ಬೆಂಗಳೂರು[ಜು.15]: ಸಮ್ಮಿಶ್ರ ಸರ್ಕಾರದ ಬಗ್ಗೆ ಅಸಮಾಧಾನಗೊಂಡು ಶಾಸಕ ಸ್ಥಾನಕ್ಕೆ ಸಾಮೂಹಿಕ ರಾಜೀನಾಮೆ ಸಲ್ಲಿಸಿರುವ ಹದಿಮೂರು ಮಂದಿ ಕಾಂಗ್ರೆಸ್‌ ಶಾಸಕರು ತಮ್ಮ ಕ್ಷೇತ್ರದ ಮತದಾರರಿಗೆ ಬಹಿರಂಗ ಪತ್ರ ಬರೆದಿದ್ದು, ತಮ್ಮನ್ನು ರಾಜೀನಾಮೆಯಂತಹ ಕಠಿಣ ನಿರ್ಧಾರಕ್ಕೆ ದೂಡಿದ ಪ್ರಮುಖ ಹನ್ನೆರಡು ಕಾರಣಗಳನ್ನು ಮತದಾರರ ಮುಂದೆ ತೆರೆದಿಟ್ಟಿದ್ದಾರೆ.

ಮತದಾರರಿಗೆ ನೀಡಿರುವ ನೀಡಿರುವ ಸ್ಪಷ್ಟನೆಯಲ್ಲಿ ಅತೃಪ್ತ ಶಾಸಕರು, ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾದ ಬಿಕ್ಕಟ್ಟು ಶುರುವಾಗಿದ್ದು ಬೆಳಗಾವಿ ಗ್ರಾಮಾಂತರ ಕ್ಷೇತ್ರದ ಶಾಸಕಿ ಲಕ್ಷ್ಮೇ ಹೆಬ್ಬಾಳ್ಕರ್‌ ಅವರಿಂದ ಎಂದು ಪರೋಕ್ಷವಾಗಿ ಆರೋಪ ಮಾಡಿದ್ದಾರೆ. ಜತೆಗೆ ತಮ್ಮ ಕ್ಷೇತ್ರದ ಸಮಸ್ಯೆಯನ್ನು ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಗಳು, ಪಕ್ಷದ ನಾಯಕರು ಯಾರೊಬ್ಬರೂ ಆಲಿಸಿಲ್ಲ. ಹೀಗಾಗಿ ಮನಸ್ಸಿಗೆ ನೋವಾಗಿ ಭಾರವಾದ ಮನಸ್ಸಿನಿಂದಲೇ ರಾಜೀನಾಮೆ ನೀಡಿದ್ದೇವೆ ಎಂದು ತಿಳಿಸಿದ್ದಾರೆ.

ಕಳೆದ ಒಂದು ವರ್ಷದಿಂದ ಸಮನ್ವಯ ಸಮಿತಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿ, ಇದೀಗ ಮನವೊಲಿಕೆ ಮಾಡಲು ಮುಂಚೂಣಿಯಲ್ಲಿರುವ ಡಿ.ಕೆ. ಶಿವಕುಮಾರ್‌ (ಡಿಕೆಎಸ್‌) ಆಗಲಿ ಒಂದೇ ಒಂದು ಬಾರಿಯೂ ಶಾಸಕರ ಕ್ಷೇತ್ರದ ಅಭಿವೃದ್ಧಿ ಮತ್ತು ಇನ್ನಿತರ ವಿಚಾರಗಳ ಬಗ್ಗೆ ಸೌಜನ್ಯಕ್ಕೂ ಶಾಸಕರನ್ನು ಕರೆದು ಮಾತನಾಡಿಲ್ಲ ಎಂದು ಪತ್ರದಲ್ಲಿ ಹೇಳಿದ್ದಾರೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಾಜೀನಾಮೆ ನೀಡಲು ಅತೃಪ್ತರು ನೀಡಿರುವ ಕಾರಣಗಳಿವು:

1. ಸಮ್ಮಿಶ್ರ ಸರ್ಕಾರದ ಬಿಕ್ಕಟ್ಟು ಪ್ರಾರಂಭ ಬೆಳಗಾವಿ ಜಿಲ್ಲೆಯ ಮಹಿಳಾ ಶಾಸಕಿಯಿಂದ ಇಲ್ಲಿಯವರೆಗೂ ಬಂದು ನಿಂತಿದೆ.

