ಯಲ್ಲಾಪುರ[ಜು.16]: ರಾಜೀನಾಮೆ ನೀಡಿರುವ ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಶಿವರಾಮ ಹೆಬ್ಬಾರ್‌ ಅವರು ಫೇ​ಸ್‌ಬುಕ್‌ನಲ್ಲಿ ಕ್ಷೇತ್ರದ ಮತದಾರರಿಗೆ ಬಹಿರಂಗ ಪತ್ರ ಬರೆದು ಕ್ಷಮೆಯಾಚಿಸಿದ್ದಾರೆ. ಆದರೆ, ಈ ಪತ್ರಕ್ಕೆ ಫೇಸ್‌ಬುಕ್‌ನಲ್ಲಿ ಕೆಲವರು ವಿರೋಧ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಬೆಂಬಲಿಸಿದ್ದಾರೆ.

ಪತ್ರದಲ್ಲೇನಿದೆ?:

‘ನನ್ನ ಅನಿವಾರ್ಯತೆ ಬಗ್ಗೆ ನಿಮ್ಮಲ್ಲಿ ಹಂಚಿಕೊಳ್ಳಲು ಬಯಸುತ್ತೇನೆ. ಅಭಿವೃದ್ಧಿಯನ್ನೇ ಮಾನದಂಡವಾಗಿರಿಸಿಕೊಂಡು 2ನೇ ಬಾರಿಗೆ ಶಾಸಕನಾಗಿ ಆಯ್ಕೆಯಾದ ನಾನು, ಈ ಮೈತ್ರಿ ಸರ್ಕಾರದಲ್ಲಿ ತೀವ್ರ ಪ್ರಯತ್ನದ ಹೊರತಾಗಿಯೂ, ನನ್ನ ಕ್ಷೇತ್ರಕ್ಕೆ ಯಾವ ಹೊಸ ಯೋಜನೆಗಳನ್ನೂ ತರುವಲ್ಲಿ ಯಶಸ್ಸು ಕಾಣಲಿಲ್ಲ. ಸರ್ಕಾರದ ತಾರತಮ್ಯ ನೀತಿ ಅನುಸರಿಸಿದರು. ಜಿಲ್ಲಾ ಉಸ್ತುವಾರಿ ಸಚಿವರು ಕ್ಷೇತ್ರದ ಸಮಸ್ಯೆ ಕೇಳುವ ಕನಿಷ್ಠ ಕಾಳಜಿ ತೋರಲಿಲ್ಲ. ಯಾವುದೇ ಹಣ, ಆಸೆ ಆಮಿಷಗಳಿಗೆ ನನ್ನ ನೈತಿಕತೆ ಮಾರಿಕೊಂಡಿಲ್ಲ. ಅದರ ಅವಶ್ಯಕತೆಯೂ ನನಗಿಲ್ಲ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮೈತ್ರಿ ಸರ್ಕಾರದಲ್ಲಿ ದಿನಂಪ್ರತಿ ಎರಡೂ ಪಕ್ಷಗಳ ನಾಯಕರಲ್ಲಿ ಕಚ್ಚಾಟ ನಡೆಯುತ್ತಿದೆ. ಯಾವುದೇ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ. ಹೀಗಾಗಿ ಕ್ಷೇತ್ರದ ಹಿತಾಸಕ್ತಿಗಾಗಿ ರಾಜೀನಾಮೆ ಕೊಟ್ಟು, ಮತ್ತೆ ಜನರ ಬಳಿ ಹೋಗುವ ಗಟ್ಟಿಯಾದ ನಿರ್ಧಾರ ಮಾಡಿದ್ದೇನೆ. ಆದರೆ, ಇನ್ನೂ ಪಕ್ಷದಲ್ಲಿಯೇ ಇದ್ದೇನೆ. ನಾನು ಎಲ್ಲೇ ಇರಲಿ, ಎಲ್ಲ ವರ್ಗದ ಜನರು ಹಾಗೂ ನನ್ನ ಕಾರ್ಯಕರ್ತರನ್ನು ವಿಶ್ವಾಸದಿಂದ ನಡೆಸಿಕೊಂಡು ಹೋಗುತ್ತೇನೆ’ ಎಂದು ತಿಳಿಸಿದ್ದಾರೆ.