ಬೆಂಗಳೂರು[ಜು.23] : ರಾಜೀನಾಮೆ ನೀಡಿರುವ ಅತೃಪ್ತ ಶಾಸಕರು ನಿಗದಿಯಂತೆ ಮಂಗಳವಾರ ವಿಧಾನಸಭೆ ಸ್ಪೀಕರ್‌ ಮುಂದೆ ವಿಚಾರಣೆಗೆ ಹಾಜರಾಗುವುದು ಅನುಮಾನವಿದೆ.

ಶಾಸಕರ ರಾಜೀನಾಮೆ ಸಂಬಂಧ ಮಂಗಳವಾರ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಳ್ಳುವುದರಿಂದ ತೀರ್ಪು ಏನು ಬರಲಿದೆ ಎಂದು ಕಾದುನೋಡುವ ತಂತ್ರಕ್ಕೆ ಅತೃಪ್ತರು ಮೊರೆಹೋಗಿದ್ದಾರೆ.

ಸ್ಪೀಕರ್‌ ಕೆ.ಆರ್‌.ರಮೇಶ್‌ಕುಮಾರ್‌ ಅವರು ರಾಜೀನಾಮೆ ನೀಡಿರುವ ಅತೃಪ್ತ ಶಾಸಕರಿಗೆ ನೋಟಿಸ್‌ ನೀಡಿ ಮಂಗಳವಾರ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಆದರೆ, ಯಾವ ಶಾಸಕರೂ ವಿಚಾರಣೆಗೆ ಹಾಜರಾಗದೆ ಇನ್ನಷ್ಟುಕಾಲಾವಕಾಶ ಕೋರಲು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸುಪ್ರೀಂಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಕ್ರಮಬದ್ಧವಾಗಿ ರಾಜೀನಾಮೆ ಸಲ್ಲಿಸುವಾಗ ಸ್ಪೀಕರ್‌ ಮುಂದೆ ಅತೃಪ್ತರೆಲ್ಲರೂ ಹಾಜರಾಗಿ ತಮ್ಮ ಅಭಿಪ್ರಾಯ ತಿಳಿಸಿದ್ದರು. ಆದರೂ, ಸ್ಪೀಕರ್‌ ನೋಟಿಸ್‌ ನೀಡಿರುವ ಹಿನ್ನೆಲೆಯಲ್ಲಿ ವಿಚಾರಣೆಗೆ ತೆರಳುವುದು ಅನಿವಾರ್ಯವಾಗಿತ್ತು. ಈ ಮಧ್ಯೆ ಮಂಗಳವಾರ ಸುಪ್ರೀಂಕೋರ್ಟ್‌ ಮುಂದೆ ಶಾಸಕರ ರಾಜೀನಾಮೆ ವಿಚಾರದ ಅರ್ಜಿ ವಿಚಾರಣೆಗೆ ಬರುವುದರಿಂದ ತೀರ್ಪು ನೋಡಿಕೊಂಡು ನಂತರ ಸ್ಪೀಕರ್‌ ಭೇಟಿಯಾಗಲು ಅತೃಪ್ತರು ನಿರ್ಧರಿಸಿದ್ದಾರೆ. ಅತೃಪ್ತರು ತಮ್ಮ ವಕೀಲರ ಸೂಚನೆಯಂತೆ ವಿಚಾರಣೆಗೆ ಹೋಗದಿರಲು ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ.