೆ ಈ ಸರ್ಕಾರ ಬೇಡ ಎಂದ ಮೇಲೆ ರಾಜೀನಾಮೆ ಪಡೆಯಲು ಏಕೆ ಈ ರೀತಿ ನಡೆದುಕೊಳ್ಳಲಾಗುತ್ತಿದೆ ಎಂದು ಪ್ರಶ್ನಿಸಿದರು.

ಹಠಮಾರಿ ಧೋರಣೆ- ಮಾಧುಸ್ವಾಮಿ:

ಶಾಸಕ ಮಾಧುಸ್ವಾಮಿ ಮಾತನಾಡಿ, ಸ್ಪೀಕರ್‌ ರಮೇಶ್‌ ಅವರು ಹಠಮಾರಿ ಧೋರಣೆ ತೋರಿದ್ದಾರೆ. ಯಾವ ಕಾರಣಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಕೇಳಲು ಅವರಿಗೆ ಹಕ್ಕಿದೆ. ಆದರೆ ಇವತ್ತಿನ ಸ್ಪೀಕರ್‌ ಮಾತು ದುರದೃಷ್ಟಕರ ಎಂದರು.