Asianet Suvarna News Asianet Suvarna News

ಸರ್ಕಾರ ಬೀಳಿಸುವ ಪಿತಾಮಹ ದೇವೇಗೌಡ, ನೈತಿಕತೆ ಈಗ ಅರಿವಾಯ್ತಾ?: ಬಿಎಸ್‌ವೈ

ನೈತಿಕತೆ ಈಗ ಅರಿವಾಯ್ತಾ? ಬಿಎಸ್‌ವೈ| ಕುರ್ಚಿಗೆ ಅಂಟಿಕೊಳ್ಳದಿದ್ದ ಮೇಲೆ ಸಮಯ ವ್ಯರ್ಥವೇಕೆ?| ಸರ್ಕಾರ ಬೀಳಿಸುವ ಪಿತಾಮಹ ದೇವೇಗೌಡ: ಬಿಎಸ್‌ವೈ| ಕುರ್ಚಿ ಕಳೆದುಕೊಳ್ಳುವ ಭೀತಿಯಲ್ಲಿ ಕುಮಾರಸ್ವಾಮಿಗೆ ರಾಜಕೀಯ ನೈತಿಕತೆ ಬಗ್ಗೆ ಅರಿವು| ಕಾಂಗ್ರೆಸ್‌ ಜತೆ ಸರ್ಕಾರ ರಚಿಸುವಾಗ ನೈತಿಕತೆ ಎಲ್ಲಿಹೋಗಿತ್ತು?

karnataka Political Crisis BS Yeddyurappa Slams HD Devegowda
Author
Bangalore, First Published Jul 22, 2019, 8:27 AM IST

ಬೆಂಗಳೂರು[ಜು.22]: ಕುರ್ಚಿ ಕಳೆದುಕೊಳ್ಳುವುದು ಖಾತ್ರಿಯಾಗಿರುವುದರಿಂದ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರಿಗೆ ಈಗ ರಾಜಕೀಯ ನೈತಿಕತೆ ಬಗ್ಗೆ ಅರಿವಾಗಿದೆ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್‌. ಯಡಿಯೂರಪ್ಪ ಟೀಕಿಸಿದ್ದಾರೆ.

ಚುನಾವಣಾ ಪೂರ್ವದಲ್ಲಿ ಪರಸ್ಪರ ಕಚ್ಚಾಡಿಕೊಂಡು ಒಬ್ಬರಿಗೊಬ್ಬರು ಬಾಯಿಗೆ ಬಂದಂತೆ ಮಾತನಾಡಿದ್ದ ಕುಮಾರಸ್ವಾಮಿ ಅವರಿಗೆ ಅಧಿಕಾರ ದಾಹದಿಂದ ಕಾಂಗ್ರೆಸ್‌ ಜೊತೆಗೂಡಿ ಸರ್ಕಾರ ರಚಿಸಿದ್ದಾಗ ಎಲ್ಲಿ ಹೋಗಿತ್ತು ನಿಮ್ಮ ನೈತಿಕತೆ ಎಂದು ಪ್ರಶ್ನಿಸಿದ್ದಾರೆ.

'ಬಿಜೆಪಿ ಅನೈತಿಕ ರಾಜಕೀಯ, ಬಣ್ಣ ಬಯಲು ಮಾಡಲು ಸದನದಲ್ಲಿ ವಿಸ್ತೃತ ಚರ್ಚೆ'

ಈ ಕುರಿತು ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿರುವ ಅವರು, ರಾಷ್ಟ್ರೀಯ ಪಕ್ಷವಾಗಿ ಬಿಜೆಪಿ 105 ಸ್ಥಾನಗಳನ್ನು ಗೆದ್ದಿದ್ದರೂ ವಿರೋಧ ಪಕ್ಷದಲ್ಲಿದ್ದು ಜನಪರ ಕಾರ್ಯದಲ್ಲಿ ನಿರತವಾಗಿದೆ. ಆದರೆ, ರಾಜ್ಯದ ರಾಜಕೀಯ ಇತಿಹಾಸದಲ್ಲಿಯೇ ಕುತಂತ್ರ ಮತ್ತು ಹಣ ಬಲದಿಂದ ಸರ್ಕಾರವನ್ನು ಅಸ್ಥಿರಗೊಳಿಸಿ ಪ್ರಜಾಪ್ರಭುತ್ವ ಬುಡಮೇಲು ಮಾಡಿದ ಪಿತಾಮಹ ನಿಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಅವರಾಗಿರುವುದು ಇಡೀ ಜಗತ್ತಿಗೇ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

