Asianet Suvarna News Asianet Suvarna News

'ಬಿಜೆಪಿ ಅನೈತಿಕ ರಾಜಕೀಯ, ಬಣ್ಣ ಬಯಲು ಮಾಡಲು ಸದನದಲ್ಲಿ ವಿಸ್ತೃತ ಚರ್ಚೆ'

ದುಷ್ಟಶಕ್ತಿಗಳ ವಿರುದ್ಧ ಹೋರಾಟ: ಸಿಎಂ| ಕುರ್ಚಿಗೆ ಅಂಟಿಕೊಳ್ಳುವ ಉದ್ದೇಶ ನನಗಿಲ್ಲ| ಬಿಜೆಪಿ ಬಣ್ಣ ಬಯಲು ಮಾಡಲು ಸದನದಲ್ಲಿ ವಿಸ್ತೃತ ಚರ್ಚೆ

Karnataka Political Crisis HD Kumaraswamy Slams BJP
Author
Bangalore, First Published Jul 22, 2019, 8:23 AM IST

ಬೆಂಗಳೂರು[ಜು.22]: ಅಧಿಕಾರಕ್ಕೆ ಅಂಟಿಕೊಳ್ಳುವ ಉದ್ದೇಶ ಹೊಂದಿಲ್ಲ ಎಂಬುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಅಧಿಕಾರಕ್ಕಾಗಿ ಸಾಂವಿಧಾನಿಕವಾಗಿ ರಚಿಸಲಾದ ಸಂಸ್ಥೆಗಳನ್ನೇ ನಾಶಪಡಿಸಲು ಮುಂದಾಗಿರುವ ದುಷ್ಟಶಕ್ತಿಗಳ ವಿರುದ್ಧ ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.

ವಿಶ್ವಾಸಮತ ಯಾಚನೆಗೆ ಸಂಬಂಧಿಸಿದಂತೆ ಭಾನುವಾರ ಸಂಜೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜಕೀಯ ಪ್ರಭಾವದ ದುರ್ಬಳಕೆಯ ಮೂಲಕ ಪ್ರಜಾಪ್ರಭುತ್ವದ ಬುನಾದಿ ಅಲುಗಾಡಿಸುತ್ತಿರುವ ಮತ್ತು ಜನತಂತ್ರದಡಿ ಆಯ್ಕೆಯಾದ ಸರ್ಕಾರ ಉರುಳಿಸಲು ಯತ್ನಿಸುತ್ತಿರುವ ದುಷ್ಟಶಕ್ತಿಗಳಿಂದ ರಾಜ್ಯ ಸರ್ಕಾರವನ್ನು ಪಾರು ಮಾಡಬೇಕಾಗಿದೆ ಎಂದು ಹೇಳಿದ್ದಾರೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬಿಜೆಪಿಯು ಕರ್ನಾಟಕದ ರಾಜಕಾರಣವನ್ನು ಪಾತಾಳಕ್ಕೆ ಕೊಂಡೊಯ್ದಿರುವುದಲ್ಲದೆ ದೇಶದಲ್ಲಿ ಅನೈತಿಕ ರಾಜಕಾರಣಕ್ಕೆ ಹೊಸ ಭಾಷ್ಯ ಬರೆದಿದೆ. ಈ ಬೆಳವಣಿಗೆ ಅತ್ಯಂತ ನೋವಿನ ಹಾಗೂ ಜಿಗುಪ್ಸೆ ತರುವ ಸಂಗತಿಯಾಗಿದೆ. ಆಡಳಿತಾರೂಢ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಗಳ ಶಾಸಕರನ್ನು ಕರೆದೊಯ್ದು ಬಿಜೆಪಿ ಪ್ರಜಾಪ್ರಭುತ್ವದ ಅಣಕವಾಡಿದೆ. ಬಿಜೆಪಿ ಮುಖಂಡರು, ಕಾರ್ಯಕರ್ತರು ವಿಶೇಷ ವಿಮಾನಗಳಲ್ಲಿ ನಮ್ಮ ಪಕ್ಷಗಳ ಶಾಸಕರೊಂದಿಗೆ ತೆರಳಿರುವುದು ಮಾಧ್ಯಮಗಳಿಂದ ಸ್ಪಷ್ಟವಾಗಿದೆ.

ಅನೈತಿಕ ಹಾಗೂ ಕಾನೂನು ಬಾಹಿರ ವಿಧಾನಗಳಿಂದ ಅಧಿಕಾರಕ್ಕೆ ಬರಲು ಹಾತೊರೆಯುತ್ತಿರುವ ಬಿಜೆಪಿ, ಈ ಎಲ್ಲ ಬೆಳವಣಿಗೆಗಳ ನಡುವೆ ನಾನು ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸುತ್ತಿದೆ. ಅಲ್ಲದೆ, ವಿಶ್ವಾಸ ನಿಲುವಳಿಯನ್ನು ಮತಕ್ಕೆ ಹಾಕುವಂತೆ ರಾಜಭವನದ ಮೂಲಕ ಗಡುವುಗಳನ್ನು ಕೊಡಿಸುತ್ತಿದೆ.

ವಿಶ್ವಾಸ ಮತ ಕುರಿತು ವಿಸ್ತೃತ ಚರ್ಚೆಗೆ ಸಮಯ ಕೋರಿರುವುದರ ಹಿಂದೆ ನನ್ನ ಉದ್ದೇಶವಿರುವುದು ಒಂದೇ- ಬಿಜೆಪಿಯು ನೈತಿಕತೆಯ ಕುರಿತು ಮಾತನಾಡುತ್ತಲೇ, ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಮೂಲತತ್ವ, ಆಶಯಗಳನ್ನೇ ಬುಡಮೇಲು ಮಾಡಲು ಹೊರಟಿರುವುದು ಇಡೀ ದೇಶಕ್ಕೆ ಅರಿವಾಗಬೇಕಾಗಿದೆ. ಅಲ್ಲದೆ, ನಮ್ಮಿಂದ ದೂರ ಹೋಗಿರುವ ಶಾಸಕರು ಹಿಂದಿರುಗಿ ಅಧಿವೇಶನದಲ್ಲಿ ಪಾಲ್ಗೊಲ್ಲುವಂತೆ ಮನವಿ ಮಾಡುತ್ತೇನೆ. ಬಿಜೆಪಿಯು ಪ್ರಜಾಪ್ರಭುತ್ವದ ಪಾವಿತ್ರ್ಯತೆಯನ್ನು ಹೇಗೆ ಹಾಳುಗೆಡವಿದೆ ಎಂಬುದರ ಕುರಿತು ಸದನದಲ್ಲಿ ವಿವರವಾಗಿ ಚರ್ಚಿಸುವುದು ಅಗತ್ಯವಿದೆ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

Follow Us:
Download App:
  • android
  • ios