ಬೆಂಗಳೂರು[ಜು.21]: ಆಡಳಿತಾರೂಢ ಮೈತ್ರಿಕೂಟ ಹಾಗೂ ಬಿಜೆಪಿ ನಡುವೆ ಅಧಿಕಾರಕ್ಕಾಗಿ ನಡೆದಿರುವ ಹಗ್ಗ-ಜಗ್ಗಾಟದ ಮತ್ತೊಂದು ಹಂತದ ಪ್ರಹಸನಕ್ಕೆ ಸೋಮವಾರ ಮುಹೂರ್ತ ನಿಗದಿಯಾಗಿದೆ. ಹೀಗಾಗಿ, ಸರ್ಕಾರವನ್ನು ಉಳಿಸಿಕೊಳ್ಳುವ ತಮ್ಮ ಅಂತಿಮ ಪ್ರಯತ್ನವನ್ನು ಶನಿವಾರ ದಿನವಿಡೀ ನಡೆಸಿದ ಮೈತ್ರಿಕೂಟದ ನಾಯಕರು, ಅತೃಪ್ತರನ್ನು ಸಂಪರ್ಕಿಸಿ ಅವರ ಮನವೊಲಿಸಲು ತೀವ್ರ ಪ್ರಯತ್ನ ನಡೆಸಿದರು.

ಕುತೂಹಲಕಾರಿ ಸಂಗತಿಯೆಂದರೆ, ಈ ಬಾರಿ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಅವರೇ ಖುದ್ದು ಅಖಾಡಕ್ಕೆ ಇಳಿದದ್ದು. ಅತೃಪ್ತರ ಗುಂಪಿನಲ್ಲಿರುವ ಬೆಂಗಳೂರಿನ ಶಾಸಕರ ತಂಡದ ನೇತೃತ್ವ ವಹಿಸಿದ್ದ ಹಿರಿಯ ಕಾಂಗ್ರೆಸ್ಸಿಗ ರಾಮಲಿಂಗಾ ರೆಡ್ಡಿ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡ ದೇವೇಗೌಡರು, ಅವರ ಮೂಲಕ ಅತೃಪ್ತರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದರು. ಆದರೆ, ಅದು ಸಾಧ್ಯವಾಗದೆ ದೋಸ್ತಿ ನಾಯಕರು ಮತ್ತಷ್ಟುಆತಂಕಕ್ಕೆ ಈಡಾದರು ಎಂದು ಮೂಲಗಳು ತಿಳಿಸಿವೆ.

ಜ್ಯೋತಿಷಿಗಳ ಭವಿಷ್ಯ, ಮಗನ ಸರ್ಕಾರ ಉಳಿಸಲು ಗೌಡರ ರಣತಂತ್ರ!

ಈ ನಡುವೆ, ಅತೃಪ್ತರ ಗುಂಪಿನತ್ತ ಮೈತ್ರಿಕೂಟದ ಮತ್ತಷ್ಟುಶಾಸಕರು ಆಕರ್ಷಿತರಾಗಬಹುದು ಎಂಬ ಆತಂಕವೂ ಮೈತ್ರಿ ಕೂಟದ ನಾಯಕರಿಗೆ ಕಾಣಿಸಿಕೊಂಡಿತ್ತು. ಹೀಗಾಗಿ ಅನುಮಾನವಿರುವ ಶಾಸಕರ ಮೇಲೆ ಸೋಮವಾರ ಸದನ ಆರಂಭವಾಗುವವರೆಗೂ ತೀವ್ರ ಕಣ್ಗಾವಲಿಡುವ ದಿಸೆಯಲ್ಲೂ ಮೈತ್ರಿ ನಾಯಕರು ಕಾರ್ಯಪ್ರವೃತ್ತರಾದರು. ಆದರೆ, ರೆಸಾರ್ಟ್‌ ವಾಸದಿಂದ ಕಂಗೆಟ್ಟಿರುವ ಶಾಸಕರು ಕ್ಷೇತ್ರಗಳಿಗೆ ತೆರಳಲು ದುಂಬಾಲು ಬಿದ್ದದ್ದು ನಾಯಕರಿಗೆ ತಲೆನೋವು ತಂದಿತ್ತು. ಪರಿಣಾಮ ತೀವ್ರ ಅನುಮಾನವಿರುವ ಶಾಸಕರನ್ನು ರೆಸಾರ್ಟ್‌ ಹಾಗೂ ಹೋಟೆಲ್‌ನಲ್ಲಿ ಕಣ್ಗಾವಲಿನಲ್ಲಿಡಲಾಗಿದ್ದು, ಉಳಿದ ಶಾಸಕರಿಗೆ ಕ್ಷೇತ್ರಕ್ಕೆ ತೆರಳಲು ಅವಕಾಶ ಮಾಡಿಕೊಡಲಾಗಿದೆ.