1994ರಲ್ಲಿ ಎಚ್‌.ಡಿ. ದೇವೇಗೌಡ ಅವರಿಗೆ ರಾಜಕೀಯ ಪುನರ್ಜನ್ಮ ಕೊಟ್ಟರಾಮಕೃಷ್ಣ ಹೆಗಡೆ ಅವರಿಗೆ ವಿಧಾನಸೌಧದಲ್ಲಿ ಚಪ್ಪಲಿಯಿಂದ ಹೊಡೆಸಿ ವಾಮಮಾರ್ಗದಿಂದ ಅಧಿಕಾರ ಪಡೆದುಕೊಂಡಿದ್ದು ಪ್ರಜಾಪ್ರಭುತ್ವದ ಅಣಕವಲ್ಲವೇ? ಈ ಹಿಂದೆ ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮೈನಿಂಗ್‌ ದೊರೆಯಿಂದ ಹಣ ಕೊಡಿಸಿ 19 ಶಾಸಕರನ್ನು ರಾಜಭವನಕ್ಕೆ ಕಳಿಸಿ ಗೋವಾ ರೆಸಾರ್ಟ್‌ನಲ್ಲಿ ಬಹಿರಂಗವಾಗಿಯೇ ಗುರುತಿಸಿಕೊಂಡಿದ್ದು ನೈತಿಕತೆಯೇ? ಕಾನೂನು ಬಾಹಿರವಾಗಿ ಅಧಿಕಾರ ಹಿಡಿಯಲು ಪ್ರಯತ್ನ ಮಾಡಿರುವುದನ್ನು ಮರೆತಿದ್ದೀರಾ ಎಂದು ಟೀಕಿಸಿದ್ದಾರೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಧಿಕಾರಕ್ಕೆ ಅಂಟಿಕೊಳ್ಳುವ ಉದ್ದೇಶ ಇಲ್ಲವೆಂದು ಹೇಳುತ್ತಾ ಕಳೆದ ಮೂರು ದಿನಗಳಿಂದ ಸದನದಲ್ಲಿ ಸಮಯ ಕಳೆಯುತ್ತಿರುವುದು ರಾಜ್ಯದ ಜನತೆಗೆ ತಿಳಿದಿದೆ. ನೀವು ಎಷ್ಟರಮಟ್ಟಿಗೆ ಕುರ್ಚಿಗೆ ಅಂಟಿಕೊಂಡಿದ್ದೀರಿ ಎನ್ನುವುದನ್ನು ಜಗಜ್ಜಾಹೀರು ಮಾಡಿದೆ. ತಮ್ಮ ದುರಾಡಳಿತ, ಸ್ವಜನ ಪಕ್ಷಪಾತ ಹಾಗೂ ಸ್ವಾರ್ಥದಿಂದ ತುಂಬಿದ ಆಡಳಿತವನ್ನು ನೋಡಿ ಶಾಸಕರು ಬೇಸರಗೊಂಡೇ ಹೊರಗೆ ಹೋಗಿದ್ದಾರೆ.

ಅವರನ್ನು ಮತ್ತೆ ಮರುಳು ಮಾಡಿ ವಾಪಸ್‌ ಕರೆತರಲು ಮೊಸಳೆ ಕಣ್ಣೀರು ಸುರಿಸುತ್ತಿರುವುದನ್ನು ಶಾಸಕರು ಹಾಗೂ ಜನತೆ ನಂಬುವುದಿಲ್ಲ. ಆದ್ದರಿಂದ ತಮಗೆ ನೈತಿಕತೆ ಇದ್ದರೆ ಬಹುಮತ ಕಳೆದುಕೊಂಡಿರುವ ಸರ್ಕಾರದಲ್ಲಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯುವುದು ಒಳ್ಳೆಯದು ಎಂದು ಯಡಿಯೂರಪ್ಪ ಅವರು ಸಲಹೆ ನೀಡಿದ್ದಾರೆ.

Follow Us:
Download App:
  • android
  • ios