ಮುಂಬೈ ಸೇರಿರುವ ಅತೃಪ್ತ ಶಾಸಕರು ತಮ್ಮ ಮುಂದಿನ ನಡೆ ಬಗ್ಗೆ ದೃಢ ನಿರ್ಧಾರ ಮಾಡಿಕೊಂಡಿದ್ದಾರೆನ್ನಲಾಗಿದೆ.
ಬೆಂಗಳೂರು[ಜು.17] : ಪಕ್ಷ ನಮಗೆ ವಿಪ್ ಆದರೂ ಜಾರಿಮಾಡಲಿ ಅಥವಾ ಶಾಸಕ ಸ್ಥಾನದಿಂದ ಅನರ್ಹ ಸೇರಿದಂತೆ ಯಾವುದೇ ಕ್ರಮ ಕೈಗೊಳ್ಳಲಿ, ಗುರುವಾರ ವಿಧಾನಸಭೆಯಲ್ಲಿ ನಡೆಯುವ ವಿಶ್ವಾಸಮತ ಯಾಚನೆ ಕಲಾಪದಲ್ಲಿ ಭಾಗವಹಿಸುವುದು ಬೇಡ ಎಂದು ಮುಂಬೈನಲ್ಲಿರುವ ಎಲ್ಲಾ ಅತೃಪ್ತ ಶಾಸಕರೂ ಸ್ಪಷ್ಟನಿರ್ಧಾರಕ್ಕೆ ಬಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಮೈತ್ರಿ ಸರ್ಕಾರದ ಪತನದ ಗಳಿಗೆ ಎಣಿಸುತ್ತಾ ಮುಂಬೈ ಹೋಟೆಲ್‌ನಲ್ಲಿ ಕೂತಿರುವ ಅತೃಪ್ತ ಶಾಸಕರೆಲ್ಲರೂ ಮಂಗಳವಾರ ತಮ್ಮ ರಾಜೀನಾಮೆ ಅಂಗೀಕಾರ ವಿಳಂಬ ಪ್ರಶ್ನಿಸಿರುವ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನಿಂದ ಏನು ತೀರ್ಪು ಬರುತ್ತದೋ ಎಂಬ ಆತಂಕದಿಂದ ಟೀವಿ ಮೂಲಕವೇ ನ್ಯಾಯವಾದಿಗಳ ವಾದ ಪ್ರತಿವಾದ ವೀಕ್ಷಿಸಿದರು. ಸತತ ಮೂರು ಗಂಟೆಗಳಿಗೂ ಹೆಚ್ಚು ಕಾಲ ನಡೆದ ವಾದ ಪ್ರತಿವಾದದ ಬಳಿಕ ಸರ್ವೋಚ್ಚ ನ್ಯಾಯಾಲಯ ತೀರ್ಪನ್ನು ಬುಧವಾರಕ್ಕೆ ಕಾಯ್ದಿರಿಸಿದ್ದರಿಂದ ಅವರಲ್ಲಿ ಆತಂಕ ಮುಂದುವರೆದಿದೆ. ಸದನಕ್ಕೆ ಹಾಜರಾಗದಿದ್ದರೆ ಅನರ್ಹಗೊಳಿಸುವುದಾಗಿ ವಿಪ್ ಜಾರಿ ಮಾಡಿರುವ ಪಕ್ಷದ ನಡೆಗೆ ಕೋರ್ಟ್ ತೀರ್ಪು ಕೊಂಚ ನಿರಾಳತೆ ತರಬಹುದೇ ಎಂಬ ಆಲೋಚನೆ ಶಾಸಕರದ್ದಾಗಿತ್ತು.
ಅತ್ತ ಸುಪ್ರೀಂಕೋರ್ಟ್‌ನಲ್ಲಿ ರಾಜೀನಾಮೆ ಸಂಬಂಧ ವಾದ ವಿವಾದ ನಡೆಯುತ್ತಿದ್ದರೆ, ಇತ್ತ ಮುಂಬೈ ಹೊಟೇಲ್‌ನಲ್ಲಿರುವ ಅತೃಪ್ತರ ಕುತೂಹಲ, ಆತಂಕ ಹೆಚ್ಚಾಗಿತ್ತು. ತಮ್ಮ ಪರ ವಕೀಲರು ಒಳ್ಳೆಯ ರೀತಿಯಲ್ಲಿ ವಾದ ಮಾಡಿದ್ದಾರೆ. ಆದರೆ ಕೋರ್ಟ್ ಏನು ತೀರ್ಪು ನೀಡುತ್ತೋ ಎಂಬ ಕುತೂಹಲದಲ್ಲಿ ಅತೃಪ್ತರು ಇದ್ದರು. ಹೋಟೆಲ್‌ನಲ್ಲೇ ಟೀವಿಗಳಲ್ಲಿ ಬರುತ್ತಿರುವ ವಾದ -ಪ್ರತಿ ವಾದವನ್ನು ಅತೃಪ್ತ ಶಾಸಕರು ಆತಂಕದಿಂದಲೇ ವೀಕ್ಷಿಸಿದರು. ಜತೆಗೆ ತಮ್ಮ ವಕೀಲರರ ಜೊತೆ ನಿರಂತರ ಸಂಪರ್ಕದಲ್ಲಿದ್ದರು. ಸುಪ್ರೀಂಕೋರ್ಟ್ ತೀರ್ಪನ್ನು ಬುಧವಾರಕ್ಕೆ ಕಾಯ್ದಿರಿಸಿದ್ದರಿಂದ ಅತೃಪ್ತರ ಹೃದಯ ಬಡಿತವನ್ನು ಹೆಚ್ಚಾಗಿಸಿದೆ.
ಕೋರ್ಟ್ ಕಲಾಪದ ಬಳಿಕ ಎಲ್ಲರೂ ಸಭೆ ಸೇರಿ ಬುಧವಾರ ಸುಪ್ರೀಂಕೋರ್ಟ್ ತೀರ್ಪು ಏನಾದರು ಬರಲಿ, ನಮ್ಮನ್ನು ಅನರ್ಹಗೊಳಿಸಿದರೂ ಪರವಾಗಿಲ್ಲ. ಯಾವುದೇ ಕಾರಣಕ್ಕೂ ನಾವ್ಯಾರೂ ಗುರುವಾರ ವಿಶ್ವಾಸಮತ ಯಾಚನೆಯ ಕಲಾಪದಲ್ಲಿ ಪಾಳ್ಗೊಳ್ಳುವುದು ಬೇಡ ಎಂಬ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿದು ಬಂದಿದೆ.