ದೇವೇಗೌಡರ ಪ್ರಯತ್ನ:

ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ದೇವೇಗೌಡ ಅವರು ಶನಿವಾರ ಪ್ರಯತ್ನ ನಡೆಸಿದ್ದು, ರಾಮಲಿಂಗಾರೆಡ್ಡಿ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಕೆಲ ಕಾಲ ಮಾತುಕತೆ ನಡೆಸಿದರು. ಅನಂತರ ಯಶವಂತಪುರ ಶಾಸಕ ಎಸ್‌.ಟಿ. ಸೋಮಶೇಖರ್‌, ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ, ಕೆ.ಆರ್‌. ಪುರ ಶಾಸಕ ಭೈರತಿ ಬಸವರಾಜು ಅವರೊಂದಿಗೆ ತಾವು ಮಾತನಾಡುವ ಆಕಾಂಕ್ಷೆ ವ್ಯಕ್ತಪಡಿಸಿ, ಅವರನ್ನು ದೂರವಾಣಿ ಮೂಲಕ ಸಂಪರ್ಕಿಸುವಂತೆ ಕೋರಿಕೊಂಡರು ಎನ್ನಲಾಗಿದೆ.

ಅದರಂತೆ, ರಾಮಲಿಂಗಾರೆಡ್ಡಿ ಅವರು ಸೋಮಶೇಖರ್‌, ಮುನಿರತ್ನ ಹಾಗೂ ಬೈರತಿ ಬಸವರಾಜು ಅವರಿಗೆ ಪ್ರತ್ಯೇಕವಾಗಿ ದೂರವಾಣಿಯಲ್ಲಿ ಸಂಪರ್ಕಿಸಲು ಯತ್ನಿಸಿದ್ದು, ಈ ಮೂವರ ಮೊಬೈಲ್‌ ರಿಂಗಣಿಸಿದರೂ ಅವರಾರ‍ಯರೂ ಕರೆ ಸ್ವೀಕರಿಸಲಿಲ್ಲ. ಕೆಲ ಕಾಲ ಈ ಪ್ರಯತ್ನ ನಡೆಸಿದ ನಂತರ ದೇವೇಗೌಡ ಅವರು ಶಾಸಕರನ್ನು ಸಂಪರ್ಕಿಸುವ ಇತರ ಮಾರ್ಗಗಳನ್ನು ಅನ್ವೇಷಿಸುವಂತೆ ಹಾಗೂ ಅವರು ಸಂಪರ್ಕಕ್ಕೆ ದೊರೆತರೇ ತಮ್ಮೊಂದಿಗೆ ನೇರವಾಗಿ ಮಾತನಾಡಿಸುವಂತೆ ರಾಮಲಿಂಗಾರೆಡ್ಡಿ ಅವರಿಗೆ ಹೇಳಿದರು ಎಂದು ಮೂಲಗಳು ಹೇಳಿವೆ.

ಸಿದ್ದರಾಮಯ್ಯ ಸರಣಿ ಸಭೆ:

ಮತ್ತೊಂದೆಡೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾವೇರಿ ನಿವಾಸದಲ್ಲೂ ಸರಣಿ ಸಭೆಗಳನ್ನು ನಡೆಸಿ ಸರ್ಕಾರವನ್ನು ಉಳಿಸಿಕೊಳ್ಳುವ ಬಗ್ಗೆ ಗಂಭೀರ ಚರ್ಚೆ ನಡೆಸಲಾಯಿತು. ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ, ಸಚಿವರಾದ ಡಿ.ಕೆ. ಶಿವಕುಮಾರ್‌, ಜಮೀರ್‌ ಅಹಮದ್‌ ಖಾನ್‌, ಆರ್‌.ವಿ. ದೇಶಪಾಂಡೆ, ಸತೀಶ್‌ ಜಾರಕಿಹೊಳಿ, ಮಾಜಿ ಸಚಿವ ಎಚ್‌.ಎಂ. ರೇವಣ್ಣ ಸೇರಿದಂತೆ ಹಲವು ನಾಯಕರು ಆಗಮಿಸಿದ್ದರು. ಈ ವೇಳೆ ಯಾವುದೇ ಕಾರಣಕ್ಕೂ ಪಕ್ಷದ ಶಾಸಕರು ಕೈ ತಪ್ಪಿ ಹೋಗಬಾರದು. ಸೋಮವಾರ ನಡೆಯುವ ವಿಶ್ವಾಸ ಮತ ಯಾಚನೆ ವೇಳೆ ಸಂಖ್ಯಾಬಲ ಸಾಬೀತುಪಡಿಸಲು ಇನ್ನೂ ಅವಕಾಶಗಳಿವೆ. ಈ ಹಿನ್ನೆಲೆಯಲ್ಲಿ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ. ಹೀಗಾಗಿ ಯಾವುದೇ ಕಾರಣಕ್ಕೂ ಎಚ್ಚರ ತಪ್ಪಬಾರದು ಎಂದು ಎಚ್ಚರಿಕೆ ನೀಡಿದರು ಎನ್ನಲಾಗಿದೆ.

ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸ ಮತ ನಿರ್ಣಯವನ್ನು ಮತಕ್ಕೆ ಹಾಕುವುದರಿಂದ ಉಳಿದಿರುವ ಸಮಯದಲ್ಲಿ ಅತೃಪ್ತರನ್ನು ಹಿಂದಕ್ಕೆ ಕರೆಸಲು ಮೈತ್ರಿಕೂಟದ ಎಲ್ಲಾ ನಾಯಕರು ತೀವ್ರ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಆದರೆ, ಅಜ್ಞಾತ ಸ್ಥಳದಲ್ಲಿರುವ ಈ ಶಾಸಕರನ್ನು ಸಂಪರ್ಕಿಸುವುದೇ ಮೈತ್ರಿ ನಾಯಕರಿಗೆ ಕಬ್ಬಿಣದ ಕಡಲೆಯಾಗಿದೆ ಎಂದು ಮೂಲಗಳು ಹೇಳಿವೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹೆಚ್ಚಿದ ಆತಂಕ: ಈ ನಡುವೆ, ಹೃದಯ ಸಂಬಂಧಿ ಸಮಸ್ಯೆಯಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಬಿ. ನಾಗೇಂದ್ರ ಅವರು ಮುಂಬೈಗೆ ಹಾರಿದ್ದಾರೆ ಎಂಬ ವದಂತಿಯೂ ನಾಯಕರಿಗೆ ಆತಂಕ ಹುಟ್ಟಿಸಿತ್ತು. ಆದರೆ, ನಾಗೇಂದ್ರ ಅವರು ಚಿಕಿತ್ಸೆಗೆ ದಾಖಲಾಗಿರುವ ಆಸ್ಪತ್ರೆಯಲ್ಲಿ ಮತ್ತೊಂದು ಕೋಣೆಗೆ ಸ್ಥಳಾಂತರವಾಗಿದ್ದರಿಂದ ಇಂತಹ ವದಂತಿ ಹುಟ್ಟಿಕೊಂಡಿದ್ದು, ಅವರು ರಾಜಧಾನಿಯಲ್ಲೇ ಇದ್ದಾರೆ ಎಂದು ನಾಗೇಂದ್ರ ಅವರ ಕುಟುಂಬಸ್ಥರು ಸ್ಪಷ್ಟಪಡಿಸಿದ್ದರಿಂದ ಮೈತ್ರಿ ನಾಯಕರು ನಿರಾಳರಾದರು.

ಇದರ ಬೆನ್ನಲ್ಲೇ ಆಸ್ಪತ್ರೆಯಲ್ಲಿ ನಾಗೇಂದ್ರ ಅವರನ್ನು ಭೇಟಿ ಮಾಡಿದ ಸಚಿವ ಜಮೀರ್‌ ಅಹಮದ್‌ ಖಾನ್‌ ಸದನಕ್ಕೆ ಆಗಮಿಸಿ ಸರ್ಕಾರದ ಪರ ಮತ ಚಲಾಯಿಸುವಂತೆ ಮನವೊಲಿಸುವ ಕಸರತ್ತು ನಡೆಸಿದರು. ಬಿ.ನಾಗೇಂದ್ರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಆದರೆ ಸದನಕ್ಕೆ ಆಗಮಿಸುವ ಕುರಿತು ಅವರ ಮನಸ್ಸಿನಲ್ಲಿ ಏನಿದೆ ಎಂಬುದು ತಿಳಿದುಬಂದಿಲ್ಲ. ಕಾಂಗ್ರೆಸ್‌ ವತಿಯಿಂದ ಎಲ್ಲಾ ಪ್ರಯತ್ನ ನಡೆಸಿದ್ದು, ಸದನಕ್ಕೆ ಹಾಜರಾಗುವ ವಿಶ್ವಾಸವಿದೆ ಎಂದು ಕಾಂಗ್ರೆಸ್‌ ನಾಯಕರು ಹೇಳಿದ್ದಾರೆ.