ಬೆಂಗಳೂರು[ಜು.21]: ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳುವ ಸಲುವಾಗಿ ತನ್ನ ಶಾಸಕರನ್ನು ಭದ್ರಪಡಿಸಿಕೊಳ್ಳಲು ಬೆಂಗಳೂರಿನ ತಾಜ್‌ ವಿವಾಂತ ಹೋಟೆಲ್‌ನಲ್ಲಿ ಕಾಂಗ್ರೆಸ್‌ ಪಕ್ಷ ವಸತಿ ವ್ಯವಸ್ಥೆ ಮಾಡಿದ್ದರೂ, ಬಹುತೇಕ ಶಾಸಕರು ಕ್ಷೇತ್ರಗಳತ್ತ ತೆರಳಿದ್ದಾರೆ. ಶನಿವಾರದ ವೇಳೆಗೆ ಕೇವಲ 17-18 ಮಂದಿ ಶಾಸಕರು ಮಾತ್ರ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು ಎಂದು ತಿಳಿದುಬಂದಿದೆ.

ಕಾಂಗ್ರೆಸ್‌ನ 78 ಶಾಸಕರ ಪೈಕಿ 13 ಮಂದಿ ಶಾಸಕರು ರಾಜೀನಾಮೆ ನೀಡಿ ಮುಂಬೈನ ಅತೃಪ್ತರ ಕೂಟದಲ್ಲಿ ಸೇರಿಕೊಂಡಿದ್ದಾರೆ. ಉಳಿದಂತೆ ಕಾಗವಾಡ ಶಾಸಕ ಶ್ರೀಮಂತ ಪಾಟೀಲ್‌ ಹಾಗೂ ಬಳ್ಳಾರಿ ಗ್ರಾಮಾಂತರ ಶಾಸಕ ಬಿ. ನಾಗೇಂದ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ. ಉಳಿದ 63 ಮಂದಿ ಪೈಕಿ ಕೇವಲ 17-18 ಮಂದಿ ಶಾಸಕರು ಮಾತ್ರ ಹೋಟೆಲ್‌ನಲ್ಲಿ ಇದ್ದಾರೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇವರ ಮೇಲೆ ಮಾತ್ರ ಕಣ್ಗಾವಲು ವಹಿಸುತ್ತಿದ್ದು, ಶನಿವಾರ ಸಂಜೆ ಇಷ್ಟೇ ಮಂದಿ ಶಾಸಕರೊಂದಿಗೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಸಮಾಲೋಚನೆ ನಡೆಸಿದ್ದಾರೆ. ಭಾನುವಾರ ಸಂಜೆ ಶಾಸಕಾಂಗ ಪಕ್ಷದ ಸಭೆ ವೇಳೆಗೆ ಎಲ್ಲಾ ಶಾಸಕರು ಆಗಮಿಸುವ ನಿರೀಕ್ಷೆ ಇದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.