ಮುಂಬೈ[ಜು.14]: ನಿತ್ಯ ಹೊಸ ತಿರುವು ಕಾಣುತ್ತಿರುವ ಕರುನಾಡ ರಾಜಕೀಯ ಹೈಡ್ರಾಮಾದ ವಾರ ಕಳೆದರೂ ಮುಂದುವರೆದಿದೆ. ಮೈತ್ರಿಕೂಟದ ಘಟಾನುಘಟಿ ನಾಯಕರು ಅತೃಪ್ತ ಶಾಸಕರಿಬ್ಬರ ಮನವೊಲಿಸಲು ನಡೆಸಿದ ಹರಸಾಹಸ ಇನ್ನೇನು ಯಶಸ್ವಿಯಾಗುತ್ತೆ ಎನ್ನುವಷ್ಟರಲ್ಲಿ ಎಲ್ಲವೂ ಬೋರ್ಗಲ್ಲಿನ ಮೇಲೆ ನೀರೆರೆದಂತೆ ವಿಫಲವಾಗಿದೆ. ಮನವೊಲಿಸಲು ಯತ್ನಿಸುತ್ತಿದ್ದಾಗಲೇ ಅತೃಪ್ತ ನಾಯಕನೊಬ್ಬ ದೋಸ್ತಿಗಳ ಕಣ್ಣೆದುರೇ ಮುಂಬೈಗೆ ಹಾರಿ ಹೋಗಿದ್ದಾರೆ. ಇದರಿಂದ ಮೈತ್ರಿ ನಾಯಕರು ಮತ್ತೆ ಹೊಸದಾಗಿ ತಮ್ಮ ಪ್ರಯತ್ನ ಆರಂಭಿಸಬೇಕಾದ ಪರಿಸ್ಥಿತಿ ಬಂದೊದಗಿದೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹೌದು ನಿನ್ನೆ ಶನಿವಾರ ಬೆಳಿಗ್ಗೆ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿಕೆಶಿ ಮಾತುಕತೆ ನಡೆಸಿದ್ದ ಹೊಸಕೋಟೆ ಕಾಂಗ್ರೆಸ್‌ ಶಾಸಕ ಎಂ.ಟಿ.ಬಿ. ನಾಗರಾಜ್‌ ತಮ್ಮ ರಾಜೀನಾಮೆ ಹಿಂಪಡೆಯುವುದಾಗಿ ಘೋಷಿಸಿದ್ದರು. ಅಲ್ಲದೇ ಕಾಂಗ್ರೆಸ್‌ನ ಮತ್ತೊಬ್ಬ ಅತೃಪ್ತ ಶಾಸಕ ಡಾ. ಸುಧಾಕರ್‌ ಅವರ ಮನವೊಲಿಸುವುದಾಗಿಯೂ ಹೇಳಿದ್ದರು. ಆದರೆ 15 ತಾಸುಗಳಾದರೂ ಡಾ. ಸುಧಾಕರ್ ಪತ್ತೆಯಾಗಿರಲಿಲ್ಲ. ಹೇಗಿದ್ದರೂ ಸದ್ಯ ಎಂಟಿಬಿ ಮನವೊಲಿಸಲು ಯಶಸ್ವಿಯಾಗಿದ್ದೇವಲ್ಲ ಎಂದು ಕಾಂಗ್ರೆಸ್ ನಾಯಕರು ಸಮಾಧಾನ ಪಡುತ್ತಿದ್ದಾಗಲೇ ಮತ್ತೆ ಉಲ್ಟಾ ಹೊಡೆದಿದ್ದರು. ಹೀಗಾಗಿ ಇಂದು ಭಾನುವಾರ ಬೆಳಗ್ಗೆ ಎಂಟಿಬು ನಾಗರಾಜ್ ಮನೆಗೆ ತೆರಳಿದ್ದ ಕಾಂಗ್ರೆಸ್‌ನ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಅವರ ಮನವೊಲಿಸಲು ಯತ್ನಿಸಿದ್ದರು.

ಆದರೆ ಡಿಕೆಶಿ ಮಾತುಕತೆ ಮಾತ್ರ ಫಲ ನೀಡಿಲ್ಲ. ಹಠ ಬಿಡದ ಎಂಟಿಬಿ ಅದೆಷ್ಟೇ ಮನವೊಲಿಸಲು ಯತ್ನಿಸದರೂ ಕಾಂಗ್ರೆಸ್ ನಾಯಕರ ಮಾತುಗಳನ್ನು ಕಿವಿಗೆ ಹಾಕಿಕೊಳ್ಳದೆ HAL ಏರ್‌ಪೋರ್ಟ್‌ನಿಂದ ಮುಂಬೈಗೆ ಹಾರಿದ್ದಾರೆ. ಅತ್ತ ಡಾ. ಸುಧಾಕರ್ ಕೂಡಾ ನಿನ್ನೆ ರಾತ್ರಿಯೇ ದೆಹಲಿ ತಲುಪಿದ್ದಾರೆನ್ನಲಾಗಿದ್ದು, ಇಂದು ಅಲ್ಲಿಂದಲೇ ಮುಂಬೈಗೆ ತಲುಪುವ ಸಾಧ್ಯತೆಗಳಿವೆ. ಹೀಗೆ ರಾಜ್ಯದ ಕಾಂಗ್ರೆಸ್ ನಾಯಕರ ಎಲ್ಲಾ ಯತ್ನಗಳು ವಿಫಲವಾಗಿದ್ದು, ಕಣ್ಣೆದುರೇ ಇಬ್ಬರು ಶಾಸಕರು ಅತೃಪ್ತರ ಗುಂಪು ಸೇರಲು ಹೊರಟಿದ್ದಾರೆ.

ಸಿದ್ದರಾಮಯ್ಯ ಶಿಷ್ಯರಾಗಿದ್ದ ಈ ಇಬ್ಬರೂ ನಾಯಕರನ್ನು ದೋಸ್ತಿ ಸರ್ಕಾರ ಮನವೊಲಿಸಿ ಉಳಿಸಿಕೊಳ್ಳುತ್ತೆ ಎಂಬ ನಿರೀಕ್ಷೆ ಇತ್ತು. ಆದರೀಗ ಈ ಎಲ್ಲಾ ನಿರೀಕ್ಷೆಗಳು ಬುಡಮೇಲಾಗಿವೆ. ಹೀಗಿದ್ದರೂ ಮೈತ್ರಿ ಪಾಳಯದಲ್ಲಿ ಆತಂಕ ಸೃಷ್ಟಿಸಿ ಹೋದ ಎಂಟಿಬಿ ಮೇಲೆ ಗುಪ್ತಚರ ಇಲಾಖೆ ಹದ್ದಿನ ಕಣ್ಣಿದೆ.

"