2. ಬೆಳಗಾವಿ ಜಿಲ್ಲೆ ಸಮಸ್ಯೆ ಬಗೆಹರಿಸಲು ಯಾವ ನಾಯಕರೂ ಕೂಡ ಪ್ರಯತ್ನ ಮಾಡಲಿಲ್ಲ. ಸಮನ್ವಯ ಸಮಿತಿ ಅಧ್ಯಕ್ಷರಾಗಲಿ, ಕೆಪಿಸಿಸಿ ಅಧ್ಯಕ್ಷರಾಗಲಿ, ಎಐಸಿಸಿ ಅಧ್ಯಕ್ಷರಾಗಲಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಗಲಿ ಪ್ರಯತ್ನ ಮಾಡಲಿಲ್ಲ. ಈ ಸಮಸ್ಯೆ ಹೆಮ್ಮರವಾಗಿ ಬೆಳೆದು ಸರ್ಕಾರವನ್ನು ಬಲಿಕೊಡುವ ಹಂತಕ್ಕೆ ಬಂದು ನಿಂತಿದೆ.

3. ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಪ್ರಭಾವಿ ಸಚಿವರ ಹಸ್ತಕ್ಷೇಪದಿಂದ ಇಡೀ ಜಿಲ್ಲೆಯ ನಾಯಕರು ಬೇಸತ್ತರು. ಇದು ಸಹ ಶಾಸಕರ ಅಸಮಾಧಾನಕ್ಕೆ ಕಾರಣವಾಯಿತು.

4. ಕಳೆದ ಒಂದು ವರ್ಷದಿಂದ ಕಾಂಗ್ರೆಸ್‌ ಶಾಸಕರಾದ ನಾವು ಸಮ್ಮಿಶ್ರ ಸರ್ಕಾರದ ಕಾರ್ಯವೈಖರಿ ಬಗ್ಗೆ ಸಮನ್ವಯ ಸಮಿತಿ ಅಧ್ಯಕ್ಷರು, ಉಪಮುಖ್ಯಮಂತ್ರಿ, ಕೆ.ಸಿ. ವೇಣುಗೋಪಾಲ್‌ ಸೇರಿದಂತೆ ಇನ್ನಿತರ ಹೈಕಮಾಂಡ್‌ ನಾಯಕರುಗಳಿಗೆ ಅನೇಕ ಬಾರಿ ನಮ್ಮ ಸಮಸ್ಯೆ ಪ್ರಸ್ತಾಪಿಸಿದರೂ ಯಾರೂ ಸ್ಪಂದಿಸಿಲ್ಲ.

5. ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳ ಕಚೇರಿಯಲ್ಲಿ ಶಾಸಕರುಗಳ ಪತ್ರಗಳಿಗೆ ಮಾನ್ಯತೆ ಸಿಗುತ್ತಿರಲಿಲ್ಲ.

6. ಸಮ್ಮಿಶ್ರ ಸರ್ಕಾರದಲ್ಲಿ ನಾವು ಒಂದು ವರ್ಷದಿಂದ ಶಾಸಕರಾಗಿ ಕಾರ್ಯನಿರ್ವಹಣೆ ಮಾಡುವ ಸಂದರ್ಭದಲ್ಲಿ ಪ್ರತಿ ಬಾರಿಯೂ ನಮ್ಮ ಪರಿಚಯವನ್ನು ಹೇಳಿಕೊಳ್ಳಬೇಕಾಗಿತ್ತು. ಅಂತಹ ಅನನುಭವಿ ಹಾಗೂ ಸ್ವಜಾತಿ ಬಾಂಧವ ಅಧಿಕಾರಿಗಳನ್ನು ನೇಮಿಸಿಕೊಂಡಿದ್ದರು. ಹೀಗಾಗಿ ನಮ್ಮ ಮನವಿಗೆ ಅವರು ಕಿವಿಗೊಡುತ್ತಿರಲಿಲ್ಲ.

