ಬೆಂಗಳೂರು[ಜು.21]: ‘ಆಪರೇಷನ್‌ ಕಮಲ’ ನಡೆಸಲಾಗುತ್ತಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರ ನಡುವಿನ ವಾಕ್ಸಮರ ಮುಂದುವರೆದಿದ್ದು, ಕಾಂಗ್ರೆಸ್‌ ಶಾಸಕ ರಹೀಂ ಖಾನ್‌ ಅವರನ್ನು ಸೆಳೆಯಲು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಪ್ರಯತ್ನ ನಡೆಸಿದ್ದರು ಎಂಬ ಗಂಭೀರ ಆರೋಪವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಮಾಡಿದ್ದಾರೆ.

ಇದಕ್ಕೆ ಕೂಡಲೇ ತಿರುಗೇಟು ನೀಡಿರುವ ಶೋಭಾ ಕರಂದ್ಲಾಜೆ ಅವರು, ಖಂಡ್ರೆ ಆರೋಪ ಶುದ್ಧ ಸುಳ್ಳು. ಅವರು ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಂದು ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರ್‌ ಖಂಡ್ರೆ ಅವರು, ರಾಜ್ಯದಲ್ಲಿ ಆಪರೇಷನ್‌ ಕಮಲ ಹೆಸರಿನಲ್ಲಿ ಕುದುರೆ ವ್ಯಾಪಾರ ಇನ್ನೂ ಮುಂದುವರೆದಿದೆ. ಶಾಸಕ ರಹೀಂ ಖಾನ್‌ ಅವರನ್ನು ಸೆಳೆಯಲು ಶೋಭಾ ಕರಂದ್ಲಾಜೆ ಪ್ರಯತ್ನಿಸಿದ್ದಾರೆ. ಇಂತಹ ಕುದುರೆ ವ್ಯಾಪಾರದ ಮೂಲಕ ಸರ್ಕಾರ ಅಸ್ಥಿರಗೊಳಿಸುವ ಯತ್ನ ಮುಂದುವರೆಯುತ್ತಿದೆ ಎಂದು ಆರೋಪಿಸಿದರು.

ರಾಜ್ಯಪಾಲರು ಮುಖ್ಯಮಂತ್ರಿಯವರಿಗೆ ಬರೆದ ಪತ್ರದಲ್ಲಿ ಕುದುರೆ ವ್ಯಾಪಾರದ ಬಗ್ಗೆ ಪ್ರಸ್ತಾಪಿಸುತ್ತಾರೆ. ಆದರೆ, ಬಿಜೆಪಿ ನಾಯಕರು ನಮ್ಮ ಶಾಸಕರಿಗೆ ದೂರವಾಣಿ ಕರೆ ಮಾಡಿ ಆಮಿಷವೊಡ್ಡುವುದನ್ನು ಮುಂದುವರೆಸಿದ್ದಾರೆ. ರಾಜ್ಯಪಾಲರಿಗೆ ಇದು ಕುದುರೆ ವ್ಯಾಪಾರದಂತೆ ಕಾಣುತ್ತಿಲ್ಲವೇ? ಬಿಜೆಪಿ ಸೇರಲು ನಮ್ಮ ಶಾಸಕರಿಗೆ ಆಸಕ್ತಿಯಿರದಿದ್ದರೂ ಬಿಜೆಪಿ ನಾಯಕರು ಒತ್ತಡ ನಿರ್ಮಾಣ ಮಾಡುತ್ತಿದ್ದಾರೆ. ಇಷ್ಟಾದರೂ ರಾಜ್ಯಪಾಲರು ಈ ಬಗ್ಗೆ ಏಕೆ ಗಮನ ನೀಡುತ್ತಿಲ್ಲ? ಬಿಜೆಪಿಯು ರಾಜಭವನವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂಬುದಕ್ಕೆ ಇದಕ್ಕಿಂತ ಉತ್ತಮ ನಿದರ್ಶನ ಬೇಕೆ ಎಂದು ಅವರು ಪ್ರಶ್ನಿಸಿದರು.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮುಂಬೈನಲ್ಲಿರುವ ಕಾಂಗ್ರೆಸ್‌ ಶಾಸಕರು ಯಾರಿಗೂ ಹೆದರಿಕೊಳ್ಳುವ ಅಗತ್ಯವಿಲ್ಲ. ಒತ್ತಡ, ಹೆದರಿಕೆ, ಬೆದರಿಕೆಗೆ ಬಲಿಯಾಗದೆ ನಿಮ್ಮ ಕ್ಷೇತ್ರದ ಜನತೆ ನಿಮ್ಮ ಮೇಲೆ ಇಟ್ಟಿರುವ ವಿಶ್ವಾಸ ಉಳಿಸಿಕೊಳ್ಳುವ ಪ್ರಯತ್ನ ಮಾಡಿ. ವಿಶ್ವಾಸ ಮತ ಯಾಚನೆಯಲ್ಲಿ ಭಾಗವಹಿಸಿ ಎಂದು ಈ ವೇಳೆ ಅವರು ಕರೆ ನೀಡಿದರು.

ಶೋಭಾ ತಿರುಗೇಟು:

ಈಶ್ವರ್‌ ಖಂಡ್ರೆ ಅವರ ಆರೋಪಕ್ಕೆ ತಿರುಗೇಟು ನೀಡಿರುವ ಸಂಸದೆ ಶೋಭಾ ಕರಂದ್ಲಾಜೆ ಅವರು, ರಹೀಂ ಖಾನ್‌ ಅವರನ್ನು ಬಿಜೆಪಿಗೆ ಕರೆತರುವ ಪ್ರಯತ್ನವನ್ನು ನಾವು ಮಾಡಿಲ್ಲ. ರಹೀಂಖಾನ್‌ ಅವರನ್ನು ನಾನು ಸಂಪರ್ಕಿಸಿರುವ ಬಗ್ಗೆ ಸಾಕ್ಷ್ಯಾಧಾರಗಳಿದ್ದರೆ ಬಹಿರಂಗ ಪಡಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟಕ್ಕೂ ರಹೀಂ ಖಾನ್‌ ಯಾರು? ಈಶ್ವರ್‌ ಖಂಡ್ರೆ ಅವರು ಯಾಕೆ ಸುಳ್ಳು ಹೇಳುತ್ತಿದ್ದಾರೆ ಗೊತ್ತಿಲ್ಲ. ಈ ಬಗ್ಗೆ ಸಾಕ್ಷ್ಯಾಧಾರಗಳಿದ್ದರೆ ಬಹಿರಂಗಪಡಿಸಲಿ. ಇಷ್ಟಕ್ಕೂ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಬಿಜೆಪಿಯ ಎಲ್ಲಾ ನಾಯಕರ ಮೊಬೈಲ್‌ ಫೋನ್‌ಗಳನ್ನು ಟ್ಯಾಪ್‌ ಮಾಡುತ್ತಿದೆಯಲ್ಲ ಎಂದರು. ನನಗೆ ಯಾವ ರಹೀಂಖಾನ್‌ ಆಗಲಿ, ಅಬ್ದುಲ್‌ ಖಾನ್‌ ಆಗಲಿ ಗೊತ್ತಿಲ್ಲ. ಖಾನ್‌ಗಳ ಜತೆ ಸಂಬಂಧ ಇರುವುದು ಯಾರಿಗೆ ಎನ್ನುವುದು ಜನತೆಗೆ ಗೊತ್ತಿದೆ. ಜಾರಿ ನಿರ್ದೇಶನಾಲಯವು ಒಬ್ಬ ಖಾನ್‌ನನ್ನು ಬಂಧಿಸಿದೆ ಎಂದರು.