ಬೆಂಗಳೂರು [ಜು.17]:  ಮೈತ್ರಿ ಸರ್ಕಾರದ ಅಳಿವು-ಉಳಿವು ನಿರ್ಧಾರವಾಗಲಿರುವ ಗುರುವಾರ ವಿಶ್ವಾಸಮತ ಸಾಬೀತುಪಡಿಸಿ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್‌-ಜೆಡಿಎಸ್‌ ಪಕ್ಷಗಳು ಕೊನೆಯ ಅಸ್ತ್ರವಾಗಿ 15 ಜನ ಅತೃಪ್ತ ಶಾಸಕರೂ ಸೇರಿದಂತೆ ಎಲ್ಲಾ ಶಾಸಕರಿಗೂ ಸದನಕ್ಕೆ ಹಾಜರಾಗಿ ಸರ್ಕಾರದ ಪರ ಕಡ್ಡಾಯವಾಗಿ ಮತಚಲಾಯಿಸಬೇಕು, ತಪ್ಪಿದರೆ ಶಾಸಕ ಸ್ಥಾನದಿಂದ ಅನರ್ಹಗೊಳಿಸುವುದಾಗಿ ಮಂಗಳವಾರ ಮತ್ತೊಮ್ಮೆ ವಿಪ್‌ ಜಾರಿಗೊಳಿಸಿವೆ.

ರಾಜೀನಾಮೆ ನೀಡಿ ಕಳೆದ 10 ದಿನಗಳಿಂದ ಪಕ್ಷದ ನಾಯಕರ ಕೈಗೂ ಸಿಗದೆ ಮುಂಬೈ ಹೋಟೆಲ್‌ನಲ್ಲಿ ಠಿಕಾಣಿ ಹೂಡಿರುವ ಕಾಂಗ್ರೆಸ್‌-ಜೆಡಿಎಸ್‌ನ ಎಲ್ಲಾ 14 ಅತೃಪ್ತ ಶಾಸಕರು ಹಾಗೂ ಕಾಂಗ್ರೆಸ್‌ ಸಹ ಸದಸ್ಯ ಆರ್‌.ಶಂಕರ್‌ ಅವರಿಗೆ ವಿಪ್‌ ಜಾರಿಗೊಳಿಸಲಾಗಿದೆ. ಕಾಂಗ್ರೆಸ್‌ನ ಅತೃಪ್ತರು ಹಾಗೂ ಶಾಸಕರಿಗೆ ಆಡಳಿತ ಪಕ್ಷದ ಮುಖ್ಯ ಸಚೇತಕ ಗಣೇಶ್‌ ಹುಕ್ಕೇರಿ ವಿಪ್‌ ಜಾರಿ ಮಾಡಿದ್ದರೆ, ಜೆಡಿಎಸ್‌ನ ಅತೃಪ್ತರು ಹಾಗೂ ಶಾಸಕರಿಗೆ ಸಭಾ ನಾಯಕರಾಗಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಹೆಸರಿನಲ್ಲಿ ವಿಪ್‌ ಜಾರಿ ಮಾಡಲಾಗಿದೆ.

ಕಾಂಗ್ರೆಸ್‌ನ ಅತೃಪ್ತ ಶಾಸಕರಾದ ರಮೇಶ್‌ ಜಾರಕಿಹೊಳಿ, ಬಿ.ಸಿ.ಪಾಟೀಲ್‌, ಮುನಿರತ್ನ, ಬೈರತಿ ಬಸವರಾಜು, ಮಹೇಶ್‌ ಕುಮಟಳ್ಳಿ, ಪ್ರತಾಪ್‌ಗೌಡ ಪಾಟೀಲ್‌, ಶಿವರಾಂ ಹೆಬ್ಬಾರ್‌, ಎಸ್‌.ಟಿ.ಸೋಮಶೇಖರ್‌, ಡಾ.ಕೆ.ಸುಧಾಕರ್‌, ಎಂ.ಟಿ.ಬಿ.ನಾಗರಾಜ್‌, ರಾಮಲಿಂಗಾರೆಡ್ಡಿ, ಆರ್‌. ರೋಷನ್‌ ಬೇಗ್‌, ಕಾಂಗ್ರೆಸ್‌ ಸಹ ಸದಸ್ಯ ಆರ್‌.ಶಂಕರ್‌, ಜೆಡಿಎಸ್‌ ಅತೃಪ್ತ ಶಾಸಕರಾದ ಎಚ್‌.ವಿಶ್ವನಾಥ್‌, ನಾರಾಯಣಗೌಡ ಮತ್ತು ಕೆ.ಗೋಪಾಲಯ್ಯ ಅವರಿಗೆ ವಿಪ್‌ ಜಾರಿ ಮಾಡಿ, ವಿಪ್‌ ಅನ್ನು ಆಯಾ ಶಾಸಕರ ಕಚೇರಿ, ಮನೆ ಬಾಗಿಲಿಗೆ ಅಂಟಿಸಲಾಗಿದೆ. ಪಕ್ಷದ ಹಿಡಿತದಲ್ಲಿದ್ದು ರೆಸಾರ್ಟ್‌ಗಳಲ್ಲಿ ವಾಸ್ತವ್ಯವಿರುವ ಮೈತ್ರಿ ಕೂಟದ ಇತರೆ ಎಲ್ಲ ಶಾಸಕರಿಗೂ ವಿಪ್‌ ಜಾರಿಗೊಳಿಸಲಾಗಿದೆ.

ಜು.18ರ ಗುರುವಾರ ನಡೆಯಲಿರುವ ರಾಜ್ಯ ವಿಧಾನಸಭೆಯ ಅಧಿವೇಶನದಲ್ಲಿ ಶಾಸಕರಿಗೆ ಕಡ್ಡಾಯವಾಗಿ ಸದನಕ್ಕೆ ಹಾಜರಾಗಿ ಸರ್ಕಾರದ ಪರ ಕಡ್ಡಾಯವಾಗಿ ಮತ ಚಲಾಯಿಸಬೇಕು. ಒಂದು ವೇಳೆ ಸದನಕ್ಕೆ ತಾವು ಹಾಜರಾಗದಿದ್ದಲ್ಲಿ ಅಥವಾ ಸರ್ಕಾರದ ಪರವಾಗಿ ಮತ ಚಲಾಯಿಸದೇ ಇದ್ದಲ್ಲಿ, ತಮ್ಮನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಭಾರತೀಯ ಸಂವಿಧಾನದ ಅನುಚ್ಛೇದ-10 ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ವಿಪ್‌ನಲ್ಲಿ ಎಲ್ಲ ಶಾಸಕರಿಗೆ ಸ್ಪಷ್ಟಸೂಚನೆ ನೀಡಲಾಗಿದೆ.