7. ಎಚ್‌.ಡಿ. ರೇವಣ್ಣ ಹಾಗೂ ನಮ್ಮ ಪಕ್ಷದ ಪ್ರಭಾವಿ ಸಚಿವರೊಬ್ಬರ ಸ್ವ ಹಿತಾಸಕ್ತಿಯಿಂದ ಹಾಗೂ ಎಲ್ಲಾ ಇಲಾಖೆಗಳಲ್ಲಿ ಮಾಡುತ್ತಿದ್ದ ಹಸ್ತಕ್ಷೇಪದಿಂದ ಕೆಲಸಗಳಿಗೆ ಅಡಚಣೆ ಉಂಟಾಯಿತು.

8. ಕಳೆದ ಒಂದು ವರ್ಷದಿಂದ ಸಮನ್ವಯ ಸಮಿತಿ ಅಧ್ಯಕ್ಷರು ಹಾಗೂ ಉಪಮುಖ್ಯಮಂತ್ರಿ, ಇಂದು ಮನವೊಲಿಕೆ ಮಾಡಲು ಮುಂಚೂಣಿಯಲ್ಲಿರುವ ಡಿ.ಕೆ. ಶಿವಕುಮಾರ್‌ (ಡಿಕೆಎಸ್‌) ಆಗಲಿ ಒಂದೇ ಒಂದು ಬಾರಿಯೂ ಶಾಸಕರ ಕ್ಷೇತ್ರದ ಅಭಿವೃದ್ಧಿ ಮತ್ತು ಇನ್ನಿತರ ವಿಚಾರಗಳ ಬಗ್ಗೆ ಸೌಜನ್ಯಕ್ಕೂ ಶಾಸಕರನ್ನು ಕರೆದು ಮಾತನಾಡಿಲ್ಲ.

9. ನಾವು ಅನೇಕ ಬಾರಿ ಮುಖ್ಯಮಂತ್ರಿಗಳ ಗಮನಕ್ಕೆ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಹೇಳಿದರೂ ಪ್ರಯೋಜನವಾಗಲಿಲ್ಲ.

10. ಸರ್ಕಾರದಲ್ಲಿ ನಮ್ಮ ಪಕ್ಷದ ಉಪ ಮುಖ್ಯಮಂತ್ರಿ ಹತ್ತಿರ ಕೂಡ ಹಲವು ವಿಚಾರ ಪ್ರಸ್ತಾಪ ಮಾಡಿದರೂ ಅವರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

11. ಕೆಪಿಸಿಸಿ ಅಧ್ಯಕ್ಷರು ಕೂಡ ನಮ್ಮ ಮನವಿಗೆ ಕಿವಿಗೊಡಲಿಲ್ಲ. ಅವರ ಕಾರ್ಯವೈಖರಿ ಜಿಲ್ಲಾಧ್ಯಕ್ಷರ ರೀತಿ ಇತ್ತು.

12. ಈ ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್‌ಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಯಿತು.

ಈ ಎಲ್ಲಾ ಕಾರಣಗಳ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ನಾವು ಅತ್ಯಂತ ಭಾರವಾದ ಹೃದಯದಿಂದ ಎಲ್ಲಾ ಸಾಧÜಕ- ಬಾಧಕ ಪರಿಶೀಲಿಸಿ ನಮಗೆ ಮತ ನೀಡಿದ ಕ್ಷೇತ್ರದ ಮತದಾರರ ಹಿತದೃಷ್ಟಿಯಿಂದ ಹಾಗೂ ಕ್ಷೇತ್ರದ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬಂದು ಶಾಸಕ ಸ್ಥಾನಕ್ಕೆ ಅನಿವಾರ್ಯವಾಗಿ ರಾಜೀನಾಮೆ ನೀಡಿದ್ದೇವೆ ಎಂದು ಅವರು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಬಹಿರಂಗ ಪತ್ರದಲ್ಲಿ ತಿಳಿಸಿದ್ದಾರೆ.