ವಿಧಾನಸಭೆ [ಜು.20] :  ‘ಸರ್ಕಾರ ರಚನೆ ಬಳಿಕ ನೀವು ಎಷ್ಟುದಿನ ಇರುತ್ತೀರಿ ನೋಡುತ್ತೇನೆ. ನಿಮಗೀಗ ತಾತ್ಕಾಲಿಕ ಸಂತೋಷ ಆಗಿರಬಹುದು. ಆದರೆ ಮುಂದೆ ನಿಮಗೂ ಕಾದಿದೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಪ್ರತಿಪಕ್ಷ ಬಿಜೆಪಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಶುಕ್ರವಾರ ವಿಶ್ವಾಸ ಮತಯಾಚನೆ ನಿಲುವಳಿ ಮೇಲಿನ ಚರ್ಚೆ ಮುಂದುವರೆಸಿ ಮಾತನಾಡಿದ ಅವರು, ಎಲ್ಲವೂ ವಿಧಿಯಾಟ. ದೇವರು ತಾನು ಕೊಟ್ಟಪದವಿಯನ್ನು ಯಾವಾಗ ವಾಪಸ್‌ ತೆಗೆದುಕೊಳ್ಳಬೇಕೋ ಆಗ ತೆಗೆದುಕೊಳ್ಳುತ್ತಾನೆ. ಅಧಿಕಾರ ಹೋಗಲಿದೆ ಎಂಬ ಯಾವುದೇ ಆತಂಕವೂ ನನಗಿಲ್ಲ. ನಮ್ಮ ಸರ್ಕಾರ ಬಹುಮತ ಕಳೆದುಕೊಂಡರೆ ನೀವು ಸರ್ಕಾರ ರಚನೆ ಮಾಡಿದ ಬಳಿಕ ಎಷ್ಟುದಿನ ಇರುತ್ತೀರಿ ಎಂಬುದನ್ನು ನೋಡುತ್ತೇನೆ ಎಂದು ತಿರುಗೇಟು ನೀಡಿದರು.

ಇದೇ ವೇಳೆ ಬಿಜೆಪಿಯೊಂದಿಗೆ ಸರ್ಕಾರ ರಚನೆ ಮಾಡಿದ ನಡೆದ ಘಟನೆಗಳ ಇತಿಹಾಸವನ್ನು ಕೆದಕಿ ತಮ್ಮ ಭಾಷಣದುದ್ದಕ್ಕೂ ಬಿಜೆಪಿಗೆ ಚಾಟಿ ಬೀಸುತ್ತಲೇ ಮುಂದೆ ಬಿಜೆಪಿ ಸರ್ಕಾರ ರಚಿಸಿದಲ್ಲಿ ಅದಕ್ಕೂ ಕಾಟ ತಪ್ಪಿದ್ದಲ್ಲ ಎಂಬ ಮಾತನ್ನು ಪ್ರಸ್ತಾಪಿಸಿದರು.

ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಯಾರ ಬಳಿಯೂ ಅಂಗಲಾಚುವುದಿಲ್ಲ. ಅಧಿಕಾರ ಎಂದಿಗೂ ಶಾಶ್ವತವಲ್ಲ, ಅದಕ್ಕಾಗಿ ಅಂಟಿಕೊಂಡು ಕೂರುವ ಜಾಯಮಾನ ನಮ್ಮದಲ್ಲ. ನಮ್ಮ ಕುಟುಂಬ ಪಂಚಾಯ್ತಿಯಿಂದ ಪ್ರಧಾನಿ ಹುದ್ದೆವರೆಗೂ ಅಧಿಕಾರ ನೋಡಿದೆ. ಸರ್ಕಾರ ರಚಿಸಲು ತುದಿಗಾಲಲ್ಲಿ ಬಿಜೆಪಿ ನಿಂತಿದೆ. ಬಹುಮತ ಇರುವ ವಿಶ್ವಾಸ ಇದ್ದರೆ ಆತಂಕಪಡುವ ಅಗತ್ಯವಿಲ್ಲ. ಒಂದೇ ದಿನದಲ್ಲಿ ವಿಶ್ವಾಸಮತ ಮುಗಿಸಬೇಕು ಎಂಬ ಆತುರ ಏಕೆ? ಲೋಕಸಭೆಯಲ್ಲಿ 10 ದಿನ ನಡೆದ ಉದಾಹರಣೆಗಳಿವೆ ಎಂದು ಹೇಳಿದರು.

ಸದ್ಯಕ್ಕೆ ಸರ್ಕಾರದ ಪತನಕ್ಕೆ ಮಾಡುತ್ತಿರುವ ಪ್ರಯತ್ನ ಬಿಜೆಪಿ ಸದಸ್ಯರಿಗೆ ಸಂತಸ ತರಬಹುದು. ಆದರೆ, ಮುಂದಿನ ದಿನದಲ್ಲಿ ಅದು ಬಹಳ ದಿನ ಇರುವುದಿಲ್ಲ. ಸರ್ಕಾರದ ವಿರುದ್ಧ ನಾನಾ ಟೀಕೆಗಳನ್ನು ಮಾಡಿರುವ ಪ್ರತಿಪಕ್ಷ ಬಿಜೆಪಿಯು ಸರ್ಕಾರದ ವೈಫಲ್ಯಗಳನ್ನು ಹೇಳಬೇಕಾಗಿತ್ತು. ಸರ್ಕಾರದ ಪಾಪದ ಕೆಲಸದ ಮೇಲೆ ಬೆಳಕು ಚೆಲ್ಲಬೇಕಿತ್ತು. ಯಾವುದನ್ನೂ ಚರ್ಚೆ ಮಾಡದೆ ಬಹುಮತ ಸಾಬೀತಿಗೆ ಒತ್ತಾಯ ಮಾಡಲಾಗುತ್ತಿದೆ. ರಾಜಕೀಯ ಆಟಗಳನ್ನು ನನಗಿಂತ ಹೆಚ್ಚು ಪ್ರತಿಪಕ್ಷದ ನಾಯಕರು ಆಡಿದ್ದಾರೆ ಎಂದು ಪರೋಕ್ಷವಾಗಿ ಪ್ರತಿಪಕ್ಷದ ನಾಯಕ ಯಡಿಯೂರಪ್ಪ ಅವರ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹುಮತ ಬಂದಿರಬಹುದು. ಬಿಜೆಪಿಗೆ ಮಾತ್ರ ಅಧಿಕ ಸ್ಥಾನ ಬಂದಿಲ್ಲ. ಈ ಹಿಂದೆ 1984ರಲ್ಲಿ ಆಗಿನ ಪ್ರಧಾನಿ ರಾಜೀವ್‌ ಗಾಂಧಿ ಅವರೂ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿದ್ದರು. ಆದರೆ, ಅವರದೇ ಸಂಪುಟದ ಸಚಿವರೊಬ್ಬರು ಬೊಫೋರ್ಸ್‌ ಹಗರಣದ ಆರೋಪದ ಹೊರಿಸಿದರು. ನಂತರ ಏನಾಯಿತು ಎಂಬುದು ಇತಿಹಾಸ. ರಾಜಕೀಯದಲ್ಲಿ ಎಲ್ಲವೂ ತಾತ್ಕಾಲಿಕ ಎಂದು ಮುಖ್ಯಮಂತ್ರಿಗಳು ತಿಳಿಸಿದರು.