ಮುದ್ದೇಬಿಹಾಳ[ಜೂ.24]: ರಾಜ್ಯದ ಎಲ್ಲ ಠಾಣೆಗಳಲ್ಲಿ ಪೊಲೀಸರ ಕೊರತೆ ಗಂಭೀರವಾಗಿದ್ದು, ಇದನ್ನು ನೀಗಿಸಲು ರಾಜ್ಯದಲ್ಲಿ ಶೀಘ್ರ 1 ಲಕ್ಷ ಪೊಲೀಸರನ್ನು ಹಂತ ಹಂತವಾಗಿ ಭರ್ತಿ ಮಾಡಿಕೊಳ್ಳಲಾಗುತ್ತದೆ. ಇನ್ನು ಹದಿನೈದರಿಂದ ಇಪ್ಪತ್ತು ದಿನಗಳಲ್ಲಿ ಪೊಲೀಸರಿಗೆ ಸಿಹಿ ಸುದ್ದಿ ಸಿಗುತ್ತದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ ಅವರು ತಿಳಿಸಿದ್ದಾರೆ.

ಭಾನುವಾರ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಪಟ್ಟಣದಲ್ಲಿ ತಮ್ಮನ್ನು ಭೇಟಿಯಾಗಿದ್ದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತರೆ ಸರ್ಕಾರಿ ಇಲಾಖೆಗಳ ಸಮಾನಾಂತರ ಹುದ್ದೆ ಸೌಲಭ್ಯ ಪೊಲೀಸರ ಪ್ರಮುಖ ಬೇಡಿಕೆಯಾಗಿದೆ. ಔರಾದ್ಕರ್‌ ಸಮಿತಿ ಕೂಡ ಇದರ ಅವಶ್ಯಕತೆ ಬಗ್ಗೆಯೇ ಹೇಳಿದೆ. ಪೊಲೀಸರ ಬೇಡಿಕೆ ಈಡೇರಿಸಲು 830 ಕೋಟಿ ರೂಪಾಯಿ ಆರ್ಥಿಕ ಹೊರೆ ಆಗುತ್ತದೆ. ಈಗಾಗಲೇ ಔರಾದ್ಕರ್‌ ಸಮಿತಿ ವರದಿ ಅನುಷ್ಠಾನ ಸಾಧಕ, ಬಾಧಕ ಪರಿಗಣಿಸಿ ಜಾರಿಗೊಳಿಸಲು ಸಿಎಂ 15 ದಿನ ಕಾಲಾವಕಾಶ ನೀಡಿದ್ದಾರೆ. ಗೃಹ ಮತ್ತು ಹಣಕಾಸು ಇಲಾಖೆ ನಡುವೆ ಈ ಬಗ್ಗೆ ಚರ್ಚೆ ನಡೆದಿದ್ದು 8-10 ದಿನಗಳಲ್ಲಿ ಅಂತಿಮಗೊಳ್ಳುತ್ತದೆ ಎಂದು ತಿಳಿಸಿದರು.

ಬ್ರಿಟಿಷರ, ರಾಜ ಮಹಾರಾಜರ ಕಾಲದಲ್ಲಿದ್ದ ಪೊಲೀಸ್‌ ಬ್ಯಾಂಡ್‌ ಸೇವೆ ನಶಿಸಿಹೋಗತೊಡಗಿದೆ. ಇದನ್ನು ಉಳಿಸಿ ಪ್ರೋತ್ಸಾಹಿಸಲು ಮತ್ತು ಬ್ಯಾಂಡ್‌ಗೆ ಉತ್ತೇಜನ ಕೊಡಲು ಅಲೋವೆನ್ಸ್‌ ಕೊಡುವ ಚಿಂತನೆ ನಡೆದಿದೆ. ಈ ಬಗ್ಗೆ ಮುಖ್ಯಮಂತ್ರಿ ಅವರಿಗೆ ಮನವರಿಕೆ ಮಾಡಿಕೊಡಲಾಗಿದೆ ಎಂದರು.

ಸಿಸಿಟಿವಿ ಅಳವಡಿಕೆಗೆ 4 ನಗರ ಸೇರ್ಪಡೆ:

ರಾಜ್ಯ ಮತ್ತು ಕೇಂದ್ರ ಸರ್ಕಾರದ ಸ್ಕೇರಸಿಟಿ ಯೋಜನೆ ಅಡಿ ಈಗಾಗಲೇ ಬೆಂಗಳೂರಲ್ಲಿ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಪ್ರಗತಿಯಲ್ಲಿದೆ. ಮೈಸೂರು, ಹುಬ್ಬಳ್ಳಿ, ಧಾರವಾಡ, ಮಂಗಳೂರು ನಗರಗಳನ್ನು ಕೂಡ ಈ ಯೋಜನೆ ಅಡಿ ಸೇರಿಸಿ ಅಲ್ಲೂ ಸಿಸಿ ಕ್ಯಾಮೆರಾ ಅಳವಡಿಸಲು ಪ್ರಸ್ತಾವನೆ ಕಳಿಸಲಾಗಿದೆ ಎಂದು ಮಾಹಿತಿ ನೀಡಿದರು.